ಚಿತ್ರರಂಗಕ್ಕೆ ಬಂದ ಒಂದೇ ವರ್ಷದಲ್ಲಿ ತುಂಬಾ ಬಿಝಿಯಾದ ನಾಯಕಿಯರ ಪಟ್ಟಿಯಲ್ಲಿ ಅಮೃತಾ ಸೇರುತ್ತಾರೆ. ಸದ್ಯ ಅಮೃತಾ ಕೈಯಲ್ಲಿ ಐದು ಸಿನಿಮಾಗಳಿವೆ. “ಉಸಿರೇ ಉಸಿರೇ’, “ಡ್ರೀಮ್ ಗರ್ಲ್’, “ನನ್ಮಗಳೇ ಹೀರೋಯಿನ್’, “ಮಾಲ್ಗುಡಿ ಸ್ಟೇಷನ್’ ಹಾಗೂ ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾವೊಂದರಲ್ಲೂ ಅಮೃತಾ ನಟಿಸುತ್ತಿದ್ದಾರೆ. ಯಾರು ಈ ಅಮೃತಾ ಎಂದರೆ ಕಳೆದ ವರ್ಷ ತೆರೆಕಂಡ “ಮಂಡ್ಯ ಟು ಮುಂಬೈ’ ಚಿತ್ರ ತೋರಿಸಬೇಕು. ಆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ಅಮೃತಾ.
ಅಂದಹಾಗೆ, ಅಮೃತಾ ಉಡುಪಿಯ ಹುಡುಗಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಬೆಂಗಳೂರು. ಸಹಜವಾಗಿಯೇ ಸಿನಿಮಾ ಆಸಕ್ತಿ ಅಮೃತಾಗೆ ಇತ್ತು. ಆದರೆ, ಸಿನಿಮಾ ಮಾಡಲೇಬೇಕೆಂಬ ಅತ್ಯುತ್ಸಾಹ ಮಾತ್ರ ಇರಲಿಲ್ಲ. ಏಕೆಂದರೆ, ಅಮೃತಾ ಭರತನಾಟ್ಯದಲ್ಲಿ ಖುಷಿ ಕಾಣುತ್ತಿದ್ದರು. ಹೌದು, ಅಮೃತಾ ರಾವ್ ಮೂಲತಃ ಭರತನಾಟ್ಯ ಕಲಾವಿದೆ. ಸಾಕಷ್ಟು ಶೋಗಳನ್ನು ಕೂಡಾ ಕೊಟ್ಟಿದ್ದಾರೆ. ಭರತನಾಟ್ಯ ಮಾಡಿಕೊಂಡು ಖುಷಿಯಾಗಿದ್ದ ಅಮೃತಾಗೆ ಸಿನಿಮಾ ಸಿಕ್ಕಿದ್ದು ಕೂಡಾ ಅಚಾನಕ್ ಆಗಿ ಎಂದರೆ ನೀವು ನಂಬಲೇಬೇಕು. ಅದು ದೇವಸ್ಥಾನವೊಂದರಲ್ಲಿ. ದೇವಸ್ಥಾನದಲ್ಲಿದ್ದ ಅಮೃತಾ ಅವರನ್ನು ನೋಡಿದ “ಮಂಡ್ಯ ಟು ಮುಂಬೈ’ ಚಿತ್ರದ ನಿರ್ದೇಶಕರು ಸಿನಿಮಾ ಆಫರ್ ಕೊಟ್ಟರಂತೆ.
ಪಾತ್ರ ಚೆನ್ನಾಗಿದೆ ಎಂದು ಒಪ್ಪಿಕೊಂಡ ಅಮೃತಾ ಈಗ ಬಿಝಿಯಾಗಿದ್ದಾರೆ. ಅವಕಾಶ ಬಂತೆಂಬ ಕಾರಣಕ್ಕೆ ಐದು ಸಿನಿಮಾಗಳನ್ನು ಅಮೃತಾ ಒಪ್ಪಿಕೊಂಡರಾ ಅಥವಾ ಪಾತ್ರಕ್ಕಾಗಿಯೇ ಎಂದು ನೀವು ಕೇಳಬಹುದು. ಆದರೆ, ಅಮೃತಾ ಪಾತ್ರ ನೋಡಿ ಖುಷಿಯಾಗಿ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ. “ನಾನು ಸಿನಿಮಾ ಮೇಲೆ ಸಿನಿಮಾ ಮಾಡಬೇಕು, ಕೈ ತುಂಬಾ ಸಿನಿಮಾ ಇರಬೇಕೆಂಬ ಕಾರಣಕ್ಕೆ ಬಂದ ಅವಕಾಶಗಳನ್ನು ಒಪ್ಪಿಕೊಂಡಿಲ್ಲ. ನನಗೆ ಸಾಕಷ್ಟು ಅವಕಾಶಗಳು ಬಂದುವು. ಅದರಲ್ಲಿ ನಾನು ಒಪ್ಪಿಕೊಂಡಿದ್ದು ಐದು ಸಿನಿಮಾ. ಆ ಐದು ಸಿನಿಮಾಗಳನ್ನು ಒಪ್ಪಿಕೊಳ್ಳಲು ಕಾರಣ ಅದರಲ್ಲಿನ ಪಾತ್ರ. ಐದಕ್ಕೆ ಐದು ಸಿನಿಮಾಗಳಲ್ಲಿ ವಿಭಿನ್ನವಾದ, ಹೊಸ ಬಗೆಯ ಪಾತ್ರ ಸಿಕ್ಕಿದೆ. ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಾನು ನನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಆ ನಿಟ್ಟಿನಲ್ಲಿ ಈ ಪಾತ್ರಗಳು ನನಗೆ ಸಹಾಯವಾಗುತ್ತವೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.
ಅಂದಹಾಗೆ, ಅಮೃತಾಗೆ ಒಂದು ಆಸೆ ಇದೆ. ಅದು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕೆಂದು. ನಾಯಕಿ ಪ್ರಧಾನ
ಚಿತ್ರಗಳಲ್ಲಾದರೆ ತಮ್ಮ ಪ್ರತಿಭೆಗೆ, ನಟನೆಗೆ ಹೆಚ್ಚು ಸ್ಕೋಪ್ ಇರುತ್ತದೆಂಬ ಕಾರಣಕ್ಕೆ ಆ ಆಸೆಯಂತೆ.
–
ರವಿ ರೈ