ತಿ.ನರಸೀಪುರ: ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಮತದಾನದ ಜಾಗೃತಿ ಮೂಡಿಸಲು ಪಟ್ಟಣದ ಭಗವಾನ್ ವೃತ್ತದ ಬಳಿ ಬೀದಿ ನಾಟಕ ಪ್ರದರ್ಶನ ನಡೆಸಿ ಗಮನ ಸೆಳೆದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ. ನಂಜೇಶ್, ಈ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದ ಯಾವೊಬ್ಬ ಮತದಾರರೂ ಮತದಾನದಿಂದ ಹೊರಗುಳಿಯಬಾರದು. ಮತದಾನವನ್ನು ಪ್ರಜಾತಂತ್ರದ ಹಬ್ಬದಂತೆ ಆಚರಿಸುತ್ತೇವೆ.
ಮತದಾನ ನಮ್ಮ ಹಕ್ಕು ಎಂಬುದನ್ನು ಮರಯದೇ ಮತಚಲಾಯಿಸಬೇಕು ಎಂದು ಮನವಿ ಮಾಡಿದರು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಮತ ಮಾರಿಕೊಳ್ಳಬೇಡಿ. ಜನಪರ ಕೆಲಸ ಮಾಡುವ, ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವ ಯೋಗ್ಯ ಅಭ್ಯರ್ಥಿಗೆ ಮತಚಲಾಯಿಸಿ. ಇದು ನಿಮಗೆ ದೊರೆತಿರುವ ಅತ್ಯುತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ವಿವಿಧ ಜಾಗೃತಿ ಫಲಕಗಳನ್ನು ಪ್ರಶಿಕ್ಷಣಾರ್ಥಿಗಳು ಹಿಡಿದು ಜಾಗೃತಿ ಮೂಡಿಸಿದರು. ಪ್ರಶಿಕ್ಷಣಾರ್ಥಿಗಳ ಮತ್ತೂಂದು ಮಹಿಳಾ ತಂಡ ಬೀದಿ ನಾಟಕದ ಮೂಲಕ ಮತದಾನ ನಮ್ಮ ಹಕ್ಕು, ಪ್ರಜಾತಂತ್ರದ ರಕ್ಷಣೆಗೆ ಮತದಾನ ಕಡ್ಡಾಯ.
ಮತಗಟ್ಟೆಗೆ ಬಂದು ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸ್ವಾಮಿ, ಉಪನ್ಯಾಸಕ ಮರಿಸ್ವಾಮಿ, ಬಿಆರ್‌ಪಿ ಎಚ್.ಎಂ.ಶಂಕರ್, ನರೇಗಾ ನಿರ್ದೇಶಕ ನಿಂಗಯ್ಯ, ಶಶಿಧರ್, ಸೇರಿದಂತೆ ಉಪನ್ಯಾಸಕರು, ಶಿಕ್ಷಣಾರ್ಥಿಗಳು ಹಾಜರಿದ್ದರು.