ಪಣಂಬೂರು: ನವಮಂಗಳೂರು ಬಂದರಿನಿಂದ 2.5 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದ್ದ ತ್ರಿದೇವ್ ಪ್ರೇಮ್ ಡ್ರೆಜರ್ ಮುಳುಗಿ ಐದು ದಿನಗಳು ಕಳೆದಿದ್ದು, ಇದುವರೆಗೆ ಸಮುದ್ರ ಮಾಲಿನ್ಯ ಕಂಡುಬಂದಿಲ್ಲ
ಶುಕ್ರವಾರ ನವಮಂಗಳೂರು ಬಂದರಿನ ಟಗ್ ಮೂಲಕ ಚೆನ್ನೈಯ ತಜ್ಞ ಅಧಿಕಾರಿ ಡಾ| ಆರ್.ಡಿ. ತ್ರಿಪಾಠಿ ಮತ್ತು ಎನ್‌ಎಂಪಿಟಿ ಅ ಧಿಕಾರಿಗಳು ನೌಕೆ ಮುಳುಗಡೆಯಾದ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡ್ರೆಜರ್‌ನಲ್ಲಿದ್ದ ಡೀಸೆಲ್ ಪ್ರಮಾಣ ಕಡಿಮೆ. ಅದು ಮುಳುಗಡೆಯಾದ ಸ್ಥಳ ಮತ್ತು ಆಸುಪಾಸಿನ ಪ್ರದೇಶದ ಮೇಲೆ ಆಂಧ್ರಪ್ರದೇಶದ ಇಸ್ರೋ ಕೇಂದ್ರದ ಮೂಲಕ ನಿಗಾ ಇರಿಸಲಾಗಿದೆ. ಕೋಸ್ಟ್‌ಗಾರ್ಡ್ ನೌಕೆ ನಿತ್ಯ ಸ್ಥಳಕ್ಕೆ ತೆರಳಿ ವರದಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮುಳುಗಿದ ಹಡಗು ಮತ್ತಷ್ಟು ಬಿರುಕು ಬಿಟ್ಟು ಮಾಲಿನ್ಯ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಡ್ರೆಜರ್‌ನ ಮಾಲಕ ಮರ್ಕೆಟರ್ ಲಿ.ಗೆ ಹಡಗಿನ ಅವಶೇಷ ಹೊರತೆಗೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಹಡಗುಗಳು ಬಂದರಿಗೆ ಆಗಮಿಸಿ-ನಿರ್ಗಮಿಸುವ ಸ್ಥಳದಲ್ಲೇ ಡ್ರೆಜರ್ ಮುಳುಗಡೆಯಾಗಿರುವುದು ಎನ್‌ಎಂಪಿಟಿಗೆ ಸಮಸ್ಯೆಯಾಗಿದೆ. ಈಗ ಅನ್ಯ ಹಡಗು ಸಂಚಾರ ಸಂದರ್ಭ ನಾವಿಕರಿಗೆ ಮುಳುಗಡೆ ಪ್ರದೇಶದ ಮಾಹಿತಿ ನೀಡಲಾಗುತ್ತಿದೆ ಎಂದರು.
ಎನ್‌ಎಂಪಿಟಿ ಚೆಯರ್‌ಮನ್ ಎ.ವಿ. ರಮಣ್ ಮಾತನಾಡಿ, ಶುಕ್ರವಾರ ಸಮುದ್ರದ ನೀರನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ತೈಲ ಜಿಡ್ಡಿನ ಅಂಶ ಪತ್ತೆಯಾಗಿಲ್ಲ. ಎಂಆರ್‌ಪಿಎಲ್, ಕೊಚ್ಚಿನ್ ಬಂದರು ಸಹಿತ ತಜ್ಞರ ನೆರವು ಯಾಚಿಸಲಾಗಿದೆ. ಈಗಾಗಲೇ ಮರ್ಕೆಟರ್ ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ಕೇಸು ದಾಖಲಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದರು. ಎನ್‌ಎಂಪಿಟಿಯ ಹಿರಿಯ ಅ ಧಿಕಾರಿಗಳು ಉಪಸ್ಥಿತರಿದ್ದರು.