Advertisement

ಅವಧಿ ಮುನ್ನವೇ ಬತ್ತಿ ಬರಿದಾದ ಪಂಚಗಂಗಾವಳಿ ನದಿಗಳ ಒಡಲು

01:18 AM Mar 31, 2019 | sudhir |

ಸಿದ್ದಾಪುರ: ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಗ್ರಾಮೀಣ ಪ್ರದೇಶಗಳಿಗೆ ನೀರುಣಿಸುತ್ತ ಸಮುದ್ರದ ಒಡಲನ್ನು ಸೇರುವ ಪಂಚಗಂಗಾವಳಿ ನದಿಗಳ ಒಡಲು ಅವಧಿಯ ಮುನ್ನವೇ ಬತ್ತಿ ಬರಿದಾಗಿದ್ದು ಇಲ್ಲಿನ ಜೀವ ರಾಶಿಗಳು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಒಂದೊದಗಿದೆ.
ಪಶ್ಚಿಮಘಟ್ಟದಲ್ಲಿ ಹುಟ್ಟಿ ಅರಬಿ ಸಮುದ್ರ ಸೇರುವ ವಾರಾಹಿ, ಸೌರ್ಪಣಿಕಾ, ಕುಬಾj, ಚಕ್ರಾ ಹಾಗೂ ಕೆದಕ ಈ ಪಂಚನದಿಗಳು ಗಂಗೊಳ್ಳಿಯ ಬಳಿ ಸಮುದ್ರ ಸೇರುವು ದರಿಂದ ಪಂಚಗಂಗಾವಳಿ ನದಿಗಳು ಎನ್ನುವ ಬಿರುದು ಬಂದಿದೆ. ಆದರೆ ತಾಪಮಾನ ಹೆಚ್ಚಳದಿಂದಾಗಿ ವಾರಾಹಿ ನದಿಯೊಂದನ್ನು ಹೊರತು ಪಡಿಸಿ ಉಳಿದ ನಾಲ್ಕು ನದಿಗಳ ಒಡಲು ಬರಿದಾಗಿವೆ.

Advertisement

ಈ ನದಿಗಳ ನೀರನ್ನು ಆಶ್ರಯಿಸಿ ಬದುಕು ಕಳೆಯುತ್ತಿರುವ ನೂರಾರು ಕೃಷಿ ಕುಟುಂಬಗಳು ಆತಂಕ ಎದುರಿಸುತ್ತಿವೆ. ಕೃಷಿಕರು ಬೇಸಿಗೆಯ ಮುನ್ನ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗಾಗಿ ನದಿಗಳಿಗೆ ಅಡ್ಡಲಾಗಿ ಮಣ್ಣಿನ ಕಟ್ಟು ನಿರ್ಮಿಸಿಕೊಳ್ಳುತ್ತಿದ್ದರು. ಅಲ್ಲದೆ ಕೃಷಿಕರಿಗೆ ಉಪಯೋಗವಾಗಲೆಂದು ಇಲಾಖೆಗಳು ಅನೇಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ದ್ದವು. ಆದರೆ ಈ ಬಾರಿ ಅವಧಿಗೂ ಮುನ್ನವೇ ಮಳೆ ಕೈಕೊಟ್ಟ ಪರಿಣಾಮ ನದಿಗಳು ಒಣಗಿ ಹೋಗಿವೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಿಂಡಿ ಅಣೆಕಟ್ಟುಗಳ ಸಹಾಯದಿಂದ ಕೃಷಿಕರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಬೇಸಿಗೆಯ ಬರದ ಛಾಯೆ ಆವರಿಸಿದ್ದು ಬೆಳೆಗೆ ನೀರುಣಿಸಲಾಗದೆ ಕೃಷಿಕ ಕಂಗೆಟ್ಟಿದ್ದಾನೆ. ತೆಂಗು, ಅಡಿಕೆ, ಬಾಳೆ ಕೃಷಿಗಳು ಒಣಗಿ, ಮಳೆರಾಯನ ಹಾದಿಯನ್ನು ಕಾಯುತ್ತಿವೆ.

3 ತಿಂಗಳ ಮೊದಲೇ ಬತ್ತಿದ ನದಿಗಳು
ಸಾಮಾನ್ಯವಾಗಿ ನದಿಗಳ ನೀರು ಎಪ್ರಿಲ್‌ ಕೊನೆ ಹಾಗೂ ಮೇ ತಿಂಗಳಲ್ಲಿ ಬರಿದಾಗುತ್ತಿದ್ದವು. ಆದರೆ ಈ ಬಾರಿ ಮಾರ್ಚ್‌ನಲ್ಲೇ ನೀರಿಲ್ಲದಾಗಿದೆ.

