ಹುಬ್ಬಳ್ಳಿ: ಈ ಹಿಂದೆ ಲಾಲು ಪ್ರಸಾದ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಹೆಚ್ಚು ಬಳಕೆಗೆ ಬಂದಿದ್ದ ಮಣ್ಣಿನ ಕುಡಿಕೆಗಳು, ಇದೀಗ ಮತ್ತೆ ಪ್ರಚಲಿತಕ್ಕೆ ಬಂದಿವೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿತ್ಯ ಸರಿಸುಮಾರು 500ಕ್ಕೂ ಹೆಚ್ಚು ಜನರು ಮಣ್ಣಿನ ಕಪ್‌ಗಳಲ್ಲಿಯೇ ಚಹಾ-ಕಾಫಿ ಸೇವನೆಗೆ ಮುಂದಾಗಿದ್ದು, ಪರಿಸರ ಕಾಳಜಿ ಹಾಗೂ ಕುಂಬಾರಿಕೆ ವೃತ್ತಿಗೆ ಉತ್ತೇಜನಕಾರಿಯಾಗಿದೆ.
ಪ್ಲಾಸ್ಟಿಕ್ ಬಳಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಅವರ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ವಲಯ ತನ್ನ ನಿಲ್ದಾಣಗಳಲ್ಲಿನ ಹೋಟೆಲ್‌ಗಳಲ್ಲಿ ಮಣ್ಣಿನ ಕಪ್ ಗಳ ಬಳಕೆಗೆ ಮುಂದಾಗಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎಲ್ಲ ಹೊಟೇಲ್ ಹಾಗೂ ಮಳಿಗೆಗಳಲ್ಲಿ ಮಣ್ಣಿನ ಕಪ್ ಗಳಲ್ಲಿ ಚಹಾ-ಕಾಫಿ, ಹಾಲು ನೀಡಿಕೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರಿಸರಸ್ನೇಹಿ ಕಾರ್ಯಕ್ಕೆ ಜನರ ಸಹಕಾರ ಅತ್ಯವಶ್ಯವಾಗಿದ್ದು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮೇಲಾಗುವ ಹಾನಿ ಅರಿತು ಮಣ್ಣಿನ ಕಪ್‌ಗ್ಳ ಬಳಕೆಗೆ ಮುಂದಾಗಬೇಕಾಗಿದೆ. ನಂದಿನಿ ಸೇರಿದಂತೆ ವಿವಿಧ ಕಂಪೆನಿಗಳು ಮೊಸರು ನೀಡಿಕೆಗೆ ಮಣ್ಣಿನ ಕುಡಿಕೆ ಬಳಸುತ್ತಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಅವುಗಳೊಂದಿಗೆ ಇದೀಗ ಚಹಾ, ಕಾಫಿಯೂ ಮಣ್ಣಿನ ಕಪ್‌ನಲ್ಲಿ ಲಭ್ಯವಾಗುತ್ತಿದೆ.
500ಕ್ಕೂ ಹೆಚ್ಚು ಬಳಕೆ: ಪ್ರತಿದಿನ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 500ಕ್ಕೂ ಹೆಚ್ಚು ಮಣ್ಣಿನ ಕಪ್‌ಗಳು ಬಳಕೆಯಾಗುತ್ತಿವೆ. ರೈಲ್ವೆ ನಿಲ್ದಾಣದ ಸ್ಟೇಶನ್ ಮಾಸ್ಟರ್ ಕೊಠಡಿ ಪಕ್ಕದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಪ್ರತಿದಿನ ಸುಮಾರು 300ರಿಂದ 350ಕ್ಕೂ ಹೆಚ್ಚು ಮಣ್ಣಿನ ಕಪ್ ಗಳು ಬಳಕೆಯಾಗುತ್ತಿವೆ. ಖರೀದಿ ಮಾಡಲಾಗುತ್ತಿದೆ. ಒಂದು ಕಪ್ ಗೆ 5 ರೂ. ವೆಚ್ಚವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ತಯಾರಾಗುವ ಮಣ್ಣಿನ ಕಪ್ ಗಳನ್ನು ಖರೀದಿಸಲು ಯೋಜಿಸಲಾಗಿದೆ.
ಬಳಕೆಗೆ ನಿರಾಸಕ್ತಿ: ರೈಲ್ವೆ ನಿಲ್ದಾಣದ ಹೊರಭಾಗದಲ್ಲಿರುವ ಕ್ಯಾಂಟೀನ್ ಗಳಲ್ಲಿ ಪೇಪರ್ ಕಪ್ ಗಳನ್ನು ಬಳಕೆ ಮಾಡುತ್ತಿದ್ದು, ಮಣ್ಣಿನ ಕಪ್ ಗಳನ್ನು ಒಳಭಾಗದಲ್ಲಿ ಇಟ್ಟಿರುತ್ತಾರೆ. ಇದು ಜನರಿಗೆ ಗೊತ್ತಾಗುವುದಿಲ್ಲ, ಇದಲ್ಲದೇ ಪೇಪರ್ ಕಪ್ ಗಳಲ್ಲಿ ಚಹಾ, ಕಾಫಿ ಪಡೆದರೆ 10 ರೂ., ಮಣ್ಣಿನ ಕಪ್‌ಗಳಲ್ಲಿ ಪಡೆದರೆ 15 ರೂ. ಇದೆ. ಇದರಿಂದಲೂ ಕೆಲವೊಂದಿಷ್ಟು ಜನ 5 ರೂ. ಉಳಿಸಲು ಪೇಪರ್ ಕಪ್ ನಲ್ಲಿಯೇ ಪಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಎಲ್ಲ ರೈಲ್ವೆ ನಿಲ್ದಾಣಗಳಲ್ಲಿಯೂ ಮಣ್ಣಿನ ಕಪ್‌ಗ್ಳ ಬಳಕೆ ಮಾಡಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ತ್ಯಜಿಸಿ ಎಂಬ ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ಸೂಚನೆ ಮೇರೆಗೆ ಕಳೆದ ಆರು ತಿಂಗಳಿಂದ ರೈಲ್ವೆ ನಿಲ್ದಾಣದ ಎಲ್ಲ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ಗ್ಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಿಂದ ಮಣ್ಣಿನ ಕಪ್ ಗಳನ್ನು ಖರೀದಿಸುವ ಕುರಿತು ಚಿಂತನೆಗಳು ನಡೆದಿವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. –
ಇಸ್ರಾರ ಮಂಗಳೂರ, ರೆಸ್ಟೋರೆಂಟ್ ವ್ಯವಸ್ಥಾಪಕ
ಈ ಭೂಮಿಗೆ ಪ್ಲಾಸ್ಟಿಕ್ ಮಾರಕ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೂ ಪ್ಲಾಸ್ಟಿಕ್ ಬಳಕೆಗೆ ಮುಂದಾಗುವುದು ಸರಿಯಲ್ಲ. ಸಾಂಪ್ರದಾಯಿಕವಾಗಿ ಬರುವ ಹಾಗೂ ಪರಿಸರಕ್ಕೆ ಮಾರಕವಲ್ಲದ ವಸ್ತುಗಳ ಬಳಕೆ ಮಾಡಿ ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕು
.-ಎಸ್.ಎಸ್. ಪಟ್ಟಣಶೆಟ್ಟಿ, ರೈಲ್ವೆ ಪ್ರಯಾಣಿಕ
-ಬಸವರಾಜ ಹೂಗಾರ