Advertisement

ಕುಡಿಯುವ ನೀರಿನ ಬರ ಪರಿಹಾರ ಕ್ರಮ: ನೀರು ಸಂಗ್ರಹ ಯೋಜನೆಗೆ ಚಾಲನೆ

08:48 PM Jul 12, 2019 | Sriram |

ಕುಂಬಳೆ: ಕಾಸರಗೋಡು ಜಿಲ್ಲೆ ಅನುಭವಿಸುತ್ತಿರುವ ಕುಡಿಯುವ ನೀರಿನ ಬರ ಪರಿಹಾರಕ್ಕೆ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೊಳಿಸುವ ಸಮಗ್ರ ನದಿತಟ ಅಭಿವೃದ್ಧಿ ಯೋಜನೆ ಪ್ರಗತಿಯಲ್ಲಿದೆ. ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್‌ ಎಂಬ 5 ನದಿಗಳಿಗೆ ಸಂಬಂ ಧಿಸಿ ಯೋಜನೆ ಜಾರಿಗೊಳ್ಳಲಿದೆ.

Advertisement

ಜಿಲ್ಲಾ ಮಣ್ಣು ಸಂರಕ್ಷಣೆ ಕಚೇರಿಯ ನೇತೃತ್ವದಲ್ಲಿ ಸರಕಾರಿ, ಖಾಸಗಿ ಜಾಗಗಳಲ್ಲಿ ಸೇರಿರುವ 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಪತ್ತೆಮಾಡಲಾಗಿದೆ. ಎಡನಾಡು ಕನ್ನಟಿಪಳ್ಳ, ಮುಗು ರಸ್ತೆಯ ಪುತ್ತಿಗೆ ತೋಡು, ಪೆರ್ಣೆಯ ಕಾವೇರಿಕಣ್ಣ ತೋಡು, ಮಾನ್ಯ ಬಯಲುತೋಡು, ಪೈವಳಿಕೆ, ಮೀಂಜ ಪ್ರದೇಶಗಳ ಸರಕಾರಿ ಜಾಗದಲ್ಲಿ ಈ ಯೋಜನೆಯ ಮೊದಲ ಹಂತದ ಚಟುವಟಿಕೆಗಳು ಆರಂಭಗೊಂಡಿವೆ. ಈ ಪ್ರದೇಶಗಳಲ್ಲಿ ಈಗಾಗಲೇ ಇರುವ ಹಳ್ಳಗಳ ಆಳ ಹೆಚ್ಚಿಸುವ ಕಾಯಕಗಳು ನಡೆದುಬರುತ್ತಿವೆ. ಜತೆಗೆ ಈ ಪ್ರದೇಶಗಳ ಕಲ್ಲಿನಪಾರೆ ಪ್ರದೇಶಗಳಲ್ಲಿ ನೂತನ ಹಳ್ಳಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ಮಳೆ ಆರಂಭಗೊಂಡಿರುವುದು ಕಾಮಗಾರಿಗೆ ತೊಡಕಾ ಗುತ್ತಿದ್ದರೂ, ಮಳೆ ಬಿಟ್ಟ ಅವಧಿಯಲ್ಲಿ ನಡೆಸಲಾಗುವುದು. ಜಿಲ್ಲಾ ನಿರ್ಮಿತಿ ಕೇಂದ್ರ ಈ ಕಾಮಗಾರಿಗಳ ಮೇಲೋ°ಟ ವಹಿಸಿದೆ. ಹಳ್ಳ ನಿರ್ಮಾಣ ವೇಳೆ ಪಾರೆ ಪ್ರದೇಶಗಳಿಂದ ಲಭಿಸುವ ಕೆಂಪು ಕಲ್ಲುಗಳನ್ನು ನಿರ್ಮಿತಿ ಕೇಂದ್ರದ ಬೇರೆ ಕಾಮಗಾರಿಗಳಿಗಾಗಿ ಬಳಸಲಾಗುವುದು. ಎಂದು ನಿರ್ಮಿತಿ ಕೇಂದ್ರದ ಕಾರ್ಯಕಾರಿ ಕಾರ್ಯದರ್ಶಿ ಆರ್‌.ಸಿ. ಜಯರಾಜನ್‌ ತಿಳಿಸಿದರು. ಲ್ಯಾಟರೈಟ್‌ ಪ್ರದೇಶಗಳು ಅಧಿಕವಾಗಿರುವ ಮಂಜೇಶ್ವರ ವಲಯದ ಭೌಗೋಳಿಕ ಪರಿಸ್ಥಿತಿ ಮತ್ತು ಅನಿಯಂತ್ರಿತ ಕೊಳವೆ ಬಾವಿಗಳನ್ನು ಕೊರೆದಿರುವುದು ಭೂಗರ್ಭ ಜಲದ ಮಟ್ಟವನ್ನು ಅಪಾಯಕಾರಿ ರೀತಿಯಲ್ಲಿ ಕುಂಠಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ವಿಶೇಷ ಆದೇಶ ಪ್ರಕಾರ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯೋಜನೆ ಜಾರಿಗೊಳ್ಳಲಿದೆ. ಈ ಯೋಜನೆಯ ಪ್ರಕಾರ ಕಿರು ಕೆರೆ, ಜಲಸಂಗ್ರಹಾಗಾರ, ಹಳ್ಳ ಇತ್ಯಾದಿಗಳ ನಿರ್ಮಾಣ ನಡೆಯಲಿದೆ.

