Advertisement

ಕುಡಿಯುವ ನೀರು ಅನುದಾನ ದುರ್ಬಳಕೆ; ತನಿಖೆಗೆ ಆಗ್ರಹ

10:54 AM Jun 02, 2020 | Suhan S |

ಬೆಳಗಾವಿ: ಕಳೆದ 2015-16 ರಿಂದ 2019-20ರ ಅವಧಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಹೆಸರಿನಲ್ಲಿ ಬೋಗಸ್‌ ಬಿಲ್ಲು, ಕಳಪೆ ಕಾಮಗಾರಿ, ಹೆಚ್ಚುವರಿ   ಹಣ ಪಾವತಿಯಿಂದ ಆಗಿರುವ ಹಣದ ದುರ್ಬಳಕೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣವನ್ನು ಮರಳಿ ಸರಕಾರಕ್ಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮದುರ್ಗದ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

ರಾಮದುರ್ಗ ತಾಲೂಕಿನ ಸೊಪ್ಪಡ್ಲ, ಓಬಳಾಪೂರ ಎಸ್‌ ಎಲ್‌ಟಿ, ಓಬಳಾಪೂರ ಆರ್‌ಎಲ್‌ಟಿ, ಓಬಳಾಪೂರ ಗ್ರಾಮಗಳಲ್ಲಿ ಗ್ರಾಮೀಣ  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 2015-16 ರಿಂದ 2019-20 ರ ಅವಧಿಯಲ್ಲಿ ಕುಡಿಯುವ ನೀರು ಯೋಜನೆಗೆ 1 ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿತ್ತು. ಆದರೆ, ಸಾರ್ವಜನಿಕರಿಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ಅಧಿಕಾರಿಗಳು ಕೆಲ ವ್ಯಕ್ತಿಗಳ ಜೊತೆ ಸೇರಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬೋಗಸ್‌ ಬಿಲ್ಲು, ಕಳಪೆ ಕಾಮಗಾರಿ ತೋರಿಸಿ ಹಣ ಪಡೆದಿರುವುದು, ಹೆಚ್ಚುವರಿ ಹಣ ಪಾವತಿ, ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಮಾಡಲಾಗಿದೆ. ಓಬಳಾಪೂರ ತಾಂಡಾದಲ್ಲಿಯೂ ಕಳಪೆ ಕಾಮಗಾರಿ ಮುಂದುವರೆದಿದೆ. ಮಾಹಿತಿ ಹಕ್ಕು ಅಡಿಯಲ್ಲಿ ಪೂರ್ಣ ಮಾಹಿತಿ ಒದಗಿಸಿಲ್ಲ ಎಂದು ದೂರಿದ್ದಾರೆ. 2019-20 ನೇ ಸಾಲಿನ ಕುಡಿಯುವ ನೀರಿನ ಯೋಜನೆಯಲ್ಲಿ ಓಬಳಾಪೂರ ಗ್ರಾಮಕ್ಕೆ 12 ಲಕ್ಷ, ಸೊಪ್ಪಡ್ಲ ಗ್ರಾಮಕ್ಕೆ 10 ಲಕ್ಷ, ಓಬಳಾಪೂರ ಎಸ್‌ಎಲ್‌ಟಿ ತಾಂಡಾಗೆ 35 ಲಕ್ಷ, ಓಬಳಾಪೂರ ಆರ್‌ಎಲ್‌ಟಿ ಗ್ರಾಮಕ್ಕೆ 10 ಲಕ್ಷ ರೂ ಯೋಜನೆ ರೂಪಿಸಲಾಗಿದೆ. ಆದರೆ, ಓಬಳಾಪೂರ ಎಸ್‌ಎಲ್‌ಟಿ ತಾಂಡಾದಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ. ಅಲ್ಲದೆ ಅಪೂರ್ಣ ಕಾಮಗಾರಿಗೆ 30, 85, 419 ರೂ. ಬಿಲ್ಲು ಸಂದಾಯ ಮಾಡಲಾಗಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿಯೇ 13,24,104 ಹಣ ಪಾವತಿಸುವ ಮೂಲಕ ಅಧಿಕಾರಿಗಳುಕರ್ತವ್ಯ ಲೋಪವೆಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಕಾಮಗಾರಿಗಳಲ್ಲಿ ಸುಮಾರು ಒಂದು ಕೋಟಿ ರೂ. ಅವ್ಯವಹಾರ ನಡೆದಿದ್ದು ವಿಶೇಷ ತಂಡ ರಚಿಸುವ ಮೂಲಕ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next