Advertisement

ನಾಟಕ ರಂಗ ಸಿನೆಮಾ ರಂಗಕ್ಕಿಂತಲೂ ಕಠಿನ: ರಾಜಶೇಖರ ಕೋಟ್ಯಾನ್

05:10 PM Nov 25, 2019 | Suhan S |

ಮುಂಬಯಿ, ನ. 24: ಕಲಾವಿದರಿಗೆ ಪ್ರೇಕ್ಷಕರು ದೇವರಂತೆ. ಎಲ್ಲರೂ ನಾಟಕವನ್ನು ನೋಡುತ್ತಾರೆ ಆದರೆ ಅದರ ಹಿಂದಿರುವ ಕಷ್ಟದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ನಾನು ಕಲಾವಿದನಾದರೂ ಓರ್ವ ಸಿನೆಮಾ ಕಲಾವಿದ. ನಾಟಕ ಮಾಡಲು ನನ್ನಿಂದ ಕಷ್ಟಸಾಧ್ಯ. ನಾಟಕ ಮಾಡುವುದು ಸುಲಭದ ಕೆಲಸವಲ್ಲ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷಡಾ| ರಾಜಶೇಖರ ಕೋಟ್ಯಾನ್‌ ಅಭಿಪ್ರಾಯಪಟ್ಟರು.

Advertisement

ನ. 23ರಂದು ಬೊರಿವಲಿ ಪಶ್ಚಿಮದ ಗೋವಿಂದ್‌ನಗರದ ಆ್ಯಂಪಿ ಥಿಯೇಟರ್‌ನಲ್ಲಿ ಜರಗಿದ ನವೋದಯ ಕಲಾರಂಗ ಮುಂಬಯಿ ಇದರ 32ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಾಟಕ ಮಾಡಲು ನಾಟಕ ಕಲಾವಿದರಿಗೆ ಮಾತ್ರ ಸಾಧ್ಯ. ಆದುದರಿಂದ ನಾಟಕ ಕಲಾವಿದರನ್ನು ನಾನು ಅಭಿನಂದಿಸುತ್ತಿರುವೆನು. ನಾಟಕ ದೊಂದಿಗೆ ಅಸಹಾಯಕರಿಗೆ ಸಹಕಾರವನ್ನು ನೀಡುತ್ತಿರುವ ನವೋದಯ ಕಲಾರಂಗ ಮುಂಬಯಿಗೆ ನನ್ನ ಪ್ರೋತ್ಸಾಹವಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡುತ್ತ ಅದೆಷ್ಟೋ ಕಲಾವಿದರಿಗೆ ಆಶ್ರಯವನ್ನು ನೀಡಿದ ಈ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ಸಂತೋಷದ ಸಂಗತಿಯೇನೆಂದರೆ ನನ್ನೊಂದಿಗೆ ಅಭಿನಯಿಸಿದ ಮೂವರು ನಟಿಯರನ್ನು ಇಂದು ಸಮ್ಮಾನಿಸಲಾಗಿದೆ. ಮುಂಬಯಿಯಲ್ಲಿ ಊರಿನಲ್ಲಿರುವುದಕ್ಕಿಂತಲೂ ಪ್ರತಿಭಾವಂತ ಕಲಾವಿದರು, ನಿರ್ದೇಶಕರು ಮುಂತಾದವರಿದ್ದು ಇವರಿಗೆ ನಾವು ಮೊದಲು ಅವಕಾಶವನ್ನು ನೀಡಬೇಕು ಅದೇ ರೀತಿ ಊರಿಂದ ಇಲ್ಲಿಗೆ ಬರುವ ತಂಡಕ್ಕೂ ನಾವು ಪ್ರೋತ್ಸಾಹಿಸಬೇಕು ಎನ್ನುತ್ತಾ ನಾವು ನಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಪರಿವರ್ತಿಸೋಣ ಎಂದು ಕರೆಯನ್ನಿತ್ತರು.

