Advertisement

ಕುಡಿವ ನೀರಿನ ಸಮಸ್ಯೆಯಾಗದಿರಲಿ

12:54 PM Mar 14, 2019 | |

ಜಗಳೂರು: ಸತತ 4 ವರ್ಷ ಸಮರ್ಪಕವಾಗಿ ಮಳೆ ಬರದೆ ಇರುವುದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಸಾವಿರ ಅಡಿ ಕೊರೆಸಿದರೂ ಸಹ ನೀರು ದೊರೆಯದಂತಾಗಿದೆ. ಇರುವ ನೀರನ್ನು ತೀರಾ ಅವಶ್ಯಕತೆ ಇರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ, ಹಿತಮಿತವಾಗಿ ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಶಾಸಕ ಎಸ್‌.ವಿ. ರಾಮಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆಗೆ ಬಿಡುಗಡೆಯಾದ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೇ ಕುಡಿಯುವ ನೀರಿಗಾಗಿ ಮಾತ್ರ ಬಳಸಿ. ನೂತನ ಬೋರ್‌ವೆಲ್‌ಗೆ ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಪೈಪ್‌ಲೈನ್‌ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ತಾಲೂಕಿನ ಎಲ್ಲ 22 ಪಿಡಿಒಗಳಿಗೆ ಸೂಚಿಸಿದರು.

ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗದಂತೆ ತಾಲೂಕಿನ ಕೊಣಚಗಲ್‌ಗ‌ುಡ್ಡ, ಗುರುಸಿದ್ದಾಪುರ, ಅಣಬೂರು, ಕಲ್ಲೇದೇವರಪುರ ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಲು ಈ ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತಾಪಂ ಇಓ ಜಾನಕಿರಾಮ್‌ ಮಾತನಾಡಿ, ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 29 ಗ್ರಾಮಗಳಿಗೆ 42 ಖಾಸಗಿ ಬೋರ್‌ ವೆಲ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತೀವ್ರ ನೀರಿನ ಸಮಸ್ಯೆ
ಇರುವ ಗ್ರಾಮಗಳಲ್ಲಿ ಬೋರ್‌ವೆಲ್‌ ಕೊರೆಯಿಸಿ ನೀರು ಪೂರೈಕೆ ಮಾಡುವ ಕಾರ್ಯ ಭರದಿಂದ ಸಾಗಿದೆ ಎಂದರು.

ಸೊಕ್ಕೆ, ಯರಲಕಟ್ಟೆ, ಪಲ್ಲಾಗಟ್ಟೆ, ಕಲ್ಲೇನಹಳ್ಳಿ, ಗೋಡೆ, ಸೂರಗೊಂಡನಹಳ್ಳಿ, ಬಿಸ್ತುವಳ್ಳಿ, ಮಾಳಮ್ಮನಹಳ್ಳಿ, ನರಸಿಂಹರಾಜಪುರ, ಹನುಮಂತಾಪುರ, ಉರುಕಟ್ಟೆ, ಸಿಎಂಹೊಳೆ ಗೊಲ್ಲರಹಟ್ಟಿ ತಾಯಿಟೋಣಿ, ದಿಬ್ಬದಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಕುಡಿಯುವ ಸಮಸ್ಯೆ
ಬಗ್ಗೆ ಪಿಡಿಒ ಗಳು ಸಭೆಯ ಗಮನಕ್ಕೆ ತಂದರು.
 
ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಸ್ವಾಮಿ, ಕೃಶಿ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ, ಬೆಸ್ಕಾಂ ಇಂಜನೀಯರ್‌ ಪ್ರವೀಣ್‌ ಕುಮಾರ್‌, ತಾಪಂ ಯೋಜನಾಧಿಕಾರಿ ಮೋಹನ್‌, ಇತರ ಅಧಿಕಾರಿಗಳು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next