Advertisement

1,500 ಫಲಾನುಭವಿಗಳಿಗೆ ನನಸಾಗದ ಸೂರಿನ ಕನಸು

11:46 PM Mar 08, 2021 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಮಂಜೂರು ಆಗಿರುವ ಎರಡು ಪ್ರಮುಖ ಜಿ-ಪ್ಲಸ್‌ 3 (ಜಿ+3) ಬಹು ಅಂತಸ್ತು ವಸತಿ ಯೋಜನೆಗಳಿಗೆ ಎದುರಾಗಿರುವ ಜಾಗದ ಸಮಸ್ಯೆಯಿಂದ ಸ್ವಂತ ಸೂರು ಪಡೆಯುವ 1,500 ಫಲಾನುಭವಿಗಳ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆ ಕಾಣಿಸುತ್ತಿಲ್ಲ.

Advertisement

ಕೇಂದ್ರ ಸರಕಾರ ಅನುದಾನಿತ ಸರ್ವ ರಿಗೂ ಸೂರು ಯೋಜನೆಯಲ್ಲಿ ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನೆಯಡಿ ವಸತಿ ರಹಿತರಿಗೆ ನಗರದ ಪದವು ಗ್ರಾಮದ ಶಕ್ತಿನಗರದಲ್ಲಿ ಒಂದು, ಇಡ್ಯಾದಲ್ಲಿ ಎರಡು ಹಾಗೂ ತಿರುವೈಲಿನಲ್ಲಿ ಒಂದು ಜಿ-ಪ್ಲಸ್‌3 ಮಾದರಿಯ ವಸತಿ ಯೋಜನೆಗಳು ಮಂಜೂರಾಗಿತ್ತು. ಇದರಲ್ಲಿ ಇಡ್ಯಾದ 2 ಯೋಜನೆಗಳು ಮಾತ್ರ ಅನುಷ್ಠಾನದಲ್ಲಿದ್ದು, ಉಳಿದಂತೆ ಶಕ್ತಿನಗರ, ತಿರುವೈಲ್‌ ಯೋಜನೆಗಳು ಜಾಗದ ಸಮಸ್ಯೆಯಿಂದಾಗಿ ಅತಂತ್ರ ಸ್ಥಿತಿಯಲ್ಲಿದೆ.

ಪದವು ಗ್ರಾಮದ ಶಕ್ತಿನಗರದ ರಾಜೀವ ನಗರದಲ್ಲಿ ಒಟ್ಟು 930 ಫಲಾನುಭವಿಗಳಿಗೆ ವಸತಿ ನೀಡುವ ಜಿ- ಪ್ಲಸ್‌3 ಮಾದರಿಯ ವಸತಿ ಸಂಕೀರ್ಣ ಯೋಜನೆ ಮಂಜೂರಾಗಿ ಸುಮಾರು 4 ವರ್ಷಗಳಾಗಿವೆ. 3ವರ್ಷಗಳ ಹಿಂದೆ ±ಹಕ್ಕುಪತ್ರ ಕೂಡ ವಿತರಿಸಲಾಗಿತ್ತು.

ನಿವೇಶನಕ್ಕೆ ಆಯ್ಕೆ ಮಾಡಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ ಕಾರಣದಿಂದಾಗಿ ಸಮಸ್ಯೆ ಎದುರಾಗಿದೆ. ಕಾಮಗಾರಿ ಆರಂಭಿಸುವ ಸಂದರ್ಭ ಅರಣ್ಯ ಇಲಾಖೆಯಿಂದ ಇದಕ್ಕೆ ತಡೆ ಬಂದಿತ್ತು. ಇದೀಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅರಣ್ಯ ಇಲಾಖೆಗೆ ಬದಲಿ ಜಾಗ ಮೀಸಲಿರಿಸುವ ಸಲುವಾಗಿ ತೆಂಕ ಎಡಪದವು ಗ್ರಾಮದಲ್ಲಿ 20 ಎಕ್ರೆ ಜಾಗವನ್ನು ಪಾಲಿಕೆಗೆ ಪಡೆದುಕೊಳ್ಳುವ ಪ್ರಸ್ತಾವನೆ ರೂಪಿಸಲಾಗಿದೆ. ಇದಕ್ಕೆ ಕೇಂದ್ರ ಅರಣ್ಯ, ಪರಿಸರ ಇಲಾಖೆ ಅನುಮತಿಯೂ ಅಗತ್ಯವಿದೆ. ಇದೆಲ್ಲಾ ಮುಗಿದು ಯೋಜನೆ ಯಾವಾಗ ಕಾರ್ಯಗತಗೊಳ್ಳುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ರೀತಿ ತಿರುವೈಲು ಗ್ರಾಮದಲ್ಲಿ 600 ಫಲಾನುಭವಿ ಗಳನ್ನು ಆಯ್ಕೆ ಮಾಡಿ ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆಯಲ್ಲಿ ಜಿ-ಪ್ಲಸ್‌3 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿತ್ತು. ಈ ಜಾಗದಲ್ಲಿ ವಸತಿ ನಿರ್ಮಿಸಲು ತಾಂತ್ರಿಕ ಸಮಸ್ಯೆ ನಿರ್ಮಾಣ
ವಾಗಿರುವ ಕಾರಣ ಈ ಜಾಗವನ್ನು ಕೈಬಿಟ್ಟು ಬೇರೆ ಕಡೆ ಜಾಗ ಹೊಂದಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಬದಲಿ ಜಾಗ ಒದಗಿಸಿಕೊಡುವಂತೆ ಮಂಗಳೂರು ಸಹಾಯಕ ಆಯುಕ್ತರನ್ನು ಕೋರಲಾಗಿದೆ.

