Advertisement

ನಾಟಕದ ಭೀಮಣ್ಣ

06:00 AM Nov 18, 2018 | |

ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಭೀಮಣ್ಣ ಅರಷಿಣಗೋಡಿ ಬಹಳ ದೊಡ್ಡ ಹೆಸರು. ಇತ್ತೀಚೆಗೆ ಅವರು ನಿಧನರಾಗುವುದರೊಂದಿಗೆ ಕನ್ನಡದ ಕಂಪೆ‌ನಿ ನಾಟಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಕಮತಗಿಯಲ್ಲಿ ಅವರು 1961ರಲ್ಲಿ ಶ್ರೀ ಹುಚ್ಚೇಶ್ವರ ನಾಟಕ ಸಂಘ ಸ್ಥಾಪಿಸಿ, ಸುಮಾರು ನಾಲ್ಕು ದಶಕಗಳ ಕಾಲ ಅದನ್ನು ನಡೆಸಿ ಪ್ರಸಿದ್ಧ ನಾಟಕಗಳನ್ನು ರಂಗದ ಮೇಲೆ ತಂದರು. ಅವರ ಬಸ್‌ಕಂಡಕ್ಟರ್‌  ನಾಟಕ ಸಾವಿರ ಪ್ರದರ್ಶನಗಳನ್ನು ಕಂಡಿದೆ

Advertisement

ಕರ್ನಾಟಕದ ರಂಗಕಲಾವಿದರ ಹೃದಯ ಸಾಮ್ರಾಜ್ಯವನ್ನು ಏರಿದ ಭೀಮಣ್ಣ ಅರಿಷಿಣಗೋಡಿಯವರು ತಮ್ಮ ಬದುಕಿನುದ್ದಕ್ಕೂ ಬದ್ಧತೆಯನ್ನು ಕಾಯ್ದುಕೊಂಡು ಬಂದಿದ್ದರು. ಅದರೊಂದಿಗೆ ಎಂದಿಗೂ ರಾಜಿಯಾಗಲಿಲ್ಲ. ನಮ್ಮನ್ನು ನಂಬಿ ಬರುವ ಪ್ರೇಕ್ಷಕರಿಗೆ ನೋವು ಕೊಡಬಾರದು, ನೋಡುಗರ ಅಭಿರುಚಿ ಕೆಡಿಸಬಾರದು. ಸಾಮಾಜಿಕ ಕಳಕಳಿ ಹೊಂದಿರಬೇಕು. ವೈಯಕ್ತಿಕ ಟೀಕೆಗೆ ಇಳಿಯಬಾರದು. ನೋಡುಗರಲ್ಲಿ ಮನಸ್ಸು ವಿಕಾರಗೊಳ್ಳದೇ ಅದು ವಿಕಾಸಗೊಳ್ಳಬೇಕು. ಎನ್ನುವ ವ್ಯಷ್ಠಿ ಮತ್ತು ಸಮಷ್ಠಿ ಪ್ರಜ್ಞೆಯನ್ನು