ಮುಂಬೈ: ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹತ್ತು ವಿಕೆಟ್ ಗಳ ಸೋಲನುಭವಿಸಿದೆ. ಈ ಸೋಲಿನ ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಲೀಗ್ ನಲ್ಲಿ ಆಡುವ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ.
ಬೇರೆ ಆಟಗಾರರಂತೆ ಭಾರತೀಯರಿಗೂ ವಿದೇಶಿ ಟಿ20 ಲೀಗ್ ಗಳಲ್ಲಿ ಆಡಿಸಬೇಕು ಎಂಬ ಕೂಗು ಹೆಚ್ಚುತ್ತಿರುವಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಇದು ನಮಗೆ ದೊಡ್ಡ ಸವಾಲಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು, ನಮ್ಮ ಬಹಳಷ್ಟು ಹುಡುಗರು ಈ ಬಹಳಷ್ಟು ಲೀಗ್‌ಗಳಲ್ಲಿ ಆಡುವ ಅವಕಾಶಗಳನ್ನು ಕಳೆದುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಬಿಸಿಸಿಐಗೆ ಬಿಟ್ಟ ನಿರ್ಧಾರ. ಒಂದು ವೇಳೆ ನೀವು ಎಲ್ಲಾ ಭಾರತೀಯ ಆಟಗಾರರನ್ನು ಈ ಲೀಗ್ ಗಳಲ್ಲಿ ಆಡಲು ಅನುಮತಿಸಿದರೆ, ನಮ್ಮಲ್ಲಿ ದೇಶೀಯ ಕ್ರಿಕೆಟ್ ಗೆ ಕಷ್ಟವಾಗುತ್ತದೆ. ಒಂದು ವೇಳೆ ಈ ರೀತಿ ಆದರೆ ನಮ್ಮ ದೇಶೀಯ ಟ್ರೋಫಿ, ನಮ್ಮ ರಣಜಿ ಟ್ರೋಫಿ ಮುಗಿದೇ ಹೋಗುತ್ತದೆ. ಅಂದರೆ ಅದರರ್ಥ ಟೆಸ್ಟ್ ಕ್ರಿಕೆಟ್ ಫಿನಿಶ್ ಆಯ್ತು ಅಂತ” ಎಂದಿದ್ದಾರೆ.
“ಬಹಳಷ್ಟು ಜನರು ಇದರ (ವಿದೇಶಿ ಲೀಗ್) ಬಗ್ಗೆ ಮಾತನಾಡುತ್ತಾರೆ ಎಂದು ನನಗೆ ತಿಳಿದಿದೆ, ಆದರೆ ನಾವು ತುಂಬಾ ಜಾಗರೂಕರಾಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ಎದುರಿಸುವ ಅಥವಾ ಬಿಸಿಸಿಐ ಎದುರಿಸುವ ಸವಾಲುಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ:ನಾನು ಪ್ರತಿ ದಿನ 2 ರಿಂದ 3 ಕೆಜಿ ಬೈಗುಳ ತಿನ್ನುತ್ತೇನೆ..ಅದು… : ಪ್ರಧಾನಿ ಮೋದಿ
ನಮ್ಮ ದೇಶಿ ಋತುವಿನ ಮಧ್ಯದಲ್ಲಿ ಈ ಲೀಗ್ ಗಳನ್ನು ಆಡಲು ಹುಡುಗರನ್ನು ಕೇಳುತ್ತಾರೆ. ವೆಸ್ಟ್ ಇಂಡಿಯನ್ ಕ್ರಿಕೆಟ್ ನಲ್ಲಿ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಭಾರತೀಯ ಕ್ರಿಕೆಟ್ ಆ ರೀತಿಯಲ್ಲಿ ಹೋಗುವುದನ್ನು ನಾನು ಖಂಡಿತವಾಗಿಯೂ ಬಯಸುವುದಿಲ್ಲ. ಇದು ಖಂಡಿತವಾಗಿಯೂ ನಮ್ಮ ರಣಜಿ ಟ್ರೋಫಿಯ ಮೇಲೆ ಪರಿಣಾಮ ಬೀರುತ್ತದೆ; ಇದು ಟೆಸ್ಟ್ ಕ್ರಿಕೆಟ್ ಮೇಲೆ ಪರಿಣಾಮ ಬೀರಲಿದೆ. ಭಾರತೀಯ ಹುಡುಗರು ಟೆಸ್ಟ್ ಕ್ರಿಕೆಟ್ ಆಡುವುದು ಟೆಸ್ಟ್ ಪಂದ್ಯಕ್ಕೆ ಬಹಳ ಮುಖ್ಯ, ಹಾಗೆಯೇ ನಾನು ಭಾವಿಸುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.