ಹೊಸದಿಲ್ಲಿ : ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಅತ್ಯಂತ ಪ್ರಮುಖ ವ್ಯೂಹಾತ್ಮಕ ರಕ್ಷಣಾ ಕ್ಷಿಪಣಿ ಎನಿಸಿಕೊಂಡಿರುವ ಬ್ರಹ್ಮೋಸ್ ಬಗ್ಗೆ ಬೇಹುಗಾರಿಕೆ ನಡೆಸಿ ಅದರ ತಾಂತ್ರಿಕ ಮಾಹಿತಿಗಳನ್ನು ಪಾಕಿಸ್ಥಾನಕ್ಕೆ (ಐಎಸ್‌ಐಗೆ) ಮತ್ತು ಅಮೆರಿಕಕ್ಕೆ ನೀಡಿರುವ ಆರೋಪದ ಮೇಲೆ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO) ಇದರ ಓರ್ವ ನೌಕರನನ್ನು ಇಂದು ಸೆರೆ ಹಿಡಿಯಲಾಗಿದೆ. ಆತನನ್ನು ನಿಶಾಂತ್ ಅಗರ್‌ವಾಲ್ ಎಂದು ಗುರುತಿಸಲಾಗಿದೆ.
ಸೇನಾ ಗುಪ್ತಚರ ದಳದೊಂದಿಗೆ ಉತ್ತರ ಪ್ರದೇಶ ಉಗ್ರ ನಿಗ್ರಹ ದಳದವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಶಾಂತ್ ಅಗರ್‌ವಾಲ್ ನನ್ನು ಬಂಧಿಸಲಾಯಿತು. ಈತನು ನಾಗ್ಪುರದಲ್ಲಿನ ಬ್ರಹ್ಮೋಸ್ ಘಟಕದಲ್ಲಿ ಕೆಲಸ ಮಾಡಿಕೊಂಡಿದ್ದಾನೆ.
ನಿಶಾಂತ್ ನನ್ನು ಈಗ ತೀವ್ರವಾಗಿ ಪ್ರಶ್ನಿಸಲಾಗುತ್ತಿದ್ದು ಆತನು ಪಾಕಿಸ್ಥಾನದೊಂದಿಗೆ (ಐಎಸ್‌ಐ ಜತೆಗೆ) ಹಂಚಿಕೊಂಡಿರುವ ಬ್ರಹ್ಮೋಸ್ ತಾಂತ್ರಿಕ ಮಾಹಿತಿಗಳು ಯಾವುವು ಎಂಬುದನ್ನು ಖಾತರಿ ಪಡಿಸಿಕೊಳ್ಳಲಾಗುತ್ತಿದೆ.
ಬ್ರಹ್ಮೋಸ್ ಮಿಸೈಲ್ ಒಂದು ಸೂಪರ್ ಸಾನಿಕ್ ಕ್ರೂಯಿಸ್ ಮಿಸೈಲ್ ಆಗಿದೆ. ಇದನ್ನು ಸಮರ ನೌಕೆಗಳು ಮತ್ತು ಭೂಮಿಯ ಮೇಲಿನ ಗುರಿಗಳ ಮೇಲೆ ದಾಳಿ ನಡೆಸಲು ಬಳಸಲಾಗುತ್ತದೆ. ಇದಕ್ಕೆ ಸುಮಾರು 300 ಕಿ.ಮೀ. ದಾಳಿ ವ್ಯಾಪ್ತಿ ಇದೆ.
ಇದನ್ನು ಸಮರ ನೌಕೆಗಳಲ್ಲಿ, ಜಲಾಂತರ್ಗಾಮಿಗಳಲ್ಲಿ ಮತ್ತು ವಿಮಾನಗಳಲ್ಲಿ ಮಾತ್ರವಲ್ಲದೆ ಭೂಮಿಯ ಮೇಲಿನ ದಾಳಿ ವಾಹನಗಳಲ್ಲಿ ಬಳಸಲು ಸಾಧ್ಯವಿದೆ. ಇದನ್ನು 2001ರ ಜೂನ್ ಮತ್ತು 2002 ಎಪ್ರಿಲ್ ನಲ್ಲಿ ಎಲ್ಲ ಗುರಿಗಳ ಮೇಲೆ ಪ್ರಯೋಗಾರ್ಥವಾಗಿ ಪರೀಕ್ಷಿಸಲಾಗಿದೆ.