ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಸ್ಕಿಮ್ಮರ್‌ಗಳನ್ನು ಅಳವಡಿಸಿ ಸಾರ್ವಜನಿಕರ ಹಣ ಕಳವು ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಚಿಲಿ ದೇಶದ ಜಾಲೋ ರೆಫೆಲ್, ಅಂಜೆಲೋ ಮ್ಯಾನ್ ಬಂಧಿತರು. ಆರೋಪಿಗಳಿಂದ ನಕಲಿ ಸ್ಕಿಮ್ಮರ್‌ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಕೆಲ ವರ್ಷಗಳ ಹಿಂದೆ ಪ್ರವಾಸ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರಗಳಿಗೆ ಹೋಗಿ, ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನಕಲಿ ಸ್ಕಿಮ್ಮರ್‌ಗಳನ್ನು ಅಳವಡಿಸುತ್ತಿದ್ದರು. ಒಂದೆರಡು ದಿನಗಳ ಬಳಿಕ ಸ್ಕಿಮ್ಮರ್‌ಗಳನ್ನು ಹೊರ ತೆಗೆದು ಅದರಲ್ಲಿ ಸಂಗ್ರಹವಾಗುತ್ತಿದ್ದ ಬ್ಯಾಂಕ್‌ನ ಗ್ರಾಹಕರ ಡೇಟಾ ಹಾಗೂ ಪಾಸ್‌ವರ್ಡ್ ಮಾಹಿತಿಯನ್ನು ಕಂಪ್ಯೂಟರ್ ಮೂಲಕ, ಖಾಲಿ ಎಟಿಎಂ ಕಾರ್ಡ್‌ಗೆ ತುಂಬಿ ಇತರೆ ಎಟಿಎಂ ಕೇಂದ್ರ ಹಾಗೂ ಇತರೆ ಮಾರ್ಗಗಳ ಮೂಲಕ ಹಣ ಕಳವು ಮಾಡುತ್ತಿದ್ದರು. ಇತ್ತೀಚೆಗೆ ಕಬ್ಬನ್‌ಪಾರ್ಕ್ ಠಾಣೆ ವ್ಯಾಪ್ತಿಯ ಲ್ಯಾವೆಲ್ಲಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ವೊಂದರ ಎಟಿಎಂ ಕೇಂದ್ರದಲ್ಲಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ತಿಲಕನಗರ, ಜಯನಗರ ಠಾಣೆ ವ್ಯಾಪ್ತಿಯಲ್ಲಿಯೂ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.