ಹೊಂದಿದ್ದರಿಂದಲೇ ತಾವು ಕಟ್ಟಿದ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ, ಕಮತಗಿ ಕಂಪೆನಿಯನ್ನು ನಿರಂತರವಾಗಿ ಸುಮಾರು 40 ವರ್ಷಗಳ ಕಾಲ ನಡೆಸಿಕೊಂಡು ಬಂದರು. ಸಿಂಪಿ ಲಿಂಗಣ್ಣ,, ಸದಾಶಿವ ಒಡೆಯರ, ದು. ನಿಂ.ಬೆಳಗಲಿ, ಏಣಗಿ ಬಾಳಪ್ಪನಂತಹ ದಿಗ್ಗಜರು ಇವರ ನಾಟಕಗಳನ್ನು ಮೆಚ್ಚಿಕೊಂಡಿದ್ದರು. ಇಂದು ಪ್ರತಿ ಹಳ್ಳಗಳಲ್ಲಿನ ಜಾತ್ರೆ -ಉತ್ಸವಗಳಲ್ಲಿ ಪ್ರದರ್ಶಿಸುವ ಬಸ್‌ ಕಂಡಕ್ಟರ್‌ ಅರಿಷಿಣಗೋಡಿಯವರಿಗೆ ಆದಾಯ ಮತ್ತು ಕೀರ್ತಿ ತಂದ ಮಾಸ್ಟರ್‌ ಪೀಸ್‌ ! ಇದನ್ನು ರಂಗಭೂಮಿಯ ತವರು ಗದುಗಿನಲ್ಲಿ 1965ರಲ್ಲಿ ರಚಿಸಿದ್ದರು. ಅಂದಿನ ಮಲ್ಲಮ್ಮ ಥಿಯೇಟರ್‌ನ‌ಲ್ಲಿ 101 ಪ್ರಯೋಗಗಳನ್ನು ಕಂಡಿತು. ಈ ನಾಟಕವು ಖಾನಾವಳಿ ಚನ್ನಿಯಾಗಿ ಹಲವಾರು ಮುದ್ರಣಗಳನ್ನು ಕಂಡಿದೆ. ಅರಿಷಿಣಗೋಡಿಯವರು ಈ ನಾಟಕದಲ್ಲಿ ಜಗದೀಶನಾಗಿ, ಖಾನಾವಳಿ ದೇವಣ್ಣನಾಗಿ ಅದ್ಭುತವಾಗಿ ನಟಿಸುತ್ತಿದ್ದರು. ಅದರಲ್ಲಿರುವ ಹಾಸ್ಯ ಸ್ಪರ್ಶ ನೋಡುಗರನ್ನು ಕದಲದಂತೆ ಇರಿಸುತ್ತಿತ್ತು. ಅವರ ಪಾತ್ರ, ಸನ್ನಿವೇಶ, ಸಂಭಾಷಣೆ, ಮತ್ತು ನಿರೂಪಣಾ ತಂತ್ರ ನನ್ನ ಕಣ್ಣ ಮುಂದೆ ಸುಳಿದಾಡುತ್ತದೆ. ಈ ನಾಟಕ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. 

