Advertisement

ಮಕ್ಕಳಲ್ಲಿ ಧ್ವನಿಸಿದ ದ್ರೌಪದಿ ಪ್ರತಾಪ 

12:30 AM Jan 04, 2019 | |

ಇತ್ತೀಚೆಗೆ ಬಾರ್ಕೂರಿನಲ್ಲಿ ದೇವಾಡಿಗರ ಸಮಾಜ ಕೋಟೇಶ್ವರ ವಲಯದವರ ಸಂಯೋಜನೆಯಲ್ಲಿ ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಕಲಾವೃಂದದ ಮಕ್ಕಳಿಂದ “ದ್ರೌಪದಿ ಪ್ರತಾಪ’ ತಾಳಮದ್ದಲೆ ಪ್ರದರ್ಶನಗೊಂಡಿತು. ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆಯವರ ಜಂಟಿ ಭಾಗವತಿಕೆಗೆ ಲೋಹಿತ್‌ ಕೊಮೆ ಮತ್ತು ಸುದೀಪ್‌ ಉರಾಳ ಮದ್ದಲೆ ಚಂಡೆ ಮೂಲಕ ಸಾಥ್‌ ಕೊಟ್ಟರು. “ಕೇಳಿರಯ್ಯ ಸಹೋದರಾಧ್ಯರು…’ ಮಧ್ಯಮಾವತಿ ಪದ್ಯಕ್ಕೆ ಧರ್ಮರಾಯನಾಗಿ ಮಾ| ಪ್ರತೀಕ್‌ ಗಾಣಿಗ ಶೃತಿಬದ್ಧ ಆರಂಭಕೊಟ್ಟು ಆಕರ್ಷಿಸಿದರು. ತಮ್ಮಂದಿರಾದ ಭೀಮಾರ್ಜುನರನ್ನೊಳಗೊಂಡು ಒಡ್ಡೋಲಗ ಕೊಟ್ಟು ಭಾರತ ಯುದ್ಧ ಗೆದ್ದವರಾರು ಎಂಬ ಪ್ರಶ್ನೆಗೆ ಭೀಮಾರ್ಜುನರ ಆರ್ಭಟ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿತು. ನಿರ್ಭೀತ ಧ್ವನಿಯಿಂದ ತಾಮೇಲು-ನಾಮೇಲು ಎಂಬ ಕಿತ್ತಾಟ ಯಾವ ಅರ್ಥದಾರಿಗೂ ಕಡಿಮೆ ಇಲ್ಲವೆಂಬಂತೆ ಪ್ರಸಂಗದ ಒಳತಿರುಳನ್ನು ಅರಿತು ಪ್ರದರ್ಶಿಸಿದ ರೀತಿ ಮನೋಜ್ಞವಾಗಿತ್ತು. ಭೀಮಾರ್ಜುನರಾಗಿ ರಂಗದಲ್ಲಿ ಗುರುತಿಸಿಕೊಂಡವರು ಕು| ಅನನ್ಯ ಮತ್ತು ಮಾ| ಸಾತ್ಯಕಿ ಪಂಜಿಗಾರು. ಭೀಮಾರ್ಜುನರ ಘನಘೋರ ಯುದ್ಧವನ್ನು ತಡೆಯುವುದಕ್ಕೆ ಬಂದವರು ನಾರದನಾಗಿ ಮಾ| ಮಿಥುನ್‌ ದೇವಾಡಿಗ. ವಿವೇಕ ಅರಿಯದ ಭೀಮಾರ್ಜುನರನ್ನು ಕೃಷ್ಣನಲ್ಲಿಗೆ ಕೊಂಡೊಯ್ದರೆ ಕು| ಪೂಜಾ ಆಚಾರ್‌ ಕೃಷ್ಣನಾಗಿ ಪ್ರಸಂಗದ ಕೊನೆಯ ತನಕವೂ ನಿರಾಳವಾಗಿ ವಸ್ತುಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಕೊಟ್ಟರೂ ಪಥ್ಯವಾಗದಾಗ 18 ದಿನಗಳ ಭಾರತ ಯುದ್ಧವನ್ನು ಕಂಡಿರುವುದು ಬಬ್ರುಸೇನನ ರುಂಡವೆಂದು ಅಲ್ಲಿಗೆ ಕರೆದೊಯ್ದರೆ ಬಬ್ರುಸೇನನಾಗಿ ಅರ್ಥ ಹೇಳಿದವರು 5 ವರ್ಷದ ಬಾಲಕಿ ಕು| ಪರಿಣಿತ ವೈದ್ಯ. ಕೃಷ್ಣ ನಾರದರಲ್ಲಿ ಸಮಸ್ಯೆ ಬಗೆಹರಿಯಲಾಗದಾಗ ಮತ್ತೆ ಕಾಳಗವೇ ಏರ್ಪಟ್ಟು ಕೊನೆಗೂ ಭೀಮನಿಗೆ ಸೋಲಾದಾಗ ಮಡದಿ ದ್ರೌಪದಿಯನ್ನು ಕರೆಸಿ ಅರ್ಜುನನೊಂದಿಗೆ ಕಾಳಗಕ್ಕಿಳಿಸಿದನು. ವಲ್ಲಭನಲ್ಲಿ ಯುದ್ಧ ಸಲ್ಲವೆಂದು ಸಾರಿ ಸಾರಿ ಹೇಳಿದರು ಭೀಮ ಕೇಳದಾದಾಗ ದ್ರೌಪದಿಗೆ ಪತಿಯಲ್ಲಿ ಸಮರಕ್ಕಿಳಿಯುವುದು ಅನಿವಾರ್ಯವಾಯಿತು. ತಡವಿಲ್ಲವೆಂಬಂತೆ ನೇರವಾಗಿ ಪತಿ ಅರ್ಜುನನಲ್ಲಿಗೆ ಬಂದು ನೀರಾ ನಿನಗೆ ನಮಸ್ಕಾರ… ಎಂದು ಔಪಚಾರಿಕ ನಮಸ್ಕಾರ ಹಾಕಿ ಇದಿರಾದವಳು ದ್ರೌಪದಿಯಾಗಿ ಕು| ಪಂಚಮಿ ವೈದ್ಯ. ಅರ್ಜುನ ಸೋತಾಗ ಕೃಷ್ಣನನ್ನು ನೇರವಾಗಿ ಕರೆಸಲು ಮನಸ್ಸಿಲ್ಲದಾಗ ಮಡದಿ ಸೌಭದ್ರೆಯನ್ನು ದ್ರೌಪದಿಯೊಂದಿಗಿನ ಸಮರಕ್ಕೆ ಹುರಿದುಂಬಿಸುತ್ತಾನೆ. ಅರ್ಜುನ ಕರೆದಾಗ ಮಾತನಾಡ ಲಾರಂಬಿಸಿದ ಸುಭದ್ರಾ ಪಾತ್ರದಾರಿ ಕು| ಪ್ರಣಮ್ಯಾ ಬಾಯಿ ಮುಚ್ಚಿಕೊಂಡದ್ದೇ ದ್ರೌಪದಿಯೊಂದಿಗೆ ಸೋತಾಗ. ಮಾತಿನ ಚಕಮಖೀ, ಹೆಂಗಸರ ರಂಪಾಟ, ರಂಗದಲ್ಲಿ ವಿಶೇಷವಾಗಿ ನಿರೂಪಿಸಿದ ಬಾಲಕಿಯರು ಮುಂದಿನ ಕಲಾರಂಗಕ್ಕೆ ಉತ್ತಮ ಭವಿಷ್ಯ ಕೊಡಬಲ್ಲರು ಎಂದು ತೋರಿಸಿಕೊಟ್ಟರು. ಎಲ್ಲರೂ ದ್ರೌಪದಿಯಲ್ಲಿ ಕೈಸೋತಾಗ ಬಲರಾಮನಾಗಿ ಕು| ನಿಶಾ ಮಲ್ಯಾಡಿ ಏರು ಶೃತಿಯ ಮಾತುಗಾರಿಕೆಯಲ್ಲಿ ರಂಗೇರಿಸಿದರು. ಬಳಿಕ ಮತ್ತೆ ಈಶ್ವರ ಪಾರ್ವತಿಯರಾಗಿ ಮಾ| ಸಾತ್ಯಕಿ ಮತ್ತು ಕು| ಧರಣಿ ಬಿರುಸಿನ ಮಾತಿನೊಂದಿಗೆ ಮಂಗಳ ಹಾಡಿದರು. ಕೊçಕೂರು ಸೀತಾರಾಮ ಶೆಟ್ಟಿಯವರ ನಿರ್ದೇಶನದಲ್ಲಿ ಪ್ರಥಮ ಬಾರಿಯ ಪ್ರದರ್ಶನವಾಗಿ ರಂಗದಲ್ಲಿ ಚಿಂದಿ ಉಡಾಯಿಸಿದ ಕೀರ್ತಿ ಯಶಸ್ವಿ ಮಕ್ಕಳದ್ದು.

Advertisement

ಪ್ರಶಾಂತ್‌ ಮಲ್ಯಾಡಿ 

Advertisement

Udayavani is now on Telegram. Click here to join our channel and stay updated with the latest news.

Next