Advertisement

ಈ ಬಾರಿಯೂ ಕುಡಿಯುವ ನೀರಿನ ಆತಂಕ

11:22 AM Mar 10, 2020 | Suhan S |

ದಾವಣಗೆರೆ: ಈ ಬಾರಿ ಬೇಸಿಗೆ ಆರಂಭದಲ್ಲೇ ಜನ- ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗುವ ಆತಂಕ ಇದೆ. ದಾವಣಗೆರೆ ತಾಲೂಕಿನ ಪ್ರಮುಖ ಹೋಬಳಿ, ವಿಧಾನಸಭಾ ಕ್ಷೇತ್ರದ ಕೇಂದ್ರ ಬಿಂದು ಮಾಯಕೊಂಡದಲ್ಲಿನ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿನ ಮುನ್ನುಡಿಯಂತಿದೆ.

Advertisement

ಮಾಯಕೊಂಡ ಮತ್ತು 21 ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ರಾಜೀವ್‌ಗಾಂಧಿ ಸಬ್‌ ಮೆಷಿನ್‌ ಯೋಜನೆ ಮೂಲಕ ಶಂಕರನಹಳ್ಳಿ ಕೆರೆಯಲ್ಲಿ ಸಂಗ್ರಹಿಸಲಾಗುತ್ತಿರುವ ನೀರು ಬಕಾಸುರನ ಹೊಟ್ಟೆಗೆ  ಅರೆಕಾಸಿನ ಮಜ್ಜಿಗೆ… ಎನ್ನುವಂತಾಗಿದೆ. ಶಂಕರನಹಳ್ಳಿಯ ಹೊಸಕೆರೆಯಲ್ಲಿ ಸಂಗ್ರಹವಾಗುವ ನೀರು ಮಾಯಕೊಂಡಕ್ಕೂ ಸಾಕಾಗುತ್ತಿಲ್ಲ. ಹಾಗಾಗಿ ಮಾಯಕೊಂಡ ಗ್ರಾಮದಲ್ಲಿ ಈಗ ವಾರಕ್ಕೆ ಒಂದು ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ರಾಂಪುರ, ಹೆದ್ನೆ, ಎಚ್‌. ಬಸವಾಪುರ, ಹುಚ್ಚವ್ವನಹಳ್ಳಿ, ಮಾಗಡಿ, ಒಂಟಿಹಾಳ್‌, ನಲ್ಕುಂದ ಇತರೆ 21 ಗ್ರಾಮಗಳಲ್ಲೂ ವಾರಕ್ಕೊಮ್ಮೆ ಒಂದು ದಿನ ಮಾತ್ರ ನೀರು ಸರಬರಾಜಾಗುತ್ತಿದೆ.

ರಾಜೀವ್‌ಗಾಂಧಿ ಸಬ್‌ ಮೆಷಿನ್‌ ಯೋಜನೆಯ ಮೂಲ ಆಧಾರವಾಗಿರುವ ಭದ್ರಾ ನಾಲೆಯಲ್ಲಿ ನೀರು ಹರಿಯುವ ತನಕ ಸಮಸ್ಯೆಯೇ ಇಲ್ಲ. ಆದರೆ ಭದ್ರಾ ನಾಲೆಯಲ್ಲಿ ನೀರಿನ ಹರಿವು ನಿಂತರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮಾಯಕೊಂಡದಲ್ಲಿ ಇರುವ ಎರಡು ಕೊಳವೆಬಾವಿಯಲ್ಲಿನ ನೀರು ಫ್ಲೋರೈಡ್‌ ಮತ್ತು ಉಪ್ಪಿನ ಅಂಶದಿಂದ ಕೂಡಿರುವ ಕಾರಣಕ್ಕೆ ಜನರು ದಿನ ನಿತ್ಯದ ಕೆಲಸ-ಕಾರ್ಯಗಳಿಗೆ ಬಳಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ನಾಲೆಯಲ್ಲಿ ನೀರಿಲ್ಲದಿದ್ದರೆ ಸಮಸ್ಯೆ ಉಲ್ಬಣಗೊಳ್ಳಲಿದೆ.