ಮಲಪ್ರಭೆಯ ತೀರದಲ್ಲಿ ಬಾಲ್ಯ
ವಿಜಯಪುರ ಜಿಲ್ಲೆಯ ಬೆನಕಟ್ಟಿಯಲ್ಲಿ ಜನಿಸಿದ ಭೀಮಣ್ಣನವರು ನಾಟಕಕಾರರಾಗಿ ರೂಪಗೊಂಡದ್ದು ಆಕಸ್ಮಿಕವಾದರೂ ಅವರಲ್ಲಿರುವ ಕಲಾವಿದ ಅವರನ್ನು ಸುಮ್ಮನಿರಿಸಿಕೊಳ್ಳಲಿಲ್ಲ. ಓದಿನಲ್ಲಿ ಬಲು ಚೂಟಿಯಾದ ಭೀಮಣ್ಣ ತಂದೆ ರಂಗಪ್ಪನವರಂತೆ ದುಡಿದು ಉಣ್ಣುವ ಆದರ್ಶವನ್ನು ಇಟ್ಟುಕೊಂಡು ಶಾಲಾ ಪರೀಕ್ಷೆಯಲ್ಲಿ ಫೇಲಾದಾಗ, ಅಕ್ಕನ ಊರು ಮಲಪ್ರಭೆಯ ಪ್ರಶಾಂತ ಪರಿಸರದಲ್ಲಿರುವ ಹುಚ್ಚೇಶ್ವರನ ಪವಿತ್ರ ತಾಣ ಬಾಗಲಕೋಟೆ ಜಿಲ್ಲೆಯ ಕಮತಗಿಗೆ ಬಂದು ನೆಲೆ ನಿಂತು, ತಮ್ಮ ಬದುಕನ್ನು ಕಟ್ಟಿಕೊಂಡರು. ಅಲ್ಲಿ ಕಿರಾಣಿ ಅಂಗಡಿಯನ್ನು ಇಟ್ಟುಕೊಂಡರು. ಉದ್ರಿ ಕೊಡಲು ನಿರಾಕರಿಸಿ ಊರ ಗೌಡನ ವೈರತ್ವವನ್ನು ಕಟ್ಟಿಕೊಳ್ಳಬೇಕಾಯಿತು. ಆ ಒಡಲ ಕಿಚ್ಚಿನಿಂದ ಕೊನರಿದ ಚಿಗುರು ಲಂಚ ಸಾಮ್ರಾಜ್ಯ ನಾಟಕ ರೂಪುಗೊಂಡಿತು. ಕಮತಗಿಯಲ್ಲಿ ಹವ್ಯಾಸಿ ಕಲಾವಿದರು ಸೇರಿ ಈ ನಾಟಕವನ್ನು ಆಡಿದರು. ಆಗ ಭೀಮಣ್ಣನವರಿಗೆ ತಾನೂ ಒಬ್ಬ ನಾಟಕಕಾರನಾಗಬಲ್ಲೆ ಎಂಬ ಉತ್ಸಾಹ ಹುಟ್ಟಿತು. “ಪಾರಿಜಾತ’ ಕಲಾವಿದ ಸೋದರ ಮಾವ ಕೃಷ್ಣಪ್ಪನ ಸಾಥಿ ಸಿಕ್ಕಿತು. ಕಂಪೆನಿ ಕಟ್ಟಿ, ಅನೇಕ ನಾಟಕಗಳನ್ನು ಬರೆದರೂ, ಉತ್ತಮ ನಟನಾಗಿದ್ದರೂ ಅವರಲ್ಲಿ ಯಾವುದೇ ಅಹಂಮಿಕೆಯೇ ಇರಲಿಲ್ಲ. ಸರಳತೆ, ವಿನಯತೆಗೆ ಮತ್ತೂಂದು ಹೆಸರು ಅರಿಷಿಣಗೋಡಿ. ಎಲ್ಲಾ ಬಗೆಯ ಪಾತ್ರಕ್ಕೂ ಸೈ ಎನ್ನಿಸಿಕೊಂಡ ಇವರ ರಕ್ತದಲ್ಲಿ ನಾಟಕ, ನಟರು, ನಾಟಕದ ಕಥೆ ಇತ್ಯಾದಿಗಳೇ ತುಂಬಿಕೊಂಡಿದ್ದರೂ ತಮ್ಮ ಮನೆಯನ್ನು ಎಂದೂ ಅಲಕ್ಷಿಸದ, ಕುಟುಂಬ ವತ್ಸಲರು. ಕಂಪೆನಿಯ ಕಲಾವಿದರನ್ನು ತಮ್ಮ ಕುಟುಂಬದವರೆಂದು ಮಡಿಲಲ್ಲಿಟ್ಟುಕೊಂಡು ಪೊರೆದರು. ಸಮಾಜದಲ್ಲಿ ನಾಟಕದವರೆಂದರೆ ಕೀಳರಿಮೆ. ಅದರಲ್ಲಿ ಅರಿಷಿಣಗೋಡಿಯವರು ನಾಟಕದಲ್ಲಿ ಗೆದ್ದರು. ಯಾವುದೇ ಚಟವನ್ನು ಅಂಟಿಸಿಕೊಳ್ಳದೇ ಮನೆಯನ್ನು ಗೆದ್ದ ಬಹುಮುಖ ಪ್ರತಿಭಾವಂತರು. 

