Advertisement

ಬೆಳ್ತಂಗಡಿ : ಇಂದು ಡಾ|ಹೆಗ್ಗಡೆ ಪಟ್ಟಾಭಿಷೇಕದ ವರ್ಧಂತ್ಯುತ್ಸವ

01:31 PM Oct 24, 2022 | Team Udayavani |

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವು ಅ. 24ರ ಸೋಮವಾರ ಜರಗಲಿದೆ.

Advertisement

1948ರ ನ. 25ರಂದು ಅಂದಿನ ಧರ್ಮಾಧಿಕಾರಿ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಪುತ್ರರಾಗಿ ಜನಿಸಿದ್ದ ವೀರೇಂದ್ರ ಕುಮಾರ್‌ 1968ರ ಅ. 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು. ಎಂಟು ಶತಮಾನಗಳಿಂದ ನಡೆಯುತ್ತಿದ್ದ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನದೊಂದಿಗೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ, ಕಲ್ಯಾಣ ಮಂಟಪಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಯುರ್ವೇದ, ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗ ವಿಜ್ಞಾನಕ್ಕೆ ಕಾಯಕಲ್ಪ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಮೊದಲಾದ ಹತ್ತು ಹಲವು ಯೋಜನೆಗಳನ್ನು ವಿವಿಧೆಡೆ ಆರಂಭಿಸಿದರು.

ಶಾಂತಿವನ ಟ್ರಸ್ಟ್‌ ಮೂಲಕ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ, ಧರ್ಮೋತ್ಥಾನ ಟ್ರಸ್ಟ್‌ ಮೂಲಕ ಐತಿಹಾಸಿಕ ದೇವಸ್ಥಾನಗಳು ಮತ್ತು ಸ್ಮಾರಕಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಇತ್ಯಾದಿ ಹತ್ತು – ಹಲವು ಯೋಜನೆಗಳನ್ನು ಡಾ| ಹೆಗ್ಗಡೆಯವರು ಅನುಷ್ಠಾನಗೊಳಿಸಿದ್ದಾರೆ.

ಇವರ ಸೇವೆ-ಸಾಧನೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರ ಮೋದಿಯವರು ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಧರ್ಮಸ್ಥಳದ ಪರಂಪರೆಗೆ ಸಂದ ಅಪಾರ ಗೌರವವಾಗಿದೆ. ಸಂಪ್ರದಾಯದಂತೆ ಪಟ್ಟಾಭಿಷೇಕ ವರ್ಧಂತಿ ದಿನ ಹೆಗ್ಗಡೆಯವರು ತಮ್ಮ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಸೋಮವಾರ ದೇವಸ್ಥಾನ ಮತ್ತು ಬಸದಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಅಭಿನಂದನ ಸಮಾರಂಭ
ಅ. 24ರ ಸಂಜೆ 4ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಹೆಗ್ಗಡೆಯವರ ಅಭಿನಂದನ ಸಮಾರಂಭ ನಡೆಯಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಕೆ. ಹರೀಶ್‌ ಪೂಂಜ, ಕೆ. ಪ್ರತಾಪಸಿಂಹ ನಾಯಕ್‌ ಮತ್ತು ಕೆ. ಹರೀಶ್‌ಕುಮಾರ್‌ ಶುಭಾ ಶಂಸನೆ ಮಾಡುವರು. ಹಿರಿಯ ನೌಕರರ ಸಮ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನೆ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಡಿ. ಹಷೇìಂದ್ರ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಹಿಂದೂ ತರುಣರ ಹತ್ಯೆಗೆ ಯತ್ನ; ಠಾಣೆಗೆ ದಾಳಿ ಪ್ರಕರಣ ಎನ್‌ಐಎ ವ್ಯಾಪ್ತಿಗೆ: ಮುತಾಲಿಕ್‌ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next