ಇಡ್ಯಾದಲ್ಲಿ 2 ಯೋಜನೆಗಳು ಪ್ರಗತಿಯಲ್ಲಿ
ಇಡ್ಯಾದಲ್ಲಿ ಜಿ-ಪ್ಲಸ್‌3 ಮಾದರಿಯ ಎರಡು ವಸತಿ ಸಂಕೀರ್ಣ ನಿರ್ಮಾಣ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಗ್ರಾಮದ ಸರ್ವೇ ನಂ.16 ಪಿ1ರಲ್ಲಿ 600 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಸರ್ವರಿಗೂ ಸೂರು ಯೋಜನೆಯಲ್ಲಿ ಎಎಚ್‌ಪಿ (ಅರ್ಪೊರ್ಡೆಬಲ್‌ ಹೌಸಿಂಗ್‌ ಇನ್‌ ಪಾಟ್ನರ್‌ಶಿಪ್‌) ಜಿ -ಪ್ಲಸ್‌3 ಮಾದರಿಯಲ್ಲಿ 600 ಮನೆಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರಕಾರದಿಂದ 1ನೇ ಕಂತಿನ ಅನುದಾನ 3.60 ಕೋ.ರೂ. ಮಂಜೂರಾಗಿದ್ದೆ ಇದರಲ್ಲಿ 1,44,20,613 ರೂ. ಈಗಾಗಲೇ ನಿರ್ಮಾಣ ಕಾಮಗಾರಿಗೆ ಪಾವತಿಸಲಾಗಿದೆ. ಇನ್ನೊಂದು ಯೋಜನೆಯಲ್ಲಿ 192 ಫಲಾನುಭವಿಗಳಿಗೆ ಜಿ – ಪ್ಲಸ್‌3 ವಸತಿ ಸಂಕೀಣ ನಿರ್ಮಿಸಿ ಪ್ರಧಾನ್‌ ಮಂತ್ರಿ ಅವಾಸ್‌ ಯೋಜನೆಯಡಿ ವಿತರಿಸುವ ಯೋಜನೆಗೆ ಈಗಾಗಲೇ ಅನುಮೋದನೆ ದೊರಕಿದೆ. ಪರಿಷ್ಕೃತ ಯೋಜನ ವರದಿಯನ್ನು ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಟೆಂಡರ್‌ ಕರೆಯಲಾಗಿದೆ.

Advertisement

ಪ್ರಕ್ರಿಯೆಗಳು ಪ್ರಗತಿಯಲ್ಲಿವೆ
ಶಕ್ತಿನಗರದಲ್ಲಿ ಜಿ+3 ವಸತಿ ಸಂಕೀರ್ಣಕ್ಕೆ ಸಂಬಂಧ ಪಟ್ಟಂತೆ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಅರಣ್ಯ ಇಲಾಖೆಗೆ ಪ್ರತಿಯಾಗಿ ಬೇರೆ ಕಡೆ 20 ಎಕ್ರೆ ಜಾಗ ನೀಡುವ ಪ್ರಸ್ತಾವ ಒಪ್ಪಿಗೆಯಾಗಿ ಇದನ್ನು ಪಾಲಿಕೆ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಡ ಲಾಗಿದೆ. ಬಳಿಕ ಇದು ಬೆಂಗಳೂರಿನಲ್ಲಿರುವ ಕೇಂದ್ರ ಅರಣ್ಯ, ಪರಿಸರ ಇಲಾಖೆ ಕಚೇರಿಗೆ ಅನುಮೋದನೆಗೆ ಹೋಗಲಿದೆ. ಬಳಿಕ ನಿರ್ಮಾಣಕ್ಕೆ ಚಾಲನೆ ದೊರಕಲಿದೆ.
-ವೇದವ್ಯಾಸ ಕಾಮತ್‌, ಶಾಸಕರು

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next