ಕಿಂಡಿ ಅಣೆಕಟ್ಟು
ಕಾಡುಗಳು ಹೆಚ್ಚಾಗಿದ್ದ ಈ ಪ್ರದೇಶಗಳಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ. ಕೃಷಿಕರು ನದಿಯ ನೀರಿಗೆ ಅಡ್ಡಲಾಗಿ ಮಣ್ಣಿನ ಕಟ್ಟು ನಿರ್ಮಿಸಿಕೊಳ್ಳುತ್ತಿದ್ದರು. ಆದರೆ ಅದು ಈಗ ಬದಲಾಗಿದೆ. ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದರೂ ಬೇಸಿಗೆಯಲ್ಲಿ ನದಿಗಳಲ್ಲಿ ನೀರು ಬತ್ತಿ ಬರಿದಾಗುತ್ತಿವೆ. ಇದಕ್ಕೆಲ್ಲ ಕಾರಣ ಕಾಡು ನಾಶ ಮತ್ತು ಅಕಾಲಿಕ ಮಳೆ. ನದಿ ಪಾತ್ರದ ಕೆಲವೊಂದು ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟಿನ ಆವಶ್ಯಕತೆ ಇದೆ. ನದಿ ನೀರನ್ನು ಹಿತ ಮಿತವಾಗಿ ಬಳಸಿಕೊಂಡಲ್ಲಿ ಕೃಷಿ, ಜನ ಜಾನುವಾರುಗಳಿಗೆ ಸಹಕಾರಿಯಾಗಲಿದೆ ಅನ್ನುತ್ತಾರೆ ಗ್ರಾಮಸ್ಥರು.

Advertisement

ಪ್ರಯತ್ನ ಮುಖ್ಯ
ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಸಹಕಾರಿಯಾಗಲೆಂದು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ಮೂರು ತಿಂಗಳ ಮೊದಲೇ ನದಿಗಳು ಭತ್ತಿ ಬರಿದಾಗಿವೆ. ಇದರಿಂದ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ನದಿ ನೀರು ಅವಧಿ ಮುನ್ನವೆ ಬರಿದಾಗುತ್ತಿರುದರಿಂದ ನದಿ ಪಾತ್ರದ ಕೆಲವೊಂದು ಕಡೆ ಕಿಂಡಿ ಅಣೆಕಟ್ಟು ನಿರ್ಮಾಣದ ಅವಶ್ಯಕತೆ ಇದೆ. ನದಿ ನೀರನ್ನು ಹಿತ ಮಿತವಾಗಿ ಬಳಸುವುದರ ಮೂಲಕ ಮುಂದಿನ ದಿನಗಳಲ್ಲಾದರೂ ನದಿ ನೀರಿನ ಉಳಿವಿಗೋಸ್ಕರ ಪ್ರಯತ್ನ ಮುಖ್ಯ.
-ಬರೆಗುಂಡಿ ಶ್ರೀನಿವಾಸ ಚಾತ್ರ, ಪ್ರಗತಿಪರ ಕೃಷಿಕರು ಹಳ್ಳಿಹೊಳೆ

ಬೋರ್‌ವೆಲ್‌ಗ‌ಳಲ್ಲೂ ನೀರಿಲ್ಲ
ಮಳೆ ಬೇಗ ಕೈ ಕೊಟ್ಟಿದರಿಂದ ಈ ನದಿಗಳ ನೀರು ಬತ್ತಿ ಹೋಗಿವೆ. ಇದರ ಪರಿಣಾಮ ಪಂ. ವ್ಯಾಪ್ತಿಯ ಬೋರ್‌ವೆಲ್‌ಗ‌ಳಲ್ಲೂ ನೀರಿಲ್ಲ. ಚಕ್ರ ನದಿಗೆ ಶೆಟ್ಟಿಪಾಲು ಬಳಿ ಕಿಂಡಿ ಅಣೆಕಟ್ಟು ಕಟ್ಟಿದ್ದರಿಂದ ಸಲ್ಪ ಪ್ರಮಾಣದ ನೀರು ಇದೆ. ಕುಬಾj ನದಿಗೆ 8 ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಕಟ್ಟುವ ಬಗ್ಗೆ ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಿದ್ದೇವೆ. ಕಿಂಡಿ ಅಣೆಕಟ್ಟು ಕಟ್ಟುವುದರಿಂದ ಅಂತರ್ಜಲ ಹೆಚ್ಚುತ್ತದೆ.
-ಸುದರ್ಶನ, ಪಿಡಿಒ, ಗ್ರಾ.ಪಂ. ಹಳ್ಳಿಹೊಳೆ

– ಸತೀಶ ಆಚಾರ್ಯ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next