ಹೊನ್ನಾವರ: ಆಳವಾದ ಬಾವಿಯಲ್ಲೂ ಕೊಡ ಕಂತುವಷ್ಟು ನೀರಿಲ್ಲ. ಕೆರೆಯ ಕುರುಹೂ ಉಳಿದಿಲ್ಲ. ಊರ ಮಧ್ಯೆ ಮೇ ತಿಂಗಳಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಈಗ ಹೆದ್ದಾರಿಯಂತಾಗಿದೆ. ಅಡಕೆ ಹೂವು ಮಾತ್ರವಲ್ಲ ಮರದ ತಲೆಯೇ ಕಳಚಿ ಬೀಳುತ್ತಿದೆ. ಕುಡಿಯುವ ನೀರಿಗೆ ಕಿ.ಮೀ. ಗಟ್ಟಲೆ ನಡೆಯಬೇಕು. ದನಗಳಿಗೆ ಮೇವೂ ಇಲ್ಲ, ನೀರೂ ಇಲ್ಲ. ಇದು ಹೊನ್ನಾವರ ತಾಲೂಕಿನ ಸದಾ ಹಸಿರಾಗಿದ್ದ ಹೊಸಾಕುಳಿ, ಸಾಲ್ಕೋಡ, ಮುಗ್ವಾ, ಚಂದಾವರ, ಮೊದಲಾದ ಗ್ರಾಮಗಳ ಕೆಲವು ಮಜರೆಗಳ ಪರಿಸ್ಥಿತಿ.
ಹಳ್ಳಗಳಲ್ಲಿ, ಗುಡ್ಡದ ಓರೆಗಳಲ್ಲಿ, ತೋಟದ ಮೇಲ್ಬದಿಗೆ ನೀರಿಂಗಿಸುವ ವ್ಯವಸ್ಥೆ ಮಳೆಗಾಲಕ್ಕೂ ಮುನ್ನ ಸಿದ್ಧವಾಗಬೇಕು. ಮಳೆಗಾಲ ಮುಗಿದೊಡನೆ ಹಳ್ಳದಲ್ಲಿ ಅಲ್ಲಲ್ಲಿ ಕಟ್ಟು ಕಟ್ಟಿ ನೀರಿಂಗಿಸುವ ವ್ಯವಸ್ಥೆಯಾಗಬೇಕು. ಎಷ್ಟು ಕ್ಷೇತ್ರಕ್ಕೆ ಎಷ್ಟು ಪಂಪ್‌ಸೆಟ್‌ಗಳು, ಎಷ್ಟು ಕಾಲ ನೀರೆತ್ತಬಹುದು ಎಂಬುದನ್ನು ನಿಗದಿಪಡಿಸಬೇಕಾಗಿದೆ. ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ ಎಂದು ಕೇಳುತ್ತ ರಾತ್ರಿ ಮಲಗುವಾಗ ಹೊಳೆಗೆ ಹಚ್ಚಿದ ಪಂಪ್‌ಸೆಟ್ ಚಾಲು ಮಾಡಿ ಬೆಳಗ್ಗೆ ಎದ್ದು ಬಂದ್ ಮಾಡುವವರಿದ್ದಾರೆ. ಬೇಕಾಬಿಟ್ಟಿ ನೀರನ್ನು ಪೋಲು ಮಾಡುವುದು ಅಭ್ಯಾಸವಾಗಿ ಹೋಗಿದೆ. ಇದಕ್ಕೆ ಹಳ್ಳಿಗರು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು. ಅಥವಾ ಸಹಕಾರ ತತ್ವದಲ್ಲಿ ಕಟ್ಟುಗಳನ್ನು ನಿರ್ಮಿಸಿ, ನೀರಿಂಗಿಸಿ ವೆಚ್ಚದಲ್ಲೂ, ನೀರಿನಲ್ಲೂ ಪಾಲು ಪಡೆಯಬೇಕು. ಎಲ್ಲದಕ್ಕೂ ಸರ್ಕಾರದ ಮುಖ ನೋಡಿದರೆ ಜೀವ ಹಿಡಿದುಕೊಳ್ಳಲು ನೀರು ಕೊಟ್ಟಿತೇ ವಿನಃ ಜೀವನ ಸಾಗಿಸುವಷ್ಟು ನೀರನ್ನು ಯಾವ ಸರ್ಕಾರವೂ ಕೊಡಲಾಗದು.
ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಕೊಳವೆಬಾವಿಗಳು ವಿಫಲವಾಗಿವೆ. ಮಾರ್ಚ್‌ವರೆಗೆ 45ಕೋಟಿ ರೂಪಾಯಿ ಕುಡಿಯುವ ನೀರಿನ ಕಾಮಗಾರಿಗೆ ವೆಚ್ಚಮಾಡಿದೆ. 585ಕೋಟಿ ಅನುದಾನವಿದೆ. ಪ್ರತಿವರ್ಷವೂ ಇಂತಹ ಅಂಕಿಸಂಖ್ಯೆಗಳು ಬರುತ್ತವೆ. ಹಣ ವೆಚ್ಚವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಮಾತ್ರ ಪ್ರತಿವರ್ಷ ಭೀಕರವಾಗುತ್ತ ಸಾಗುತ್ತದೆ. ನಿರೀಕ್ಷಿತ ಫಲನೀಡದ ಯೋಜನೆಗೆ ಹಣ ಸುರಿಯುವ ಬದಲು ಜಲಸಂರಕ್ಷಣೆಯ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಕಂದಾಯ ಸಚಿವ ಆರ್.ವಿ. ದೇಶಪಾಂಡೆಯವರಿಗೆ ಈ ಸತ್ಯ ಗೊತ್ತು. ಹೂಳೆತ್ತುವ, ಕೃಷಿ ಹೊಂಡ ನಿರ್ಮಿಸುವ, ಜಲಮೂಲ ಸಂಪರ್ಕಿಸುವ ಕೆಲಸ ಆಗಬೇಕಿದೆ. ತಾಲೂಕಿನಲ್ಲಿ ಬೆಳೆಯುವ ಅಡಕೆ, ತೆಂಗು, ಕಬ್ಬು, ಭತ್ತದ ಬೆಳೆಗಳಿಗೆ ಭಾರೀ ಪ್ರಮಾಣದ ನೀರು ಬೇಕು. ಇದನ್ನು ಸರ್ಕಾರ ಯಾವ ಕಾಲಕ್ಕೂ ಪೂರೈಸಲಾರದು. ಆದ್ದರಿಂದ ಜನ-ಜಲ ಜಾಗೃತಿ ಮಾಡಬೇಕಾಗಿದೆ.
