ಎಚ್.ಡಿ.ಕೋಟೆ: ಕುಡಿಯುವ ನೀರು ಸರಬರಾಜಿಗಾಗಿ ಅಳವಡಿಸಿದ್ದ ಮೋಟಾರ್ ಕೆಟ್ಟು ಸಂಬಂಧಪಟ್ಟವರು ದುರಸ್ತಿಗೊಳಿಸದ ಪರಿಣಾಮ ಇಲ್ಲಿನ ಜನರಿಗೆ ಕುಡಿಯುವ ನೀರಿನ ಬವಣೆ ಹೇಳತೀರದಾಗಿದ್ದು, ನೀರಿಗಾಗಿ ಇಲ್ಲಿನ ನಿವಾಸಿಗಳೇ ಗುಂಡಿ ತೆಗೆದು ಮಣ್ಣು ಮಿಶ್ರಿತ ಕಲುಷಿತ ನೀರನ್ನು ಕುಡಿಯಲು ಬಳಸುತ್ತಿದ್ದು, ಜನರು ಹಾಗೂ ಇಲ್ಲಿನ ಮಕ್ಕಳೂ ಈಗಾಗಲೇ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಎಚ್.ಡಿ.ಕೋಟೆ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಹೆಚ್ಚಾಗಿ ದಲಿತರೇ ವಾಸಿಸುತ್ತಿರುವ ತಾಲೂಕಿನ ಹೈರಿಗೆ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಿದ್ದಲಿಂಗಪುರ ಗ್ರಾಮದ ದುಸ್ಥಿತಿ. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಜನರು ಗುಂಡಿ ತೆಗೆದುಕೊಂಡು ಬರುವ ನೀರನ್ನು ಬಳಸುತ್ತಿರು ಗ್ರಾಮಸ್ಥರು.
ಸಿದ್ದಲಿಂಗಪುರ ಗ್ರಾಮದಲ್ಲಿ 30ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದು, ಈ ಗ್ರಾಮಕ್ಕೆ ಹೈರಿಗೆ ಗ್ರಾಪಂ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಧಿಕಾರಿಗಳು ಹಲವು ವರ್ಷಗಳ ಹಿಂದೆ ಇಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸುತ್ತಿದ್ದರು.
ಆದರೆ ಇಲ್ಲಿಗೆ ಕುಡಿಯುವ ನೀರು ಪೂರೈಸಲು ಅಳವಡಿಸಿದ್ದ ಮೋಟಾರ್ ಕೆಟ್ಟು 20 ದಿನಗಳೇ ಕಳೆದರೂ ಈ ಬಗ್ಗೆ ಜನರು ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅನೇಕ ಬಾರಿ ತಿಳಿಸಿಲಾದರೂ ಮೋಟರ್ ದುರಸ್ತಿಗೊಳಿಸದ ಪರಿಣಾಮ ಹಾಗೂ ಇಲ್ಲಿನ ದಲಿತ ಕುಟುಂಬದ ಜನರು ಕುಡಿಯುವ ನೀರಿಗಾಗಿ ಬಹಳ ದೂರ ಇರುವ ಕೆರೆ ಕಟ್ಟೆಗಳಿಗೆ ಹೋಗಬೇಕಾದ ಸ್ಥಿತಿ ಇತ್ತು.
ಗ್ರಾಮದಲ್ಲಿ ದಿನ ಕಳೆದಂತೆ ನೀರಿನ ಬವಣೆ ಹೆಚ್ಚಾದ್ದರಿಂದ ಇಲ್ಲಿನ ಜನರೇ ಗ್ರಾಮದ ಮುಂಭಾಗದ ನೀರಿನ ವಸ್ತಿ ಇರುವ ಜಾಗದಲ್ಲಿ ಗ್ರಾಮಸ್ಥರು ಗುಂಡಿ ತೆಗೆದು ಇಲ್ಲಿ ಸಿಗುತ್ತಿರುವ ವಸ್ತಿ ನೀರನ್ನೇ ಕುಡಿಯಲು, ಅಡುಗೆ ತಯಾರು ಮಾಡಲು ಬಳಸುತ್ತಿದ್ದಾರೆ. ಮೊದಲೇ ನೀರು ಮಣ್ಣು ಮಿಶ್ರಿತ ಕಲ್ಮಷವಾಗಿದ್ದು, ಕುಡಿಯಲು ಅಡುಗೆ ಮಾಡಲು ಯೋಗ್ಯವಲ್ಲದಿದ್ದರೂ ಗ್ರಾಮದಲ್ಲಿ ತಲೆದೂರಿರುವ ನೀರಿನ ಬವಣೆಯಿಂದಾಗಿ ಈ ಕಲುಷಿತ ನೀರನ್ನೇ ಜನರು ಸೇವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಈ ಗ್ರಾಮವು ಎಚ್.ಡಿ.ಕೋಟೆ ತಾಲೂಕು ಕೇಂದ್ರಕ್ಕೆ ಸಂಪರ್ಕ ಬೇಸೆಯುವ ಪ್ರಮುಖ ರಸ್ತೆಯಲ್ಲಿ ಇರುವುದರಿಂದ ತಾಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದೆ ರಸ್ತೆಯಲ್ಲೇ ದಿನನಿತ್ಯ ಹಾದು ಹೋಗುತ್ತಾರೆ. ಆದರೆ ಈ ಗ್ರಾಮದಲ್ಲಿ ನೀರಿನ ಹಾಹಾಕಾರ ಉದ್ಬವಗೊಂಡಿದ್ದರೂ ಸರಿಪಡಿಸುವ ಗೋಜಿಗೆ ಯಾರು ಮುಂದಾಗಿಲ್ಲ, ತಾಲೂಕು ಕೇಂದ್ರ ಸಮೀಪವೇ ಕುಡಿಯುವ ನೀರಿಗಾಗಿ ಇಂಥ ಪರಿಸ್ಥಿತಿ ನಿಮಾರ್ಣವಾದರೇ ಇನ್ನೂ ತಾಲೂಕಿನಲ್ಲಿ ಇರುವ ಕಾಡಂಚಿನ ಗ್ರಾಮಗಳ ಸ್ಥಿತಿ ಊಹಿಸಿಕೊಳ್ಳುವುದು ಕೂಡ ಕಷ್ಟಕರವಾಗಿದೆ.
ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ಈ ಸಿದ್ದಲಿಂಗಪುರ ಗ್ರಾಮದ ಬಡ ಜನರಿಗೆ ಕುಡಿಯುವ ನೀರು ಪೂರೈಬೇಕು ಎಂಬುದು ಇಲ್ಲಿನ ಜನರ ಒತ್ತಾಯ.
* ನಿಂಗಣ್ಣಕೋಟೆ