ಕಳೆದ ಸಾಲಿನಲ್ಲಿ ಆನಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ಉತ್ತಮ ಮಳೆಯಾಗಿದ್ದರಿಂದ ಮತ್ತು ಲಕ್ಕವಳ್ಳಿಯ ಭದ್ರಾ ಜಲಾಶಯ ತುಂಬಿದ ಕಾರಣ  ನೀರಿನ ಸಮಸ್ಯೆ ಕೊಂಚ ಕಡಿಮೆ ಆಗಿತ್ತು. ಈ ಬಾರಿಯ ಬೇಸಿಗೆ ಪ್ರಾರಂಭದಲ್ಲಿ ಎಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿಲ್ಲ. ಕಳೆದ 2 ವರ್ಷಗಳಿಂದ ಕುಡಿವ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದ್ದ ಹುಣಸೆಕಟ್ಟೆ, ಕಾಟೀಹಳ್ಳಿ, ಕಾಟೀಹಳ್ಳಿ ತಾಂಡಾ, ಮಂಡೂÉರು ಮತ್ತು ಮಂಡೂರ ಗೊಲ್ಲರಹಟ್ಟಿಯಲ್ಲೂ ಈವರೆಗೆ ಸಮಸ್ಯೆ ಇಲ್ಲ. ಒಳ್ಳೆಯ ಮಳೆಯಾಗಿರುವುದು, ಅಂತರ್ಜಲ ಪುನಶ್ಚೇತನದಿಂದ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆಯ ಹಿನ್ನೆಲೆಯಲ್ಲಿ ಸಮಸ್ಯೆ ಕಡಿಮೆ ಆಗಿದೆ. ಕಾಟೀಹಳ್ಳಿಯಲ್ಲಿ ನೀರಿನ ಲಭ್ಯತೆಯ ಸಮಸ್ಯೆ ಏನೂ ಇಲ್ಲ. ಆದರೆ, ವಿತರಣೆಯಲ್ಲಿನ ಲೋಪದೋಷದ ಪರಿಣಾಮ ಜನರು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನೀರಿಗಾಗಿ ಕಾಯುವುದು, ಅಲೆಯುವುದು ಸಾಮಾನ್ಯವಾಗಿದೆ.

ಲಭ್ಯ ಇರುವ ನೀರನ್ನೇ ಸಮರ್ಪಕವಾಗಿ ಮನೆ ಬಾಗಿಲಿಗೆ ಪೂರೈಸುವ ವ್ಯವಸ್ಥೆ ಮಾಡಬಹುದು. ಆದರೆ, ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡುತ್ತಲೇ ಇಲ್ಲ. ಎಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗುತ್ತಿಲ್ಲ. ನೀರಿನ ಸಂರಕ್ಷಣೆ ಮಾಡಿಕೊಂಡಲ್ಲಿ ಮುಂದೆ ಸಮಸ್ಯೆ ಆಗಲಾರದು. ಆದರೆ, ಸಂಬಂಧಿತರ ನಿರ್ಲಕ್ಷ್ಯದ ಪರಿಣಾಮ ಮುಂದೆ ನೀರಿನ ಸಮಸ್ಯೆ ಎದುರಾಗಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ದಾವಣಗೆರೆ ಜಿಲ್ಲೆಯ ಗಡಿಯಂಚಿನ ಐತಿಹಾಸಿಕ ಪ್ರಸಿದ್ಧ ನೀರ್ಥಡಿ ಗ್ರಾಮದಲ್ಲೂ ನೀರಿನ ಸಮಸ್ಯೆ ಸದ್ಯಕ್ಕಂತೂ ಇಲ್ಲ. ಆದರೆ, ಏಪ್ರಿಲ್‌ ಇಲ್ಲವೇ ಮೇ ತಿಂಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಗುಡ್ಡ ಪ್ರದೇಶದ ಕಾರಣಕ್ಕೆ ನೀರಿನ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ.

Advertisement

ಸಮಸ್ಯಾತ್ಮಕ ಗ್ರಾಮಗಳಿವು :  ಕಳೆದ ಬಾರಿ ಸುರಿದ ಮಳೆ ಹಾಗೂ ಭದ್ರಾ ಜಲಾಶಯ ತುಂಬಿರುವ ಕಾರಣಕ್ಕೆ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ. ಆದರೂ, ದಾವಣಗೆರೆ ತಾಲೂಕಿನ ಕಾಟೀಹಳ್ಳಿ, ಹುಣಸೆಕಟ್ಟೆ, ಕೆಂಚಮ್ಮನಹಳ್ಳಿ, ಹೊಸಹಟ್ಟಿ ಲಂಬಾಣಿತಾಂಡಾ, ಜಮ್ಮಾಪುರ, ಹುಚ್ಚವ್ವನಹಳ್ಳಿ, ನೀರ್ಥಡಿ, ಹೆಮ್ಮನಬೇತೂರು, ಕುರುಡಿ, ಕಿತ್ತೂರು, ಹೆಬ್ಟಾಳು…ಒಟ್ಟು 15 ಗ್ರಾಮಗಳಲ್ಲಿ ಏಪ್ರಿಲ್‌ ಇಲ್ಲವೇ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ 15 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಿದೆ. ಟ್ಯಾಂಕರ್‌, ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆಗೆ ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 20 ಲಕ್ಷ ರೂಪಾಯಿ ಅನುದಾನದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.

 

­-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next