ಬೆಂಗಳೂರು: ಸಾಮಾನ್ಯ ವಾತಾವರಣ ಹಾಗೂ ಫಲವತ್ತಾದ ಭೂಮಿಯಲ್ಲೇ ಪ್ರತಿ ವರ್ಷ ನಷ್ಟ ಅನುಭವಿಸುತ್ತಿರುವ ನಮ್ಮ ರೈತರು, ಇಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಇದೇ ಕೃಷಿಯು ದೇಶದ ಗಡಿ ಭಾಗದಲ್ಲಿರುವ ಲಡಾಖ್ ರೈತರ ಬದುಕು ಬದಲಿಸಿದೆ!
ಈ ಮೊದಲು ಕಾಡು-ಮೇಡು ಅಲೆದು ಗೆಡ್ಡೆ-ಗೆಣಸು ಆಯ್ದು ತಿನ್ನುತ್ತಿದ್ದ ಲಡಾಖ್ ರೈತರು, ಇಂದು ಸೀಮಿತ ಪ್ರದೇಶದಲ್ಲಿ ಉತ್ತು¤-ಬಿತ್ತಿ ಭರಪೂರ ಬೆಳೆ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಆ ಬೆಳೆಯನ್ನು ಅಲ್ಲಿಯೇ ಗಡಿ ಕಾಯುವ ಯೋಧರಿಗೆ ಪೂರೈಸುತ್ತಿದ್ದು, ಪ್ರತಿ ವರ್ಷ ಸರಾಸರಿ 25-30 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
ಇದೆಲ್ಲವೂ ಸಾಧ್ಯವಾಗಿದ್ದು ಡಿಆರ್‌ಡಿಒದ ಅಂಗಸಂಸ್ಥೆ ಡಿಹಾರ್ (ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರಿಸರ್ಚ್) ಪರಿಚಯಿಸಿದ “ಸಂರಕ್ಷಿತ ಕೃಷಿ ತಂತ್ರಜ್ಞಾನ’ದಿಂದ. ಅತ್ಯಂತ ಶೀತ ಪ್ರದೇಶ ಇರುವುದರಿಂದ ಲಡಾಖ್‌ನಲ್ಲಿ ಹಸುರು ಮನೆ ಪ್ರಯೋಗ ಮಾಡಲಾಯಿತು. ಇದರಿಂದ ಈಗ ಸ್ಥಳೀಯವಾಗಿಯೇ ಆಹಾರ ಉತ್ಪಾದನೆ ಆಗುತ್ತಿದ್ದು, ಅಲ್ಲಿನ ಯೋಧರಿಗೆ ಪೂರೈಕೆಯಾಗುತ್ತಿದೆ. ಈ ಪ್ರಯೋಗದಿಂದ ಪ್ರತಿ ವರ್ಷ ಆಹಾರ ಸರಬರಾಜಿಗೆ ಖರ್ಚಾಗುತ್ತಿದ್ದ ಕೋಟಿಗಟ್ಟಲೆ ರೂ. ಉಳಿತಾಯ ಆಗುವುದರ ಜತೆಗೆ ಸಾವಿರಾರು ರೈತರ ಸಾಮಾಜಿಕ-ಆರ್ಥಿಕ ಬದಲಾವಣೆಯೂ ಸಾಧ್ಯವಾಗಿದೆ.
ಲಡಾಖ್ ಸುತ್ತಲಿನ ಗಡಿ ಕಾಯುವ ಯೋಧರಿಗೆ ಪ್ರತಿ ವರ್ಷ 10 ಸಾವಿರ ಮೆಟ್ರಿಕ್ ಟನ್ ತರಕಾರಿ ಮತ್ತು ಹಣ್ಣು-ಹಂಪಲು ಪೂರೈಸಬೇಕಾಗುತ್ತದೆ. ಈ ಹಿಂದಿನ ವ್ಯವಸ್ಥೆಯಲ್ಲಿ ಚಂಡೀಗಢದಿಂದ ವಿಮಾನಗಳ ಮೂಲಕ ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದಕ್ಕಾಗಿ ನೂರಾರು ಕೋಟಿ ರೂ. ವ್ಯಯ ಆಗುತ್ತಿತ್ತು. ಅದೂ ತಾಜಾ ಇರುತ್ತಿರಲಿಲ್ಲ. ಆದರೆ ಈಗ ಹಸುರು ಮನೆ ತಂತ್ರಜ್ಞಾನದಿಂದ ಸ್ಥಳೀಯರಿಂದಲೇ 5 ಸಾವಿರ ಮೆಟ್ರಿಕ್ ಟನ್ ತರಕಾರಿ ಪೂರೈಕೆಯಾಗುತ್ತಿದೆ. ಇದರಿಂದ ಅಲ್ಲಿನ ರೈತರಿಗೆ ಆದಾಯವೂ ಬರುತ್ತಿದೆ ಎಂದು ಡಿಆರ್‌ಡಿಒ ಅಂಗಸಂಸ್ಥೆ ಡಿಹಾರ್‌ನ ವಿಜ್ಞಾನಿ ನರೇಂದ್ರ ಸಿಂಗ್ “ಉದಯವಾಣಿ’ಗೆ ತಿಳಿಸಿದರು.
ವಾರ್ಷಿಕ 15 ಕೋ.ರೂ. ಆದಾಯ
ಮುಖ್ಯವಾಗಿ ಆಲೂಗಡ್ಡೆ, ಈರುಳ್ಳಿ, ಹೂಕೋಸು, ಕ್ಯಾಪ್ಸಿಕಮ್ ಸಹಿತ 20ಕ್ಕೂ ಹೆಚ್ಚು ಪ್ರಕಾರದ ತರಕಾರಿ ಮತ್ತು ಹಣ್ಣುಗಳನ್ನು ಅಲ್ಲಿನ ರೈತರು ಕಳೆದ ಒಂದು ವರ್ಷದಿಂದ ಬೆಳೆಯುತ್ತಿದ್ದಾರೆ. ವಾತಾ ವರಣಕ್ಕೆ ತಕ್ಕಂತೆ ವಿವಿಧ ಪ್ರಕಾರದ ಪಾಲಿಹೌಸ್ ಮತ್ತು ಗ್ರೀನ್‌ಹೌಸ್‌ಗಳನ್ನು ಅಲ್ಲಿ ಪರಿಚಯಿಸಲಾಗಿದ್ದು, ಈಗಾಗಲೇ ಸುಮಾರು ನೂರು ಎಕರೆಯಲ್ಲಿ ಈ ವಿಧಾನಗಳನ್ನು ಅನುಸರಿಸಿ ಬೆಳೆ ಬೆಳೆಯಲಾಗುತ್ತಿದೆ. ಅಂದಾಜು ಏಳರಿಂದ ಎಂಟು ಸಾವಿರ ರೈತ ಕುಟುಂಬಗಳು ಇದರಲ್ಲಿ ಸಕ್ರಿಯವಾಗಿದ್ದು, ವಾರ್ಷಿಕ 15 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಅಂದ ಹಾಗೆ ಈ ಎಲ್ಲ ಹಸುರು ಮನೆ ತಂತ್ರಜ್ಞಾನಗಳ ಅಳವಡಿಕೆಗೆ ಸಬ್ಸಿಡಿ ಕೂಡ ಕಲ್ಪಿಸುವ ಚಿಂತನೆ ಇದೆ. ಈ ಬಗ್ಗೆ ಸರಕಾರ ನಿರ್ಧರಿಸಲಿದೆ ಎಂದು ಸಿಂಗ್ ಅವರು ಮಾಹಿತಿ ನೀಡಿದರು.