Advertisement

16 ಸಾವಿರ ಮಂದಿಯಿಂದ ನಾಟಕ ವೀಕ್ಷಣೆ

12:31 AM Mar 15, 2020 | Lakshmi GovindaRaj |

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಕಾದಂಬರಿ ಆಧಾರಿತ ನಾಟಕ “ಮಲೆಗಳಲ್ಲಿ ಮದುಮಗಳು’ ರಂಗಾಸಕ್ತರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು ನಿರೀಕ್ಷೆಗಿಂತ ಹೆಚ್ಚಿನ ಆದಾಯ ಸಂಗ್ರಹವಾಗಿದೆ. ಈ ಬಾರಿ ನಾಟಕ ವೀಕ್ಷಿಸಿದವರಲ್ಲಿ ಟೆಕ್ಕಿಗಳೂ ಸೇರಿರುವುದು ವಿಶೇಷ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿ 25 ರಂಗ ಪ್ರದರ್ಶನ ಹಮ್ಮಿಕೊಂಡಿದ್ದರು.

Advertisement

2 ತಿಂಗಳ ರಂಗ ಪ್ರದರ್ಶನದ ಟಿಕೆಟ್‌ ಮಾರಾಟದಲ್ಲಿ ಸುಮಾರು 26 ಲಕ್ಷ ರೂ.ಸಂಗ್ರಹವಾಗಿದೆ. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮುಖ್ಯಸ್ಥ ಹಾಗೂ ಕನ್ನಡ ರಂಗಭೂಮಿ ಹಿರಿಯ ನಿರ್ದೇಶಕ ಸಿ.ಬಸವಲಿಂಗಯ್ಯ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ರಂಗಕ್ಕೆ ಅಳವಡಿಕೆ ಮಾಡಿದ್ದರು. ಮಲೆನಾಡ ಬದುಕಿನ ಹಲವು ಮಜಲುಗಳನ್ನು ಬಿಚ್ಚಿಡುವ ಈ ನಾಟಕವನ್ನು ಬಳ್ಳಾರಿ, ಕಲಬುರಗಿ, ದಾವಣಗೆರೆ, ಧಾರವಾಡ ಸೇರಿ ರಾಜ್ಯದ ಹಲವು ಭಾಗಗಳಿಂದ ರಂಗಾಸಕ್ತರು ಬೆಂಗಳೂರಿನ ಕಲಾಗ್ರಾಮಕ್ಕೆ ಆಗಮಿಸಿ ಅಹೋರಾತ್ರಿ ನಾಟಕ ವೀಕ್ಷಿಸಿದ್ದಾರೆ.

ರಂಗಾಸಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿಯೇ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಬುಕ್‌ ಮೈ ಶೋ ಡಾಟ್‌ ಕಾಮ್‌ನಲ್ಲಿ ಟಿಕೆಟ್‌ಗಳ ಮಾರಾಟಕ್ಕೆ ಅನುವು ಮಾಡಿ ಕೊಟ್ಟಿತ್ತು. ಆ ಹಿನ್ನೆಲೆಯಲ್ಲಿಯೇ ಬುಕ್‌ ಮೈ ಶೋ ನಲ್ಲಿ ಸುಮಾರು 7 ಸಾವಿರ ಟಿಕೆಟ್‌ ಮಾರಾಟವಾಗಿವೆ. ಜತೆಗೆ ನಾಟಕ ನಡೆಯುವ ಪ್ರದೇಶದ ಟಿಕೆಟ್‌ ಕೌಂಟರ್‌ನಲ್ಲಿ ಸುಮಾರು 9 ಸಾವಿರ ಟಿಕೆಟ್‌ ಖರೀದಿಯಾಗಿವೆ.

25 ಪ್ರದರ್ಶನಗಳಲ್ಲಿ ಸುಮಾರು 16 ಸಾವಿರ ರಂಗಾಸಕ್ತರು ಮಲೆಗಳಲ್ಲಿ ಮದುಗಳು ನಾಟಕವನ್ನು ಕಣ್ತುಂಬಿಕೊಂಡಿದ್ದಾರೆ ಎಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಟಕ ಪ್ರದರ್ಶನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಅನುದಾನ ರಾಷ್ಟ್ರೀಯ ನಾಟಕ ಶಾಲೆ ಹಾಗೂ ಪಾಲ್ಗೊಂಡ ತಂಡಕ್ಕೆ ನೀಡಿತ್ತು.

ರಂಗಸಜ್ಜಿಕೆಗೆ 12 ಲಕ್ಷ ರೂ. ಖರ್ಚು: ಮಲೆನಾಡಿನಲ್ಲಿ ಮೈದೆಳೆಯುವುದರಿಂದ ಆ ಕಾದಂಬರಿಯ ಸನ್ನಿವೇಶಕ್ಕೆ ತಕ್ಕಂತೆ ರಂಗಸಜ್ಜಿಕೆ ಸಿದ್ಧಪಡಿಸುವುದೂ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿಯೇ ಮಲೆನಾಡಿನಿಂದ ಸುಮಾರು 1ಟನ್‌ ಅಡಕೆ ಮರ ತರಿಸಲಾಗಿತ್ತು. 25 ದಿನಗಳಲ್ಲಿ 4 ವಿಭಿನ್ನ ಮಾದರಿಯ ಸ್ಟೇಜ್‌ ನಿರ್ಮಾಣ ಮಾಡಲಾಗಿತ್ತು. ರಂಗಸಜ್ಜಿಕೆ ನಿರ್ಮಾಣಕ್ಕಾಗಿಯೇ ಸುಮಾರು 12 ಲಕ್ಷ ರೂ. ವೆಚ cಮಾಡಲಾಗಿತ್ತು. ಜತೆಗೆ ಅಹೋರಾತ್ರಿ ನಾಟಕ ನಡೆದ ಹಿನ್ನೆಲೆಯಲ್ಲಿ ಲೈಟಿಂಗ್ಸ್‌ ಗಾಗಿಯೇ 12 ಲಕ್ಷ ರೂ. ಖರ್ಚು ಮಾಡಲಾಗಿತ್ತು.

