Advertisement

IPL‌ ಶೀರ್ಷಿಕೆ ಪ್ರಾಯೋಜಕತ್ವ: ಈ ವರ್ಷ ಮಾತ್ರ ಡ್ರೀಮ್‌ 11

03:34 AM Aug 20, 2020 | Hari Prasad |

ಮುಂಬಯಿ: ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಕುರಿತಂತೆ ಉದ್ಭವಿಸಿದ್ದ ವಿವಾದ ಕಡೆಗೂ ಬಗೆಹರಿದಿದೆ.
ವಿವೋ ಬದಲು ಡ್ರೀಮ್‌ 11 ಸ್ಪಾನ್ಸರ್‌ ಆಗಿ ಆಯ್ಕೆಯಾಗಿದೆ ಎಂದು ಐಪಿಎಲ್‌ ಮುಖ್ಯಸ್ಥ ಬೃಜೇಶ್‌ ಪಟೇಲ್‌ ಮಂಗಳವಾರ ತಿಳಿಸಿದ್ದರು. ಆದರೆ ಇದನ್ನು ಬಿಸಿಸಿಐ ಖಚಿತಪಡಿಸಿರಲಿಲ್ಲ.

Advertisement

ಈ ಒಪ್ಪಂದ 3 ವರ್ಷದ ಅವಧಿಗೋ, ಈ ವರ್ಷಕ್ಕೆ ಮಾತ್ರವೋ ಎಂಬ ವಿಚಾರದಲ್ಲಿ ಹಗ್ಗಜಗ್ಗಾಟ ಮುಂದುವರಿದಿತ್ತು.

ಅಂತಿಮವಾಗಿ ಡ್ರೀಮ್‌ 11ನೊಂದಿಗಿನ ಒಪ್ಪಂದ ಈ ವರ್ಷಕ್ಕೆ ಮಾತ್ರ ಎಂದು ಬಿಸಿಸಿಐ ಖಚಿತಪಡಿಸಿದೆ.

ವಾಸ್ತವವಾಗಿ ಡ್ರೀಮ್‌ 11 ಮೂರು ವರ್ಷ ಅವಧಿಗೆ ಬಿಡ್‌ ಸಲ್ಲಿಕೆ ಮಾಡಿತ್ತು. ಈ ವರ್ಷ 220 ಕೋಟಿ ರೂ., ಮುಂದಿನೆರಡು ವರ್ಷಕ್ಕೆ ತಲಾ 240 ಕೋಟಿ ರೂ. ನೀಡುವುದಾಗಿ ತಿಳಿಸಿತ್ತು.

ಆದರೆ ಮುಂದಿನೆರಡು ವರ್ಷದ ಮೊತ್ತ ಬಿಸಿಸಿಐಗೆ ಒಪ್ಪಿಗೆಯಾಗಿರಲಿಲ್ಲ. ವಿವೋ ವಾರ್ಷಿಕ 440 ಕೋಟಿ ರೂ. ನೀಡುತ್ತಿದೆ. ಆದ್ದರಿಂದ ಮುಂದಿನೆರಡು ವರ್ಷದ ಪ್ರಾಯೋಜಕತ್ವ ಬೇಕಾದರೆ ಡ್ರೀಮ್‌ 11 ತನ್ನ 240 ಕೋ. ರೂ. ಬಿಡ್‌ ಮೊತ್ತವನ್ನು ಏರಿಸಬೇಕೆಂದು ಬಿಸಿಸಿಐ ಆಗ್ರಹಿಸಿತ್ತು. ಆದರೆ ಈ ಮೊತ್ತವನ್ನು ಏರಿಸಲು ಒಪ್ಪದ ಹಿನ್ನೆಲೆಯಲ್ಲಿ ಒಪ್ಪಂದವನ್ನು ಈ ಬಾರಿಯ ಐಪಿಎಲ್‌ಗೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.

Advertisement

ವಿವೋ ಜತೆಗೆ ಬಿಸಿಸಿಐ ಇನ್ನೂ ಒಪ್ಪಂದ ಕಡಿದುಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ. ಡ್ರೀಮ್‌ 11 ‘ನ್ಪೋರ್ಟಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌’ನ ಅಧೀನ ಸಂಸ್ಥೆ. ದೇಶದ 19 ಕ್ರೀಡಾಕೂಟಗಳು ಹಾಗೂ 6 ಐಪಿಎಲ್‌ ಫ್ರಾಂಚೈಸಿಗಳೊಂದಿಗೆ ಪಾಲುದಾರಿಕೆಹೊಂದಿದೆ.

ವಿವೋ ಪಾಲುದಾರಿಕೆ ಮುಂದುವರಿಯುವುದೇ?
ವಿವೋದೊಂದಿಗೆ ಬಿಸಿಸಿಐ ಈ ವರ್ಷದ ಒಪ್ಪಂದವನ್ನಷ್ಟೇ ಕಡಿದುಕೊಂಡಿದೆ. 2021ರಿಂದ ಮತ್ತೆ ಮುಂದುವರಿಸುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದೆ. ಭಾರತದಲ್ಲಿ ಚೀನ ವಿರೋಧಿ ಧೋರಣೆ ತೀವ್ರವಾಗಿದ್ದರಿಂದ ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಹೊರಹೋಗಿತ್ತು. ಪರಿಸ್ಥಿತಿ ತಣ್ಣಗಾದರೆ ವಿವೋ ಮತ್ತೆ ಪ್ರತ್ಯಕ್ಷವಾಗಲೂಬಹುದು!

Advertisement

Udayavani is now on Telegram. Click here to join our channel and stay updated with the latest news.

Next