Advertisement
ಕೆಲವು ಕಡೆ ತೋಟದ ಮಧ್ಯೆ ಇರುವ ಕೊಳವೆ ಬಾವಿಗಳು ನೀರು ಕೊಡುವುದರಿಂದ ಕುಡಿಯುವ ನೀರಿಗೆ ವಿಶೇಷ ಕಷ್ಟ ಇಲ್ಲ. ದನಕರುಗಳಿಗೆ ಕಷ್ಟ. ಸರ್ಕಾರಿ ಬೋರ್ವೆಲ್ಗಳು ಬಹುಪಾಲು ಒಣಗಿವೆ. ಹಳ್ಳಗಳಲ್ಲಿ ಜೆಸಿಬಿ ಒಡಿಸಿ, ಅಲ್ಲಲ್ಲಿ ಹೊಂಡ ಬಗೆದು ಇಷ್ಟು ದಿನ ಅಲ್ಪಸ್ವಲ್ಪ ನೀರು ಪಡೆದು ಆಯ್ತು. ಈಗ ಹೊಂಡ ಒಣಗಿದೆ. ಸರ್ಕಾರಿ ಅಧಿಕಾರಿಗಳೇನೋ ಸಮಾರೋಪಾದಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೂ ಗೊತ್ತು. ಜಲಮೂಲಗಳು ಅಲ್ಲಲ್ಲಿ ಇರುವುದರಿಂದ ಗುಳೆಹೋಗುವ ಪರಿಸ್ಥಿತಿ ಇಲ್ಲ ಎಂಬುದರ ಅರ್ಥ ನೀರಿಗೆ ಬರಗಾಲವಿಲ್ಲ ಎಂದಲ್ಲ. ಒಣಹುಲ್ಲು ಗಂಟಲಿಳಿಯುವುದಿಲ್ಲ. ಹಸಿರು ಮೇವು ಕಾಣಲಿಕ್ಕಿಲ್ಲ. ವರ್ಷವರ್ಷವೂ ನೀರಿನ ಬರ ಗಂಭೀರ ದಿನಗಳ ಕುರಿತು ಎಚ್ಚರಿಸುತ್ತಲೇ ಬಂದಿದೆ. ಜನ ಎಚ್ಚರಾಗಿಲ್ಲ. ಈ ವರ್ಷ ಪರಿಸ್ಥಿತಿ ಗಂಭೀರವಾಗಿದೆ. ನೆರೆ ಬಂದು ನೂರಾರು ಮನೆಗಳಿಗೆ ನುಗ್ಗುವ ಭಾಸ್ಕೇರಿ ಹೊಳೆಯಲ್ಲಿ ತೊಟ್ಟು ನೀರಿಲ್ಲ. ಬಹುಕಾಲದಿಂದ ಬೆಳೆದು ಬಂದ ಈ ಸಮಸ್ಯೆಗೆ ತಾತ್ಪೂರ್ತಿಕ ವ್ಯವಸ್ಥೆ ನಿಜವಾದ ಪರಿಹಾರ ಅಲ್ಲ.
Related Articles
ಬೇಸಿಗೆಯಲ್ಲಿ ತುಂಬಿ ಹರಿಯುವ ಒಂದು ಬದಿ ಶರಾವತಿ, ಇನ್ನೊಂದು ಬದಿಗೆ ಬಡಗಣಿ, ಮಧ್ಯೆ ಗುಂಡಬಾಳ ಹೊಳೆ ಸಹಿತ ಅಗಾಧ ಜಲಮೂಲಗಳನ್ನು ಇಟ್ಟುಕೊಂಡು ಈ ಚೌಕಟ್ಟಿನ ಮಧ್ಯೆ ಇರುವ ಜನ ಕುಡಿಯುವ ನೀರಿಗೆ ಪರದಾಡುವುದು, ತೋಟ ಒಣಗಿ ಹೋಗುವುದು ವಿಪರ್ಯಾಸ. ಸರ್ಕಾರ ಕಣ್ಣೊರೆಸುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವುದರೊಟ್ಟಿಗೆ ನೀರಿನ ದುಂದುವೆಚ್ಚಕ್ಕೆ ಮಿತಿ ಹೇರಬೇಕು. ಅಥವಾ ಜನ ಮಿತಿ ಹೇರಿಕೊಳ್ಳಬೇಕು. ಇಲ್ಲವಾದರೆ ಬರುವ ಬೇಸಿಗೆಯಲ್ಲಿ ಮಂಗನ ಕಾಯಿಲೆ ಹೊರತಾಗಿ ಇನ್ನೇನೂ ಇರುವುದಿಲ್ಲ.
•ಜೀಯು, ಹೊನ್ನಾವರ
Advertisement