ಹೀಗಿದೆ ಯೋಜನೆ.
ನದಿಜಲದ ಸಹಜ ಹರಿವನ್ನು ಬಳಸಿ ನದಿಗಳಲ್ಲಿ ಹತ್ತರಿಂದ ಹದಿನೈದು ಡಿಗ್ರಿ ವರೆಗಿನ ಅಂತರದಲ್ಲಿ ನೂತನ ಕಾಲುವೆಗಳನ್ನು ನಿರ್ಮಿಸಿ ಈ ಹಿಂದೆಯೇ ನಿಗದಿ ಪಡಿಸಿರುವ ಜಲ ಸಂಗ್ರಹಾಗಾರಕ್ಕೆ ನೀರನ್ನು ಸರಬರಾಜು ನಡೆಸುವುದು. ಈ ಯೋಜನೆಯ ಉದೇªಶ, ಕನಿಷ್ಠ 7x9x3 ಮೀಟರ್‌ ಅಳತೆಯಲ್ಲಿ ಹೊಂಡಗಳನ್ನು ನಿರ್ಮಿಸಲಾಗುವುದು. ಸ್ಥಳದ ಲಭ್ಯತೆಗೆ ಅನುಗುಣವಾಗಿ ಹೊಂಡದ ಆಳ, ಅಗಲಗಳನ್ನು ಹೆಚ್ಚಿಸಲಾಗುವುದು. ಈ ಮೂಲಕ ಸಮೀಪ ಪ್ರದೇಶಗಳ ಜಲದಮಟ್ಟ ಹೆಚ್ಚಳ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಲಾಗಿದೆ. ಮೊದಲ ಮೂರು ವರ್ಷಗಳಲ್ಲಿ ಜಲಸಂಗ್ರಹಾಗಾರಗಳಲ್ಲಿ ನೀರು ಕಟ್ಟಿ ನಿಲ್ಲಲು ಸಾಧ್ಯವಾಗದೇ ಇದ್ದರೂ, ಮುಂದಿನ 5 ವರ್ಷಗಳಲ್ಲಿ ಜಲಮಟ್ಟದಲ್ಲಿ ಗಣನೀಯ ಹೆಚ್ಚಳ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಅಧಿಕ ನೀರು ಲಭಿಸುವ ಪ್ರದೇಶಗಳಲ್ಲಿ ಮತ್ತೆ ಕಾಲುವೆ ನಿರ್ಮಿಸಿ ನೂತನ ಕೆರೆ, ಜಲಸಂಗ್ರಹಾಗಾರ ನಿರ್ಮಿಸಲಾಗುವುದು. ಈ ಯೋಜನೆಯ ಮೂಲಕ ಮುಂದಿನ ವರ್ಷಗಳಲ್ಲಿ ಮಂಜೇಶ್ವರ, ಕಾಸರಗೋಡು ತಾಲೂಕುಗಳಲ್ಲಿ 5 ಸಾವಿರ ಕೆರೆಗಳನ್ನು ನಿರ್ಮಿಸುವ ಉದ್ದೇಶ ಇದೆ. ಯೋಜನೆಗೆ ಬೇಕಾದ ನಿಧಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಲಭಿಸಲಿದೆ.

ಪಳ್ಳಂಮುಗುರೋಡ್‌, ಪುತ್ತಿಗೆ ಮುಗು ರಸ್ತೆಪಕ್ಕದಲ್ಲಿ ಹಳ್ಳ ನಿರ್ಮಿಸಲು ಕಲ್ಲನ್ನು ತೆರವುಗೊಳಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next