ದೇವನಹಳ್ಳಿ: ಕೆರೆಗಳ ನಿರ್ಮಾಣ ಮತ್ತು ಅವುಗಳ ಪುನಶ್ಚೇತನ ಕಾರ್ಯಗಳು ನಮ್ಮ ಹಿರಿಯರ ದೂರದೃಷ್ಟಿ ಯೋಚನೆಯಾಗಿದೆ. ಇಂತಹ ಜಲಮೂಲಗಳ ರಕ್ಷಣೆಯಿಂದ ಅಂತರ್ಜಲದ ಮಟ್ಟ ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ 399.12 ಎಕರೆ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನೀರನ್ನು ಮಿತವಾಗಿ ಬಳಸಿ: ಪೂರ್ವಜರು ಸ್ಥಾಪಿಸಿರುವ ಜಲ ಮೂಲಗಳನ್ನು ಸಂರಕ್ಷಿಸಿಕೊಳ್ಳ ಬೇಕು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ರಾಕೃತಿಕ ಸಂಪನ್ಮೂಲದ ಮೇಲೆ ಒತ್ತಡವಿದೆ. ಭೂಮಿಯ ಮೇಲಿರುವ ಸಂಪನ್ಮೂಲದಲ್ಲಿ ಈಗಾಗಲೇ ಒಂದೂ ವರೆ ಪಟ್ಟು ಹೆಚ್ಚು ಬಳಸಿಕೊಂಡಿದ್ದೇವೆ. ಕಳೆದ ತಿಂಗಳು ಚೆನ್ನೈ ಮಹಾ ನಗರ ನೀರಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿರುವ ನಿದರ್ಶನ ನಮ್ಮ ಎದುರಿಗಿದೆ. ಈಗಾಗಲೇ ಮುಂಗಾರು ಮಳೆ ಕೊರತೆ ಎದುರಿಸುತ್ತಿ ದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರಿ ನಲ್ಲೂ ಇಂತಹ ಸಮಸ್ಯೆ ಎದುರಾಗುವುದರಲ್ಲಿ ಸಂದೇಶವಿಲ್ಲ. ಹೀಗಾಗಿ ಪ್ರತಿ ಹನಿ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಸಂರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳಬೇಕು. ಈಗ ಅನುಭವಿಸುತ್ತಿರುವ ನೀರಿನ ಬವಣೆ ವಿಕೋಪಕ್ಕೆ ಹೋದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಬರಲಿದೆ ಎಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರ ಹಣದಿಂದ ಕಾಮಗಾರಿ: ಬೂದಿಗೆರೆ ಕೆರೆ ಹೂಳೆತ್ತಲು ಸರ್ಕಾರದ ಯಾವುದೇ ಅನುದಾನ ಬಳಸಿಲ್ಲ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಜಿಲ್ಲೆ ಯಲ್ಲಿ ಹಲವು ಕೆರೆಗಳನ್ನು ಹೂಳೆತ್ತುವ ಕಾರ್ಯ ವಾಗುತ್ತಿದೆ. ಕೆರೆಯ ಹೂಳೆತ್ತುವ ಕಾರ್ಯ ಶತಮಾನ ಗಳಿಂದ ಆಗಿಲ್ಲ. ಕೆರೆಯಲ್ಲಿ ಗಿಡಗಂಟೆ ಬೆಳೆದಿರು ವುದರಿಂದ ಮಧ್ಯಭಾಗದ ಕೆರೆಯಲ್ಲಿ ನೀರಿನ ಅಂಶವೇ ಇಲ್ಲ. ಸಂಪೂರ್ಣ ಒಣಗಿ ಬಿರುಕು ಬಿಟ್ಟಿದೆ. ಜಲ ಮೂಲ ಸಂರಕ್ಷಣೆ ಮತ್ತು ಕೆರೆ ಅಭಿವೃದ್ಧಿಯಲ್ಲಿ ಸ್ಥಳೀಯರ ಸಹಭಾಗಿತ್ವ ಮಹತ್ವದ್ದಾಗಿದೆ. ಕೆರೆಗಳಲ್ಲಿ ನೀರು ತುಂಬದಿದ್ದರೆ ಮತ್ತು ಸಂರಕ್ಷಣೆ ಮಾಡದೇ ಇದ್ದರೆ ಪ್ರಸ್ತುತ ಈಗ ಅನುಭವಿಸುತ್ತಿರುವ ಬವಣೆ ವಿಕೋಪಕ್ಕೆ ತಲುಪುವ ಸಾಧ್ಯತೆಗಳಿವೆ. ಹೀಗಾಗಲೇ ಪ್ರತಿಯೊಬ್ಬರು ಅರ್ಥೈಸಿಕೊಂಡು ಎಚ್ಚರಿಕೆ ವಹಿಸ ಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಕೆರೆ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ: ಶಾಸಕ ಎಲ್.ಎನ್. ನಾರಾಯಣಸ್ವಾಮಿ ಮಾತನಾಡಿ, ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ 30 ಕೋಟಿ ರೂ.ಗಳ ಅನು ದಾನವನ್ನು ದೇವನಹಳ್ಳಿ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಬಿಡುಗಡೆಗೊಳಿಸಿದ್ದೇನೆ. ನೀರಿನ ಬವಣೆಯಿಂದ ಜನ ಯಾವ ರೀತಿ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಕೆರೆ ಅಭಿವೃದ್ಧಿಯಾದರೆ ಮಳೆ ನೀರು ಸಂಗ್ರಹಣೆಯಾಗುವುದರಿಂದ ಪ್ರಾಣಿ ಪಕ್ಷಿಗಳಿಗೆ ಜಾನುವಾರು, ಗದ್ದೆಗಳಿಗೆ ಹಾಗೂ ಜನರಿಗೆ ನೀರು ದೊರೆಯುತ್ತದೆ. ಸಮೀಪದ ಕೊಳವೆ ಬಾವಿ ಗಳಲ್ಲಿ ಅಂತರ್ಜಲ ಹೆಚ್ಚುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕೆ. ಶ್ರೀನಿವಾಸ್ ಗೌಡ ಮಾತನಾಡಿ, ಗ್ರಾಮಸ್ಥರ ಸಭೆಯಲ್ಲಿ ಹೂಳೆತ್ತುವ ಕಾಮಗಾರಿಗೆ ದೇಣಿಗೆ ಸಂಗ್ರಹವಾಗಿದೆ. ಟ್ರಾಕ್ಟರ್, ಜೆಸಿಬಿ, ಟಿಪ್ಪರ್ ವಾಹನಗಳು 200ಕ್ಕೂ ಹೆಚ್ಚು ಕಾಮಗಾರಿಯಲ್ಲಿ ಉಚಿತವಾಗಿ ತೊಡಗಿಸಿಕೊಳ್ಳುವುದಾಗಿ ವಾಹನ ಮಾಲಿಕರು ತಿಳಿಸಿದ್ದಾರೆ. ಪಕ್ಷಾತೀತವಾಗಿ ಕೆರೆ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ್‌ಗೌಡ, ಜಿಪಂ ಸದಸ್ಯ ಕೆ.ಸಿ. ಮಂಜುನಾಥ್, ರಾಜ್ಯಸ್ವ ನಿರೀಕ್ಷಕ ಚಿದಾನಂದ್, ಗ್ರಾಪಂ ಮಾಜಿ ಅಧ್ಯಕ್ಷ ಪಾಪಣ್ಣ, ಜಯರಾಮೇಗೌಡ, ರಾಜಣ್ಣ, ವಿಎಸ್‌ಎಸ್‌ಎನ್ ನಿರ್ದೇಶಕ ಹಿತ್ತರಹಳ್ಳಿ ರಮೇಶ್, ಗ್ರಾಪಂ ಸದಸ್ಯ ರಾಮಮೂರ್ತಿ, ರಾಮಾಂಜಿನೇಯ ದಾಸ್, ನಟರಾಜು, ವಿಎಸ್‌ಎಸ್‌ಎನ್ ಅಧ್ಯಕ್ಷ ಶಂಕರಪ್ಪ, ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಮೂರ್ತಿ, ಮುಖಂಡ ಶಿವಣ್ಣ, ನಾರಾಯಣಸ್ವಾಮಿ, ಕೇಶವ ಮತ್ತಿತರರು ಇದ್ದರು.