ಇಂದು ನಾವು ಪ್ರಗತಿಪರರೆಂದು ಬೀಗುತ್ತೇವೆ. ಆದರೆ, ಅರಿಷಿಣಗೋಡಿಯವರು ಯಾವುದೇ ಪ್ರಚಾರ, ಸದ್ದುಗದ್ದಲವಿಲ್ಲದೇ ಅದನ್ನು 1962ರಲ್ಲಿ ಸೈನಿಕನ ಸೋದರಿ ಎಂಬ ನಾಟಕವನ್ನು ಬರೆಯುವ ಮೂಲಕ ತೋರಿಸಿಕೊಟ್ಟರು. ಆಗ ಭಾರತ-ಚೀನಾ ದೇಶದ ನಡುವಿನ ಯುದ್ಧದ ಸಮಯ, ದೇಶವನ್ನು ಕಾಯುವವನ ಕುಟುಂಬದ ಸ್ಥಿತಿಯನ್ನು ಮನಮುಟ್ಟುವಂತೆ ಈ ನಾಟಕದಲ್ಲಿ ಬಿಂಬಿಸಿದ್ದಾರೆ. ಜಾತಿಗಿಂತ ಪ್ರೀತಿ ಮುಖ್ಯ ಎಂಬ ಸಂದೇಶದ ಜೊತೆಗೆ ದೇವದಾಸಿ ಪದ್ಧತಿಯನ್ನು ವಿರೋಧಿಸಿದ ಈ ನಾಟಕ ಆಗ ಹೊಸ ಸಂಚಲನವನ್ನು ಮೂಡಿಸಿತು. “ಬಡತನ ಬಂದರೂ ಅದನ್ನು ಮುಕ್ತ ಮನದಿಂದ ಸ್ವೀಕರಿಸಬೇಕು, ಅದರಲ್ಲಿ ದೊಡ್ಡ ಸಂವೇದನೆ ಇರುತ್ತದೆ. ಇದನ್ನು ಮರೆಯಲು ಚಟಾಧೀನರಾಗಬೇಡಿ’ ಎಂಬ ಸಂದೇಶವನ್ನು  ಗರೀಬಿ ಹಟಾವೊ ನಾಟಕದಲ್ಲಿ ಬಿಂಬಿಸಿ ಅದನ್ನು ರಂಗಭೂಮಿಗೆ ತಂದರು. ಇದರೊಂದಿಗೆ ಹೆಣ್ಣು ಮಗಳು, ಕಣ್ಣಿದ್ದು ಕುರುಡ, ಇಲ್ಲಿಗೆ ಬಂತೋ ಸಂಗಯ್ಯ, ನಕಲಿ ಸಂಪನ್ನರು, ಬಡವರೂ ನಗಬೇಕು, ಗಂಡೆದೆಯ ಗೌರಿ ರಂಗಕೃತಿಗಳ ಜೊತೆಗೆ ಸಂಗ್ಯಾ ಬಾಳ್ಯಾ ಬಯಲಾಟವನ್ನು ನಾಟಕಕ್ಕಿಳಿಸಿ, ಪ್ರದರ್ಶಿಸಿದರು. ದೈತ್ಯ ಪ್ರತಿಭೆಯನ್ನು ಹೊಂದಿದ್ದರೂ ಅರಿಷಿಣಗೋಡಿಯವರು ಎಂದಿಗೂ ಪ್ರಶಸ್ತಿಗಾಗಿ ಅಂಗಲಾಚಲಿಲ್ಲ. ಅವು ಇವರನ್ನು ಹುಡುಕಿಕೊಂಡು ಬಂದವು. ಕವಿ ಕುವೆಂಪು ಹೇಳುವಂತೆ, “ತೊಲಗಾಚೆ ಕೀರ್ತಿ ಶನಿಯೆ’ ಎನ್ನುವ ಉಕ್ತಿಗೆ ಬದ್ಧರಾಗಿದ್ದವರು. ತಮ್ಮ ಇಳಿವಯಸ್ಸಿನಲ್ಲಿ ಕಮತಗಿ ಹೊರವಲಯದಲ್ಲಿ ಬಾಗಲಕೋಟೆ ರಸ್ತೆಗೆ ಹೊಂದಿರುವ ಕಬ್ಬಿನ ಗ¨ªೆಯ ಮಡಿಲಿನ ತಮ್ಮ ನಿವಾಸದಲ್ಲಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ, ಅವರ ಸುಪುತ್ರ ಅವರನ್ನು ಕಾಳಜಿಯಿಂದ ನೋಡಿಕೊಂಡರು. ಅವರಲ್ಲಿಗೆ ಹೋಗಿ ಕ್ಷೇಮ ಸಮಾಚಾರ ವಿಚಾರಿಸುವಾಗ ತಮ್ಮ ಅನುಭವದ ಮೂಟೆಯನ್ನು ಬಿಚ್ಚಿಡುತ್ತಿದ್ದರು. “ನಾಟಕ ಕಂಪೆನಿ ಕಟ್ಟಿಕೊಂಡು ಎಲ್ಲವನ್ನು, ಎಲ್ಲರನ್ನೂ ನೋಡಿದ್ದೇನೆ. ಈಗ ಅದು ಯಾಕೆ?’ ಎಂದು ಹೇಳುತ್ತ ಮೌನಕ್ಕೆ ಶರಣಾಗುತ್ತಿದ್ದರು. 

ಮಲ್ಲಿಕಾರ್ಜುನ ಕುಂಬಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next