Advertisement

ಬತ್ತಿದ ನದಿಯಲ್ಲಿ ಕುಂದಿದ ಸಂಕ್ರಾಂತಿ

11:19 AM Jan 15, 2019 | Team Udayavani |

ವಾಡಿ: ಭಕ್ತಿಯ ಜಲ ಸ್ನಾನ ಅರಸಿ ಸಂಕ್ರಾಂತಿ ಹಬ್ಬದೂಟ ಹೊತ್ತುಕೊಂಡು ನದಿಯತ್ತ ಹೋದ ಜನರಿಗೆ ಸಿಕ್ಕಿದ್ದು ಬರಡು ನದಿಯೊಡಲು ಹಾಗೂ ಪಾಚಿಗಟ್ಟಿದ ಕೆಸರು ನೀರು. ನೀರು, ನೆರಳು, ಮರಳಿಲ್ಲದಂತಹ ನದಿ ನಿರ್ಜನ ಪ್ರದೇಶದಲ್ಲಿ ಜನರ ಸಂಕ್ರಾಂತಿ ಸಂಭ್ರಮ ಅಕ್ಷರಶಃ ಕಳೆದುಂದಿತು.

Advertisement

ಪಟ್ಟಣ ಸಮೀಪದ ಕುಂದನೂರು ಗ್ರಾಮದ ಐತಿಹಾಸಿಕ ಶ್ರೀ ಸಂಗಮನಾಥ ದೇವಸ್ಥಾನ ಬಳಿಯ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮ ಸ್ಥಾನವು ನೀರಿಲ್ಲದೆ ಬತ್ತಿಹೋಗಿತ್ತು. ಇದ್ದ ತುಸು ನೀರು ಪಾಚಿಗಟ್ಟಿ ಗಬ್ಬು ನಾರುತ್ತಿತ್ತು. ನದಿಯೊಳಗಣ ಪವಿತ್ರ ಜಲ ಸ್ನಾನ ಮಾಡಲು ಭಕ್ತರು ಪರದಾಡಬೇಕಾದ ಪ್ರಸಂಗ ಎದುರಾಯಿತು. ರಾಡಿ ನೀರಿನಲ್ಲೇ ಸ್ನಾನ ಮಾಡಿದ ನೂರಾರು ಜನರು ಹಬ್ಬದ ಸಂಪ್ರದಾಯ ಪೂರ್ಣಗೊಳಿಸಿದರು.

ಪ್ರತಿ ವರ್ಷ ನದಿಯಲ್ಲಿ ಮರಳಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಯುವಜನರಿಗೆ ಈ ಬಾರಿ ನಿರಾಶೆ ಕಾದಿತ್ತು. ಮರಳು ದಂಧೆಕೋರರ ದಾಳಿಗೆ ತುತ್ತಾಗುವ ಮೂಲಕ ಇಡೀ ನದಿ ಪ್ರದೇಶ ಬಂಜರು ಭೂಮಿಯಂತೆ ಕಂಗೊಳಿಸಿ ಜನರ ಅಸಮಾದಾನಕ್ಕೆ ಕಾರಣವಾಯಿತು. ಹಬ್ಬದ ಊಟ ಮಾಡಲು ಜಾಗವಿಲ್ಲದಷ್ಟು ಮರಳು ಮಾಯವಾಗಿ ಚೀಪುಗಲ್ಲುಗಳ ರಾಶಿ ಹರಡಿಕೊಂಡಿತ್ತು. ಕುಡಿಯಲು ಯೋಗ್ಯವಲ್ಲದಷ್ಟು ನದಿ ನೀರು ಕಲುಷಿತ ಗೊಂಡಿತ್ತು.

ಮನೆಯಿಂದ ತರಲಾದ ನೀರನ್ನೇ ಜನರು ಕುಡಿಯಬೇಕಾಯಿತು. ಬರಿದಾದ ನದಿಯಲ್ಲಿ ಬೇಸರದಿಂದ ಕಾಲ ಕಳೆದು ಭಕ್ತರು ಮನೆಗಳಿಗೆ ಮರಳಬೇಕಾಯಿತು. ನಿರೀಕ್ಷೆಯಂತೆ ನದಿಯಲ್ಲಿ ಜನರು ಸೇರದ ಕಾರಣ ಸಂಕ್ರಾಂತಿ ಸಂಭ್ರಮ ನಿರಾಶೆಯಿಂದ ಕೂಡಿತ್ತು. ಇದರ ಮಧ್ಯೆ ಕೆಲ ಯುವಕರು ಜಲಕ್ರೀಡೆಯಲ್ಲಿ ತೊಡಗಿ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next