Advertisement

ಕಲಾವಿದರು, ತಾಂತ್ರಿಕ ವರ್ಗ, ಪ್ರಸಾದನ ಸೇರಿದಂತೆ ನಾಟಕದ ಯಶಸ್ಸಿ ಹಿಂದೆ ಸುಮಾರು 120 ಜನರ ಪರಿಶ್ರಮ ಇದೆ. ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ 20 ವಿದ್ಯಾರ್ಥಿಗಳೂ ಈ ನಾಟಕದಲ್ಲಿ ಅಭಿನಯಿಸಿದ್ದರು. ವರ್ಷದ 6 ತಿಂಗಳು ಕಲಾಗ್ರಾಮದಲ್ಲಿ ಈ ನಾಟಕ ಪ್ರದರ್ಶನ ಮಾಡಿದರೆ ಜನ ವೀಕ್ಷಿಸುತ್ತಾರೆ. ಅಷ್ಟು ಬೇಡಿಕೆ ಈ ನಾಟಕಕ್ಕೆ ಇದೆ ಎಂದು ಹಿರಿಯ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದ್ದಾರೆ.

ಟೆಕ್ಕಿಗಳಿಂದಲೂ ವೀಕ್ಷಣೆ: ಇತ್ತೀಚಿನಲ್ಲಿ ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟೆಕ್ಕಿಗಳು ಸೇರಿದಂತೆ ಯುವ ಸಮೂಹ ಬೃಹತ್‌ ಕಾದಂಬರಿ ಓದಲು ಹೋಗುವುದೇ ಇಲ್ಲ. ಆ ಹಿನ್ನೆಲೆಯಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಕೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಟೆಕ್ಕಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಕಲಾಗ್ರಾಮಕ್ಕೆ ಆಗಮಿಸಿ ನಾಟಕ ವೀಕ್ಷಿಸಿದ್ದಾರೆ ಎಂದು ರಾಷ್ಟ್ರೀಯ ನಾಟಕ ಶಾಳೂಲೆ ಬೆಂಗಳೂರು ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ 23 ರೂ.ಲಕ್ಷ ಕಲೆಕ್ಷನ್‌: ಕಳೆದ ವರ್ಷ ನಡೆದ ರಂಗ ಪ್ರದರ್ಶನದಲ್ಲಿ ಸುಮಾರು 23 ಲಕ್ಷ ರೂ.ಟಿಕೆಟ್‌ಗಳಿಂದ ಸಂಗ್ರಹವಾಗಿತ್ತು. ಈ ವರ್ಷ ಸುಮಾರು 26 ಸಾವಿರ ರೂ. ಟಿಕೆಟ್‌ಗಳಿಂದ ಕಲೆಕ್ಷನ್‌ ಆಗಿದೆ. ಇದನ್ನು ನೋಡಿದರೆ ಕನ್ನಡ ರಂಗಭೂಮಿಯಲ್ಲಿ ರಂಗಾಸಕ್ತರ ಸಂಖ್ಯೆಗೆನೂ ಕಡಿಮೆಯಿಲ್ಲ ಎಂಬುವುದನ್ನು ತೋರಿಸುತ್ತದೆ. ಜತೆಗೆ ಉತ್ತಮ ಕಾದಂಬರಿಗಳನ್ನು ರಂಗಕ್ಕೆ ಅಳವಡಿಕೆ ಮಾಡಿದರೆ ರಾಜ್ಯದ ನಾನಾ ಮೂಲೆಗಳಲ್ಲಿರುವ ರಂಗಾಸಕ್ತರು ಕೂಡ ರಾಜಧಾನಿ ಬೆಂಗಳೂರಿಗೆ ಬಂದು ನೋಡುತ್ತಾರೆ ಎಂಬುವುದನ್ನು ಈ ನಾಟಕದ ರಂಗ ಪ್ರಯೋಗ ತೋರಿಸಿಕೊಟ್ಟಿದೆ ಎಂದು ಎನ್‌ಎಸ್‌ಡಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅಸಂಖ್ಯಾತ ರಂಗಾಸಕ್ತರು ನಾಟಕ ರೂಪದಲ್ಲಿ ಕಣ್ತುಂಬಿಕೊಂಡಿದ್ದಾರೆ. ಆರ್ಥಿಕ ದೃಷ್ಟಿಯಿಂದಲೂ ರಂಗಪ್ರಯೋಗ ಸಫ‌ಲವಾಗಿದೆ. ಕನ್ನಡದಲ್ಲಿ ಹಲವು ಅತ್ಯುತ್ತಮ ಕಾದಂಬರಿಗಳು ಇವೆ.ಅವೆಲ್ಲರೂ ರಂಗರೂಪ ಪಡೆಯಬೇಕು. ನಾಟಕದ ಮೂಲಕ ಜನತೆಗೆ ಅವುಗಳು ತಲುಪಬೇಕಾದ ಅಗತ್ಯವಿದೆ.
-ಸಿದ್ದಲಿಂಗಯ್ಯ, ಕವಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next