Advertisement

ಬೆಳಗಾವಿ ಶೈಕ್ಷಣಿಕ ನಗರವಾಗಿಸುವ ಕನಸು: ಅಶ್ವತ್ಥನಾರಾಯಣ

06:26 PM Dec 22, 2021 | Team Udayavani |

ಬೆಳಗಾವಿ: ಕರ್ನಾಟಕದ ಮಕುಟಮಣಿಯಂತಿರುವ ಬೆಳಗಾವಿಯನ್ನು ಮಹಾರಾಷ್ಟ್ರದ ಪುಣೆಯನ್ನೂ ಮೀರಿಸುವಂತಹ ಶೆ„ಕ್ಷಣಿಕ ಸಂಸ್ಕೃತಿಯ ನಗರವನ್ನಾಗಿ ಬೆಳೆಸಬೇಕೆನ್ನುವುದೇ ಸರಕಾರದ ಹೊಂಗನಸಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ಇಲ್ಲಿನ ಟಿಳಕವಾಡಿಯಲ್ಲಿರುವ ಗೋವಿಂದರಾಮ್‌ ಸಕ್ಸೇರಿಯಾ ವಿಜ್ಞಾನ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾಗುತ್ತಿರುವ ಭೌತಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಸ್ನಾತಕೋತ್ತರ ಕೋರ್ಸುಗಳನ್ನು ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.

ಬೆಳಗಾವಿಯ ಇಂದಿನ ಬೆಳವಣಿಗೆಗೆ ಇಲ್ಲಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೇ ಕಾರಣವಾಗಿವೆ. ಇದನ್ನು ಜಾಗತಿಕ ಗುಣಮಟ್ಟದೊಂದಿಗೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು. ಈ ನಗರವು ನಾವೀನ್ಯತೆ, ಆವಿಷ್ಕಾರ ಮತ್ತು ತಂತ್ರಜ್ಞಾನಗಳಿಗೆ ಪರ್ಯಾಯ ಹೆಸರಾಗುವಂತೆ ಬೆಳೆಸಲಾಗುವುದು ಎಂದು ಅವರು ನುಡಿದರು.

ದೇಶದಲ್ಲಿ ಉತ್ತಮ ಶಿಕ್ಷಣದಿಂದ ಮಾತ್ರ ಪರಿವರ್ತನೆಯ ಗಾಳಿ ಬೀಸುವಂತೆ ಮಾಡಬಹುದು. ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿಯವರು ಸತತ ಐದು ವರ್ಷಗಳ ಪರಿಶ್ರಮದ ನಂತರ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಜಾರಿಗೆ ತಂದರು. ಇದನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಈಗ ದೇಶದಲ್ಲಿ ಏಳೆಂಟು ರಾಜ್ಯಗಳು ನಮ್ಮನ್ನೇ ಅನುಸರಿಸುತ್ತಿವೆ ಎಂದು ಅವರು ಹೇಳಿದರು.

ಎನ್‌ಇಪಿ ಜಾರಿಗೆಂದೇ ಕರ್ನಾಟಕವು ಕೇಂದ್ರ ಸರಕಾರಕ್ಕಿಂತಲೂ ಮೊದಲೇ 2020ರಲ್ಲಿ ಕಾರ್ಯಪಡೆಯನ್ನು ರಚಿಸಿತು. ಇದರಲ್ಲಿ ಶಿಕ್ಷಣದ ಜತೆಗೆ ನೈತಿಕತೆ ಮತ್ತು ಮೌಲ್ಯಗಳನ್ನು ರೂಢಿಸಲು ಕೂಡ ಒತ್ತು ಕೊಡಲಾಗಿದೆ. ಈ ಮೂಲಕ ಭಾರತೀಯತೆಯೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನ ಸಾಧ್ಯವಾಗಲಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

Advertisement

ಇಂದು ಸ್ಪರ್ಧೆಯು ಜಾಗತಿಕ ಮಟ್ಟದಲ್ಲಿದೆ. ಈ ಪೈಪೋಟಿಯಲ್ಲಿ ಗೆಲ್ಲಬೇಕೆಂದರೆ ಗುಣಮಟ್ಟದ ಶಿಕ್ಷಣವೊಂದೇ ನಿಜವಾದ ಆಯುಧವಾಗಿದೆ. ಇದರ ಜೊತೆಗೆ ಅಗತ್ಯ ಕೌಶಲ್ಯಗಳನ್ನೂ ಒದಗಿಸಲಾಗುತ್ತಿದೆ. ಅಮೆರಿಕ ಹೇಗೆ ಅವಕಾಶಗಳ ದೇಶವಾಗಿದೆಯೋ ಹಾಗೆಯೇ ಭಾರತದಲ್ಲಿ ಕರ್ನಾಟಕವು ಉಜ್ವಲ ಭವಿಷ್ಯದ ಕನಸನ್ನು ನನಸು ಮಾಡುವ ರಾಜ್ಯವಾಗಿದೆ ಎಂದು ಅವರು ತಿಳಿಸಿದರು.

ಎನ್‌ಇಪಿ ಮೂಲಕ ರಾಜ್ಯದ ಶೆ„ಕ್ಷಣಿಕ ವಲಯದ ಚಿತ್ರಣವನ್ನೇ ಆಮೂಲಾಗ್ರವಾಗಿಯೂ ಸಕಾರಾತ್ಮಕವಾಗಿಯೂ ಬದಲಿಸಲಾಗುತ್ತಿದೆ. ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿ.ವಿ.ದ ನೂತನ ಕ್ಯಾಂಪಸ್‌ನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಸ್ನೇಹಿಯಾಗಿ ನಿರ್ಮಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಸೌತ್‌ ಕೊಂಕಣ್‌ ಎಜ್ಯುಕೇಷನ್‌ ಸೊಸೈಟಿಯ ಅಧ್ಯಕ್ಷರಾದ ಶಾನಭಾಗ್‌, ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ, ಪ್ರಾಂಶುಪಾಲರಾದ ಬಿಂಬಾ ನಾಡಕರ್ಣಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next