Advertisement
ಉಡುಪಿ: ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತೆಗಳ ವೇಗ ಹೆಚ್ಚಬೇಕಿರುವ ಈ ಸಮಯ ದಲ್ಲಿ ಉಡುಪಿ ನಗರಸಭೆಗೆ ಕಾರ್ಮಿಕರ ಅಭಾವವೇ ದೊಡ್ಡ ಸಮಸ್ಯೆ. ಇದರ ಪರಿಣಾಮ ಇಂದ್ರಾಳಿ ಮತ್ತು ಸಗ್ರಿ ವಾರ್ಡ್‌ಗಳಲ್ಲಿಯೂ ಎದ್ದು ಕಾಣಿಸುತ್ತಿದೆ.
ಸಗ್ರಿ ಕುಂಡೇಲುವಿನಿಂದ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ರೈಲ್ವೇ ಬ್ರಿಡ್ಜ್ ಭಾಗ, ಸಗ್ರಿನೋಳೆ ದೇವರಾಯ ಪ್ರಭು ಮನೆಯಿಂದ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ವರೆಗಿನ ತೋಡುಗಳಲ್ಲಿ ಹೂಳು ತುಂಬಿದೆ. ಅಕ್ಕಪಕ್ಕದ ಪ್ರದೇಶ ಮತ್ತು ಗದ್ದೆಗಳಿಗೆ ನೀರು ಉಕ್ಕಿ ಹರಿಯುವುದು ಮಳೆಗಾಲದಲ್ಲಿ ಸಾಮಾನ್ಯ. ವಿದ್ಯಾರತ್ನನಗರ, ಲಕ್ಷ್ಮೀಂದ್ರ ನಗರ, ಹಯಗ್ರೀವ ನಗರ, ಆದಿ ಶಕ್ತಿ ದೇವಸ್ಥಾನ, ಬಾಲಾಜಿ ಲೇಔಟ್, ಸಗ್ರಿ ಚಕ್ರತೀರ್ಥ, ಮಲೆ ಜುಮಾದಿ ದೈವಸ್ಥಾನ, ಪುರುಷೋತ್ತಮ ನಗರ, ಮನೋಲಿಗುಜ್ಜಿ; ಇಂದ್ರಾಳಿ ವಾರ್ಡ್‌ನ ಅನಂತಕಲ್ಯಾಣ ಮುಖ್ಯರಸ್ತೆ, ಮಂಜುಶ್ರೀ ನಗರ, ಮಂಚಿಕುಮೇರಿ, ದುರ್ಗಾನಗರ, ಇಂದ್ರಾಳಿ, ವಿ.ಪಿ. ನಗರ ಇತ್ಯಾದಿ ಕಡೆ ಚರಂಡಿ ಹೂಳೆತ್ತುವ ಕೆಲಸ ಇನ್ನಷ್ಟೇ ಆಗಬೇಕಿದೆ.
Related Articles
ಸಮಸ್ಯೆ, ಅಪಾಯಕಾರಿ ಮರಗಳು
ವಿದ್ಯಾರತ್ನನಗರ ಭಾಗದಿಂದ ಕೊಳಚೆ ನೀರು ಸಗ್ರಿ ವಾರ್ಡ್‌ನ ಕೆಲವು ಭಾಗಕ್ಕೆ ಬರುತ್ತಿರುವುದು ದೊಡ್ಡ ಸಮಸ್ಯೆ. ಇದರಿಂದ 6-7 ಬಾವಿಗಳ ನೀರು ಕಲುಷಿತವಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಈ ವ್ಯಾಪ್ತಿಯ ಅನೇಕ ಕಡೆ ದಾರಿ ದೀಪ ಹಾಳಾಗಿವೆ. ಇಂದ್ರಾಳಿ ಮುಖ್ಯ ರಸ್ತೆಯ ಕೆಲವು ಕಡೆ ಸರಿಪಡಿಸಿದ್ದರೆ ಹಲವೆಡೆ ಬಾಕಿಯಿವೆ. ಗುರುವಾರ ಇಂದ್ರಾಳಿ 2ನೇ ಕ್ರಾಸ್ ಬಳಿ ಮರ ಬಿದ್ದು ರಸ್ತೆ ಬ್ಲಾಕ್ ಆಗಿತ್ತು. ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಶುಕ್ರವಾರ ಮರ ತೆರವುಗೊಳಿಸಲಾಗಿದೆ. ಇಂತಹ ಅಪಾಯಕಾರಿ ಮರಗಳು ಇಂದ್ರಾಳಿ ಹೈಸ್ಕೂಲ್ ಮತ್ತಿತರೆಡೆ ಇವೆ. ಇವುಗಳಿಂದ ಅಪಾಯ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯ ನಿವಾಸಿ ಅರುಣ್ ಕುಮಾರ್ ಅವರ ಒತ್ತಾಯ.
