ಪಣಂಬೂರು: ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಬಂದಿದ್ದ ಮುಂಬಯಿ ಮೂಲದ ಮರ್ಕೆಟರ್ ಸಂಸ್ಥೆಯ ಮತ್ತೂಂದು ಡ್ರೆಜ್ಜರ್ ಭಗವತಿ ಪ್ರೇಮ್‌ನ ಚುಕ್ಕಾಣಿ ತುಂಡಾಗಿ ಸಮುದ್ರದ ಪ್ರಕ್ಷುಬ್ಧತೆಗೆ ಮರಳಿನಲ್ಲಿ ಹೂತು ಹೋದ ಘಟನೆ ಸೋಮವಾರ ಸಂಭವಿಸಿದೆ. ಡ್ರೆಜ್ಜರ್‌ನಲ್ಲಿ ನಾವಿಕನ ಸಹಿತ ಒಟ್ಟು 15 ಮಂದಿ ಸಿಬಂದಿ ಇದ್ದಾರೆ. ಅವರನ್ನು ರಕ್ಷಿಸಲಾಗಿದೆ.
ನವಮಂಗಳೂರು ಬಂದರು ಸಮೀಪದ ಚಿತ್ರಾಪುರ ಬಳಿ ತೇಲಿ ಬಂದ ಡ್ರೆಜ್ಜರನ್ನು ಎನ್‌ಎಂಪಿಟಿ ಟಗ್‌ಗಳು ನಿಯಂತ್ರಣಕ್ಕೆ ತರಲು ಸತತ ಪ್ರಯತ್ನ ನಡೆಸಿದ್ದು, ಸಂಜೆಯ ವೇಳೆ ಡ್ರೆಜ್ಜರನ್ನು ಹೊಸ ಬೆಟ್ಟು ಸಮೀಪ ಸಮುದ್ರ ತೀರದಲ್ಲಿ ನಿಲ್ಲಿಸಲಾಯಿತು.
ನವಮಂಗಳೂರು ಬಂದರಿನಲ್ಲಿ 2016-17ರಲ್ಲಿ ಹೂಳೆತ್ತುವ ಗುತ್ತಿಗೆ ವಹಿಸಿಕೊಂಡಿರುವ ಮರ್ಕೆಟರ್ ಸಂಸ್ಥೆ ತನ್ನ ಡ್ರೆಜ್ಜರ್‌ಗಳನ್ನುಗಳನ್ನು ತರಿಸಿತ್ತು. ಆದರೆ ಕಾಮಗಾರಿಯಲ್ಲಿ ಲೋಪ ಬಂದ ಕಾರಣ ಸಂಸ್ಥೆಯ ಗುತ್ತಿಗೆ ರದ್ದುಗೊಳಿಸಿ ಹಣ ಪಾವತಿ ತಡೆಹಿಡಿಯಲಾಗಿತ್ತು. ಬಳಿಕ ಈ ಡ್ರೆಜ್ಜರ್‌ಗಳು ಬಂದರಿನ ಹೊರ ವಲಯ ದಲ್ಲಿ ಲಂಗರು ಹಾಕಿದ್ದವು.
ಎರಡನೇ ಪ್ರಕರಣ
ನ. 3ರಂದು ಇದೇ ಸಂಸ್ಥೆಯ ತ್ರಿದೆವ್ ಪ್ರೇಮ್ ಲಂಗರು ಹಾಕಿದ ಸ್ಥಳದಲ್ಲಿಯೇ ಮುಳುಗಡೆಯಾಗಿ ಸಂಸ್ಥೆ ಕೋಟ್ಯಂತರ ರೂಪಾಯಿ ನಷ್ಟಕ್ಕೊಳಗಾಗಿತ್ತು. ಎನ್‌ಎಂಪಿಟಿ ತೈಲ ಸೋರಿಕೆಯಾಗದಂತೆ ಕ್ರಮ ಕೈಗೊಂಡಿತ್ತು. ಇದೀಗ ಮತ್ತೂಂದು ಹಡಗು ಸಂಕಷ್ಟದಲ್ಲಿದ್ದು ಯಾವುದೇ ಕ್ಷಣದಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ ಎಂದು ಮೀನು ಗಾರರು ಭೀತಿ ವ್ಯಕ್ತಪಡಿಸಿದ್ದಾರೆ.
ಇದರಿಂದ ಮೀನುಗಾರಿಕಾ ದೋಣಿಗಳಿಗೆ ಅಡಚಣೆಯಾಗುವ ಸಾಧ್ಯತೆಯಿದ್ದು, ತತ್‌ಕ್ಷಣ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.