Advertisement
ಹಲವು ಪ್ರಥಮಗಳ ಸರದಾರಿಕೆಗಳ ಸಾಲಿಗೆ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಮುಂದಾಗುತ್ತಿದ್ದಾರೆ. ದೇಶದ ಅತೀ ಹಿರಿದಾದ ಸಾಂವಿಧಾನಿಕ ಪೀಠಕ್ಕೆ ಆರೋಹಣ ಮಾಡುವ ದ್ರೌಪದಿ ಮುರ್ಮು ಮೊದಲ ಬಾರಿ ಈ ಸ್ಥಾನಕ್ಕೇರುವ ಶೇ. 8ರಷ್ಟು ಇರುವ ಬುಡಕಟ್ಟು ಜನಾಂಗದವರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿ ಪ್ರಧಾನಮಂತ್ರಿ ಹುದ್ದೆಗೆ ಏರಿದ ಮೊದಲ ವ್ಯಕ್ತಿ ನರೇಂದ್ರ ಮೋದಿಯವರಾದರೆ, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿ ರಾಷ್ಟ್ರಪತಿ ಯಾಗುತ್ತಿರುವ ಮೊದಲ ವ್ಯಕ್ತಿ ಮುರ್ಮು. ಗುಡ್ಡಗಾಡು ಜನಾಂಗದ ಮೊದಲ ರಾಷ್ಟ್ರಪತಿ, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ.
Related Articles
Advertisement
ಮುರ್ಮು ಅವರ ಯಶಸ್ವೀ ಕಥಾನಕ ಕೇಳುವಾಗ ಏನೂ ಕಷ್ಟ ಎದುರಾಗಲಿಲ್ಲವೇ ಎಂಬ ಪ್ರಶ್ನೆ ಬರಬಹುದು. ಕಷ್ಟ ಮಾತ್ರ ಸಾಮಾನ್ಯದ್ದಂತೂ ಅಲ್ಲವೇ ಅಲ್ಲ. ಹುಟ್ಟಿದ ನಾಲ್ಕು ಮಕ್ಕಳಲ್ಲಿ ಮೂವರು ಅಸುನೀಗಿದರು. ಮೊದಲ ಮಗಳು ತೀರಿಕೊಂಡಾಗ ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಖನ್ನತೆಗೆ ಜಾರಿದ್ದರು, ಆರು ತಿಂಗಳು ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. 2009ರಲ್ಲಿ ಮಗನೊಬ್ಬ ಅಕಸ್ಮಾತ್ ಮರಣವನ್ನಪ್ಪಿದ. ಇನ್ನೊಬ್ಬ ಮಗ ಮೂರು ವರ್ಷ ಬಿಟ್ಟು ರಸ್ತೆ ಅಪಘಾತದಲ್ಲಿ ಮೃತಪಟ್ಟ. 2014ರಲ್ಲಿ ಪತಿಯೂ ಹೃದಯಾಘಾತದಿಂದ ನಿಧನ ಹೊಂದಿದರು. ಪರಿಸ್ಥಿತಿ ಎಲ್ಲಿಯವರೆಗೆ ಬಂತೆಂದರೆ ಸನ್ಯಾಸವನ್ನು ತೆಗೆದುಕೊಳ್ಳುವ ಸ್ಥಿತಿಗೂ ಬಂದರು. ಕ್ರಮೇಣ ಇವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಪರ್ಕವಾಯಿತು. “ಜಗತ್ತು ದೊಡ್ಡ ವೇದಿಕೆ. ಜೀವಾತ್ಮಗಳು ಕೆಲವೇ ಕೆಲವು ಸಮಯಗಳ ಮಟ್ಟಿಗೆ ಬಂದು ಹೋಗುತ್ತವೆ’ ಎಂಬ ಬ್ರಹ್ಮಕುಮಾರಿಯರ ಸಂದೇಶ ಮರ್ಮಾಘಾತವನ್ನು ನಿಯಂತ್ರಣಕ್ಕೆ ತಂದಿತು. ಮಗಳು ಬ್ಯಾಂಕ್ ಉದ್ಯೋಗಿ, ಕ್ರೀಡಾಪಟುವನ್ನು ಮದುವೆಯಾಗಿ ಪುತ್ರಿಯೊಂದಿಗೆ ಸಂಸಾರ ನಿರ್ವಹಿಸುತ್ತಿದ್ದಾರೆ. ಈಗಲೂ ರಾಜಯೋಗ, ಧ್ಯಾನವನ್ನು ಮುರ್ಮು ಮಾಡುತ್ತಾರೆ.
