Advertisement

ಕಲಾಜಗತ್ತು ಸಂಸ್ಥೆ ರೂಪಾಂತರದೊಂದಿಗೆ ಸಶಕ್ತವಾಗಿ ಬೆಳೆದಿದೆ: ಶಶಿಧರ ಕೆ. ಶೆಟ್ಟಿ ಇನ್ನಂಜೆ

12:01 PM Nov 22, 2021 | Team Udayavani |

ಮುಂಬಯಿ: ಸೃಜನಶೀಲ ಮಾಧ್ಯಮವಾಗಿರುವ ರಂಗಭೂಮಿಯು ಸಮಾಜದ ಅಂಕುಡೊಂಕುಗಳನ್ನು ತಿದ್ದಿದಾಗ ಜನ ಜಾಗೃತರಾಗುತ್ತಾರೆ. ಬದಲಾವಣೆಯ ಹೊಸ ಅಲೆ ಪ್ರಾರಂಭವಾಗುತ್ತದೆ. ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸಿ ಸಾಮಾಜಿಕ ಸಂದೇಶಗಳನ್ನು ಸಾರಿದಾಗ ಕಲಾಕ್ಷೇತ್ರ ಜನಮನಕ್ಕೆ ಹತ್ತಿರವಾಗುತ್ತದೆ ಎಂದು ಬಂಟರ ಸಂಘ ಮುಂಬಯಿ ಇದರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅಭಿಪ್ರಾಯಪಟ್ಟರು.

Advertisement

ನ. 20ರಂದು ಸಂಜೆ ನಲಸೋಪರ ಪಶ್ಚಿಮದ ಎಸ್‌ಟಿ ಬಸ್‌ ಡಿಪೋ ಸಮೀಪದ ಹೊಟೇಲ್‌ ಗ್ಯಾಲಕ್ಸಿ ಸಭಾಗೃಹದಲ್ಲಿ  ನಡೆದ ಕಲಾಜಗತ್ತು ಸಂಸ್ಥೆಯ ಡಾ| ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿ ಅವರ ರಚನೆ ಹಾಗೂ ನಿರ್ದೇಶನದ “ಮೋಕೆದ ಜೋಕುಲು’ ಹೊಸ ನಾಟಕ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ನಾಲ್ಕು ದಶಕಗಳ ಇತಿಹಾಸವುಳ್ಳ ಮುಂಬಯಿಯ ಕಲಾಜಗತ್ತು ಸಂಸ್ಥೆ ಹೊಸ ಹೊಸ ರೂಪಾಂತರದೊಂದಿಗೆ ಸಶಕ್ತವಾಗಿ ಬೆಳೆದಿದೆ. ಆನೇಕ ಪ್ರತಿಭಾವಂತ ಕಲಾವಿದರನ್ನು ಸಾಂಸ್ಕೃತಿಕ ಲೋಕಕ್ಕೆ ನೀಡಿದೆ. ರಂಗಭೂಮಿ ಹವ್ಯಾಸವುಳ್ಳ ಯುವ ಸಮುದಾಯವನ್ನು ಒಗ್ಗೂಡಿಸಿ ಹಿರಿಯರ ಮಾರ್ಗದರ್ಶನದಲ್ಲಿ  ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇವರ ನೂತನ ಸರಣಿ ನಾಟಕ ಪ್ರದರ್ಶನ ಹಾಗೂ ಕಲೋತ್ಸವ ಯಶಸ್ವಿಯಾಗಿ ಸಾಗಲಿ ಎಂದು ತಿಳಿಸಿ ಶುಭ ಹಾರೈಸಿದರು.

ಕಲಾಜಗತ್ತಿನ ಸಂಸ್ಥಾಪಕ ಡಾ| ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿ  ಮಾತನಾಡಿ, ಸಂಸ್ಥೆ ಕಳೆದ 42 ವರ್ಷಗಳಿಂದ ತುಳು ರಂಗಭೂಮಿಯಲ್ಲಿ  ನೂತನ ದಾಖಲೆಗಳನ್ನು ನಿರ್ಮಿಸಿದೆ. ಸಾವಿರಾರು ಅದ್ಭುತ ಯಶಸ್ವೀ ರಂಗ ಪ್ರಯೋಗಗಳನ್ನು ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ  ಕೀರ್ತಿ ಗಳಿಸಿರುವ ನಮ್ಮ ಮುಂಬಯಿ ತುಳುವರ ಹೆಮ್ಮೆಯ ಕಲಾಜಗತ್ತು ಸಂಸ್ಥೆ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಸುಮಾರು 9 ತುಳು ನಾಟಕಗಳ ನಿರಂತರ ಪ್ರದರ್ಶನಗಳನ್ನು ಮುಂಬಯಿ ಹಾಗೂ ಇತರ ಪ್ರದೇಶಗಳಲ್ಲಿ  ನೀಡಲಿದೆ. ಈ ಅದ್ಭುತ ಸಂಯೋಜನೆಯ ನೂರಾರು ನಾಟಕಗಳ ರಂಗೋತ್ಸವದ ಉದ್ಘಾಟನ ಸಮಾರಂಭವು ನಲಸೋಪರದಲ್ಲಿ ಜರಗಲಿದೆ. ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಲ್ಲಿ  ಕಲಾಭಿಮಾನಿಗಳು ಸಹಕರಿಸಬೇಕು ಎಂದು ವಿನಂತಿಸಿದರು.

ಬಂಟರ ಸಂಘ ಮುಂಬಯಿ ಇದರ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕ ಜಯಂತ್‌ ಆರ್‌. ಪಕ್ಕಳ, ವಿರಾರ್‌-ನಲಸೋಪರ ಕರ್ನಾಟಕ ಸಂಘದ ಅಧ್ಯಕ್ಷ ಸದಾಶಿವ ಕರ್ಕೇರ, ನಲಸೋಪರ ತುಳುಕೂಟ ಫೌಂಡೇಶನ್‌ ಕಾರ್ಯದರ್ಶಿ ಲಯನ್‌ ಕೃಷ್ಣಯ್ಯ ಹೆಗ್ಡೆ, ಬಿಲ್ಲವರ ಅಸೋಸಿಯೇಶನ್‌ ನಲಸೋಪರ ವಿರಾರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಸುವರ್ಣ ಶುಭ ಹಾರೈಸಿದರು.

ಬಂಟರ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ಡಾ| ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಜಿ. ಕೆ. ಕೆಂಚನಕೆರೆ, ವೀರಜ್‌ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಪ್ರತಿಮಾ ಬಂಗೇರ, ಸುಜಾತಾ ಕೋಟ್ಯಾನ್‌, ಹೇಮಂತ್‌ ಶೆಟ್ಟಿ, ಸುರೇಶ್‌ ಕೆ. ಶೆಟ್ಟಿ, ಅಪೇಕ್ಷಾ ಶೆಟ್ಟಿ, ಶೈಲಜಾ ಶೆಟ್ಟಿ, ಶಿಲ್ಪಾ, ನಿತೇಶ್‌ ಪೂಜಾರಿ, ನಿಖೀಲ್‌ ಶೆಟ್ಟಿ, ಕೃತೇಶ್‌ ಅಮೀನ್‌, ಅಮಿತ್‌ ಶೆಟ್ಟಿ, ಗಣೇಶ್‌ ಬಂಗೇರ ಕಲಾವಿದರಾಗಿ ಸಹಕರಿಸಿದರು.

Advertisement

-ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next