Advertisement
ಸಂಪರ್ಕ ರಸ್ತೆ ಕಾಮಗಾರಿ ಬಾಕಿಮಂಚಿ ಮೂಲಸ್ಥಾನದಿಂದ ಕುಕ್ಕಿಕಟ್ಟೆಯಾಗಿ ಮಣಿಪಾಲಕ್ಕೆ ತೆರಳುವ ರಸ್ತೆ, ಮಂಜುಶ್ರೀ ನಗರದಿಂದ ವಾಗ್ಲೆ ಸ್ಟೋರ್ ಬಳಿ ಸಂಪರ್ಕಿಸುವ ರಸ್ತೆಯ ಕಾಮಗಾರಿ ಬಾಕಿ ಇದೆ ಎಂದು ಸ್ಥಳೀಯರಾದ ರವೀಂದ್ರ ನಾಯಕ್ ಹೇಳಿದ್ದಾರೆ. ಕೆಲಸ ನಿಧಾನ
ಕಳೆದ ವರ್ಷ ಇಷ್ಟು ಹೊತ್ತಿಗೆ ಚರಂಡಿಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಕತ್ತರಿಸಿ ತೋಡನ್ನು ಸರಿಪಡಿಸಲಾಗಿತ್ತು. ಹಯಗ್ರೀವ ನಗರದ ಕೆಲವೆಡೆ ಸೋಮವಾರದಿಂದ ಹೂಳೆತ್ತುವ ಕೆಲಸ ಆರಂಭವಾಗಿದೆ. ವಾರಕ್ಕೊಮ್ಮೆ ಮಾತ್ರ ಕಾರ್ಮಿಕರು ಸಿಗುವುದರಿಂದ ನಿಧಾನವಾಗುತ್ತಿದೆ. ವಿದ್ಯಾರತ್ನ ಭಾಗದಲ್ಲಿ ಡ್ರೈನೇಜ್ ಅಸಮರ್ಪಕ ನಿರ್ವಹಣೆಯಿಂದಾಗಿ ಸಗ್ರಿ ವಾರ್ಡ್‌ನ ಕೆಲವು ಮನೆಗಳ ಬಾವಿ ನೀರು ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತಾಡಿದರೂ ಬಗೆಹರಿದಿಲ್ಲ.
-ಭಾರತೀ ಪ್ರಶಾಂತ್,
19ನೇ ಸಗ್ರಿ ವಾರ್ಡ್, ನಗರಸಭೆ ಸದಸ್ಯೆ ಪೂರ್ವ ತಯಾರಿ ಇನ್ನಷ್ಟೇ ಆಗಬೇಕು
ಮಳೆಗಾಲದ ಪೂರ್ವ ಸಿದ್ಧತೆ ಇನ್ನಷ್ಟೇ ವೇಗ ಪಡೆಯಬೇಕಿದೆ. ಜೆಸಿಬಿ ಬಳಸಿ ಎರಡು ದಿನಗಳ ಕಾಲ ಆಗುವಷ್ಟು ಕೆಲಸ ಇದೆ. ಕಾರ್ಮಿಕರ ಕೊರತೆ ಎದುರಾಗಿದೆ. ಅಗತ್ಯ ಕಾರ್ಮಿಕರನ್ನು ನೀಡುವಂತೆ ನಗರ ಸಭೆಯಲ್ಲಿ ಬೇಡಿಕೆ ಇರಿಸಿದ್ದೇವೆ.
-ಅಶೋಕ್ ನಾಯಕ್,
20ನೇ ಇಂದ್ರಾಳಿ ವಾರ್ಡ್, ನಗರಸಭೆ ಸದಸ್ಯ