Advertisement

Drinking Water: ಎತ್ತಿನಹೊಳೆ ಚಾಲನೆಯು ರಾಜಕೀಯ ಜೀವನದ ಸಾರ್ಥಕ ಕ್ಷಣ: ಸಿಎಂ

03:28 AM Sep 06, 2024 | Team Udayavani |

ಬೆಂಗಳೂರು: ಶಂಕುಸ್ಥಾಪನೆ ನೆರವೇರಿಸಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ತಾವೇ ಚಾಲನೆ ನೀಡುತ್ತಿರುವುದು “ರಾಜಕೀಯ ಜೀವನದ ಇನ್ನೊಂದು ಸಾರ್ಥಕ ಕ್ಷಣ’ ಎಂದು ಮುಖ್ಯಮಂತ್ರಿ ಸಂತಸ ಹಂಚಿಕೊಂಡಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಪೋಸ್ಟ್‌ ಮಾಡಿರುವ ಅವರು, 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿ, ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿ, ಬರದ ಭೂಮಿಗೆ ಜೀವಜಲವನ್ನುಣಿಸಲು ಸಿದ್ಧವಾಗಿ ನಿಂತಿದೆ. ಇದು ನನ್ನ ರಾಜಕೀಯ ಜೀವನದ ಇನ್ನೊಂದು ಸಾರ್ಥಕ ಕ್ಷಣ ಎಂದಿದ್ದಾರೆ.

ಈ ಯೋಜನೆಯಿಂದ ಮಳೆಗಾಲದಲ್ಲಿ ಸಮುದ್ರ ಪಾಲಾಗುತ್ತಿದ್ದ 24.01 ಟಿಎಂಸಿ ನೀರಿನ ಸದ್ಬಳಕೆ ಆಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ 7 ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶದಲ್ಲಿನ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.

ಕುಡಿಯುವ ನೀರು ಪೂರೈಕೆಗಾಗಿ 14.05 ಟಿಎಂಸಿ ಹಾಗೂ ಕೆರೆ ತುಂಬಿಸಲು 9.95 ಟಿಎಂಸಿ ನೀರು ಬಳಕೆಯಾಗಲಿದೆ. 23,251 ಕೋಟಿ ರೂ. ವೆಚ್ಚದ ಈ ಬೃಹತ್‌ ಯೋಜನೆಗಾಗಿ ಇದುವರೆಗೆ 16,152 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next