***
ಪಾಂಡವರ ವನವಾಸದ ಅವಧಿಯಲ್ಲಿ ಧರ್ಮರಾಯನು ಬ್ರಹದಶ್ವ, ಲೋಮಶ ಮೊದಲಾದ ಋಷಿಗಳ ಬಳಿ ತನ್ನ ಸಂಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಾನೆ. ತಾನೇನು ತಪ್ಪು ಮಾಡಿದೆ? ನನಗೇಕೆ ಇಂತಹ ಕಷ್ಟ, ಶಿಕ್ಷೆ ಎಂದು ಪ್ರಶ್ನಿಸುತ್ತಾನೆ. ಆಗಲೇ ನಿನಗಿಂತ ದೊಡ್ಡ ವ್ಯಕ್ತಿಗಳಿಗೆ ಎಂತಹ ಘನಘೋರ ಕಷ್ಟ ಬಂತು ಎನ್ನುವುದನ್ನು ಪೂರ್ವಸೂರಿಗಳ ಉದಾಹರಣೆಗಳೊಂದಿಗೆ ಋಷಿಮುನಿಗಳು ವಿವರಿಸುವಾಗ ನಳ ದಮಯಂತಿ, ಸತ್ಯವಾನ್ ಸಾವಿತ್ರಿ, ಚ್ಯವನ ಸುಕನ್ಯ, ಮಾಂಧಾತಾ, ಶ್ರೀರಾಮ, ಅಷ್ಟಾವಕ್ರ, ಅಗಸ್ತ್ಯ ಲೋಪಾಮುದ್ರೆ, ಋಷ್ಯಶೃಂಗ ಮೊದಲಾದವರ ಕತೆ ಮಹಾಭಾರತದ ವನಪರ್ವದಲ್ಲಿ ಬರುತ್ತದೆ. “ಇವರೆಲ್ಲ ಎಷ್ಟು ದೊಡ್ಡವರು? ನೀನು ಅಷ್ಟು ದೊಡ್ಡವನೆ? ನಿನಗೆ ಬಂದ ಕಷ್ಟ ಅವರಿಗೆ ಬಂದಷ್ಟು ದೊಡ್ಡದೆ?’ ಎಂದು ಪ್ರತೀ ಕತೆಯ ಕೊನೆಯಲ್ಲಿ ಪ್ರಶ್ನಿಸುತ್ತಾರೆ.
ಪಾಂಡವರು, ದ್ರೌಪದಿಯನ್ನು ಸಂತೈಸಲು ಶ್ರೀಕೃಷ್ಣ ಪತ್ನಿ ಸತ್ಯಭಾಮೆಯೊಡನೆ ಆಗಮಿಸುತ್ತಾನೆ. ಸತ್ಯಭಾಮೆ-ದ್ರೌಪದಿಯ ನಡುವಿನ ಸುದೀರ್ಘ ಸಂವಾದ ಸಂಸಾರಸ್ಥರಿಗೆ, ವಿಶೇಷವಾಗಿ ಸ್ತ್ರೀಯರಿಗೆ ಅತ್ಯಗತ್ಯ ಮೌಲ್ಯವುಳ್ಳದ್ದಾಗಿದೆ.
ಈ ದ್ರೌಪದಿಗೆ ಎಷ್ಟು ಕಷ್ಟ ಬಂತು? ಧ್ಯಾನ, ಯೋಗದಿಂದ ಇವನ್ನೆಲ್ಲ ಗೆದ್ದು ನಿಂತರು. ಹೀಗೆ ನಿಂತದ್ದರಿಂದಲೇ ಈ ಮಟ್ಟಕ್ಕೇರುತ್ತಿದ್ದಾರೆ. ಆ ದ್ರೌಪದಿ ವನವಾಸ, ಅಜ್ಞಾತವಾಸವಲ್ಲದೆ ಮಹಾಭಾರತ ಯುದ್ಧದಲ್ಲಿ ಗೆಲುವಾದ ಬಳಿಕವೂ ಐದು ಹಸುಳೆಗಳನ್ನು ಕಳೆದುಕೊಳ್ಳಬೇಕಾಯಿತು. ಕಷ್ಟ ಎದುರಾದವರು ಆ ದ್ರೌಪದಿಯನ್ನೂ, ಈ ದ್ರೌಪದಿಯನ್ನೂ ನೆನೆದು ಬದುಕಿನಲ್ಲಿ ಪುನಶ್ಚೇತನಗೊಳ್ಳಬೇಕು. ಯೋಗ, ಧ್ಯಾನಕ್ಕೆ ಆತ್ಮವಿಶ್ವಾಸ ಕುದುರಿಸುವ ಶಕ್ತಿ ಇದೆ ಎಂಬುದಕ್ಕೆ ಉದಾಹರಣೆಗಳಿವು.
***ಅವಧಿ ವನವಾಸದ್ದಾದರೂ ಅದು ನಗರವಾಸವನ್ನು ಮೀರಿಸುತ್ತಿತ್ತು. 10,000 ಜನರು ಊಟ ಮಾಡಿದ ಬಳಿಕ ಗಂಟೆ ಬಾರಿಸಲಾಗುತ್ತಿತ್ತಂತೆ. ಎಷ್ಟು ಪಂಕ್ತಿ ಎದ್ದಿರಬಹುದು? ಇಷ್ಟು ಜನರಿಗೆ ಊಟ ಒದಗಿಸಿದ್ದು ದ್ರೌಪದಿ, ಇದು ಕೃಷ್ಣ ನೀಡಿದ ಅಕ್ಷಯಪಾತ್ರೆಯ ಪ್ರಭಾವದಿಂದ. ಆಗ ಮಹಾಭಾರತವಾದರೆ ಈಗ ಭಾರತ. ದ್ರೌಪದಿ ಮುರ್ಮು ಅವಧಿಯಲ್ಲಿ ಭಾರತ ಅಕ್ಷಯ ಪಾತ್ರೆಯಾಗಲಿ. -ಮಟಪಾಡಿ ಕುಮಾರಸ್ವಾಮಿ