Advertisement

ನಾಡಿದ್ದು ಬರ ಅಧ್ಯಯನ ವರದಿ ಸಲ್ಲಿಕೆ: ಖಾಶೆಂಪೂರ

11:35 AM Feb 02, 2019 | Team Udayavani |

ಯಾದಗಿರಿ: ರಾಜ್ಯದ ಪ್ರವಾಹ ಪೀಡಿತ/ ಬರಪೀಡಿತ ಪ್ರದೇಶಗಳ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆಗಾಗಿ ಸರ್ಕಾರ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದ್ದು, ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಜ. 31ರಿಂದ ಬರ ಅಧ್ಯಯನ ಆರಂಭಿಸಲಾಗಿದೆ. ಫೆ. 4ರಂದು ಜಿಲ್ಲೆಯ ಬರ ಅಧ್ಯಯನ ವರದಿ ಸಲ್ಲಿಸಲಾಗುವುದು ಎಂದು ಸಹಕಾರ ಸಚಿವರು ಹಾಗೂ ಸಮಿತಿ ಅಧ್ಯಕ್ಷ ಬಂಡೆಪ್ಪ ಖಾಶೆಂಪೂರ ತಿಳಿಸಿದರು.

Advertisement

ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಶುಕ್ರವಾರ ಸಚಿವ ಸಂಪುಟದ ಉಪ ಸಮಿತಿ ಸದಸ್ಯರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ. ಪಾಟೀಲ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಶಾಸಕ ನಾಗನಗೌಡ ಕಂದಕೂರ ಅವರೊಂದಿಗೆ ಬೋರ್‌ವೆಲ್‌ ಮೂಲಕ ಕುಡಿಯುವ ನೀರು ಪೂರೈಕೆಯ ಯೋಜನೆ ಪರಿಶೀಲಿಸಿ ಅವರು ಮಾತನಾಡಿದರು.

ಪ್ರವಾಸದಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ, ಬೆಳೆಗಳ ವೀಕ್ಷಣೆ ಮಾಡಲಾಗಿದೆ. ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ರೈತರು ಬಹಳಷ್ಟು ಸಂಕಷ್ಟದಲ್ಲಿರುವುದು ಈ ವೇಳೆ ಕಂಡು ಬಂದಿದೆ ಎಂದು ತಿಳಿಸಿದರು.

ಬಳಿಚಕ್ರ ಗ್ರಾಮದಲ್ಲಿ ಟಾಸ್ಕ್ ಫೋರ್ಸ್‌ನಲ್ಲಿ ಬೋರ್‌ವೆಲ್‌ ಹಾಕಲಾಗಿದೆ. ಇದರಿಂದ ಗ್ರಾಮದ 200 ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾಹಿತಿ ನೀಡಿದರು.

ಜೋಳದ ಬೆಳೆ ವೀಕ್ಷಣೆ: ಮಲ್ಹಾರ್‌ ತಾಂಡಾದಲ್ಲಿ ಜೋಳದ ಬೆಳೆ ವೀಕ್ಷಣೆ ಮಾಡಿದ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ರೈತ ತುಕಾರಾಮ ನಾಮ್ಯಾ ಅವರಿಂದ ಮಾಹಿತಿ ಪಡೆದರು. 4 ಚೀಲ ರಸಗೊಬ್ಬರ, ಬಿತ್ತನೆ, ಗಳೆ ಹಾಗೂ ಕಳೆ ತೆಗೆಯಲು ಆಳುಗಳ ಕೂಲಿ ಸೇರಿ ಸುಮಾರು 9 ಸಾವಿರ ರೂ. ಖರ್ಚಾಗಿದೆ. ಮಳೆ ಕೊರತೆಯಿಂದ ಖರ್ಚು ಮಾಡಿದ ಹಣವೂ ಕೂಡ ಹಿಂದಿರುಗುವುದಿಲ್ಲ ಎಂದು ರೈತ ತುಕಾರಾಮ ಅಳಲು ತೋಡಿಕೊಂಡರು.

Advertisement

2018ನೇ ಸಾಲಿನ ಮುಂಗಾರು ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 1.37 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 99 ಕೋಟಿ ರೂ.ಗಳ ಪರಿಹಾರ ಮಂಜೂರಿಗಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಂತೆ ಹಿಂಗಾರಿನಲ್ಲಿ 29,098 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದ್ದು, ಬೆಳೆ ಪರಿಹಾರಕ್ಕೆ ಒಟ್ಟು 25 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಚಿವ ಸಂಪುಟ ಉಪ ಸಮಿತಿಗೆ ಮಾಹಿತಿ ನೀಡಿದರು.

ಗುಳೆ ತಪ್ಪಿಸಲು ಕೆಸಲ ಕೊಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಯಿಲೂರ ಗ್ರಾಮದಲ್ಲಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸಾರ್ವಜನಿಕರು ಗುಳೆ ಹೋಗುವುದನ್ನು ತಪ್ಪಿಸಲು ಕೆಲಸ ಕೊಡಿ ಎಂದು ಸೂಚಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 18 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿತ್ತು. ಬರಗಾಲದಿಂದ ಹೆಚ್ಚುವರಿಯಾಗಿ 9 ಲಕ್ಷ ಮಾನವದಿನಗಳನ್ನು ನೀಡಿ, ಒಟ್ಟು 27 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಪ್ರಸ್ತುತ 19 ಲಕ್ಷ ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದ್ದು, ಉಳಿದ 8 ಲಕ್ಷ ಮಾನವ ದಿನಗಳ ಗುರಿಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

ಸಚಿವರಾದ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಗ್ರಾಮದಲ್ಲಿ 634 ಜನ ಕೂಲಿಕಾರ್ಡ್‌ ಹೊಂದಿದ್ದಾರೆ. ಇಲ್ಲಿ ಕೇವಲ ಸದ್ಯ 85 ಕಾರ್ಮಿಕರಿಗೆ ಕೆಲಸ ಕೊಡಲಾಗಿದೆ. ಹೆಚ್ಚುವರಿ ಕೆಲಸಗಳನ್ನು ತೆಗೆದುಕೊಂಡು ಎಲ್ಲರಿಗೂ ಕೆಲಸ ಸಿಗುವಂತೆ ನೋಡಿಕೊಳ್ಳಬೇಕು. ಇದರಿಂದ ಗುಳೆ ಹೋಗುವುದು ತಪ್ಪುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಅವರಿಗೆ ಸೂಚಿಸಿದರು. ಈ ಬಗ್ಗೆ ಮೇಲುಸ್ತುವಾರಿ ವಹಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸೂಚಿಸಿದರು.

ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌, ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಜಿಪಂ ಉಪ ಕಾರ್ಯದರ್ಶಿ ವಸಂತ ವಿ. ಕುಲಕರ್ಣಿ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next