ದಹಿಸರ್‌ ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಾದ ಗುರುಶಂಕರ್‌ ಭಟ್‌ ಮತ್ತು ಶಂಕರ್‌ ಗುರು ಭಟ್‌ ಆಶೀರ್ವಚನ ನೀಡಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಉಪಾಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಮಾತನಾಡಿ, ನವೋದಯ ಕಲಾರಂಗವು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿರುವುದು ಅಭಿನಂದನೀಯ. ಈ ಸಂಘಟನೆಯಿಂದ ಹಿಂದಿನಂತೆ ಮುಂದೆಯೂ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಲಿ ಎಂದರು.

ಇನ್ನೋರ್ವ ಅತಿಥಿ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಾಜಕುಮಾರ್‌ ಕಾರ್ನಾಡ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಕಳೆದ 32 ವರ್ಷ ಗಳಿಂದ ನಿರಂತರವಾಗಿ ನವೋದಯ ಕಲಾರಂಗವು ಕಲಾ ಕ್ಷೇತ್ರಕ್ಕೆ ಮಾಡುತ್ತಿರುವ ಸೇವೆ ಅಭಿನಂದನೀಯ. ವಿದ್ಯಾನಿಧಿ ಹಾಗೂ ಆರೋಗ್ಯ ನಿಧಿಗೂ ನಾವು ಇನ್ನೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿದ್ದ ಗೋರೆ ಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ನಾರಾಯಣ ಮೆಂಡನ್‌ ಮಾತನಾಡುತ್ತಾ, ಈ ಸಂಘಟನೆಯು ನಮ್ಮ ನಾಡಿನ ಭಾಷೆಯನ್ನು ಇಲ್ಲಿ ಉಳಿಸಿ ಬೆಳೆಸುವಂತೆ ಮಾಡುತ್ತಿದೆ ಎಂದರಲ್ಲದೆ, ಸಂಸ್ಥೆಯು ಒಂದು ನಾಟಕವನ್ನು 90 ಬಾರಿ ಪ್ರದರ್ಶಿಸಿದ್ದನ್ನು ಕೂಡ ನೆನಪಿಸಿಕೊಂಡರು.

Advertisement

ಇನ್ನೋರ್ವ ಅತಿಥಿ ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ. ಜಿ. ಶೆಟ್ಟಿಯವರು ಮಾತನಾಡುತ್ತಾ,ಇವತ್ತಿನ ಸಮ್ಮಾನವು ಬಹಳ ಅರ್ಥಪೂರ್ಣವಾಗಿದ್ದು, ಹೊಸ ಕಲಾವಿದರನ್ನು ಈ ಕಲಾ ಸಂಸ್ಥೆಗೆ ಸೇರಿಸುದರೊಂದಿಗೆ ವಿದ್ಯಾಭ್ಯಾಸಕ್ಕೆ ಹಾಗೂ ಶಿಕ್ಷಣಕ್ಕೆ ಸಹಕರಿಸುತ್ತಿರುವ ಈ ನಾಟಕ ಸಂಘಟನೆಯನ್ನು ಪ್ರೋತ್ಸಾಹಿಸೋಣ ಎಂದು ಹೇಳಿದರು.

ಅತಿಥಿ, ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ರಾದ ನಟ ಅರವಿಂದ ಶೆಟ್ಟಿ ಕೊಜಕೊಳ್ಳಿ ಅವರು ಮಾತನಾಡಿ, ಇಂದು ಇಲ್ಲಿ ಕಲಾವಿದರಾದ ನಾವು ಒಟ್ಟಾಗಿದ್ದು ಸಂತೋಷ ತಂದಿದೆ. ನಾಟಕ ರಚಿಸುವುದಕ್ಕಿಂತ ಅದನ್ನು ವೇದಿಕೆಯ ಮೇಲೆ ತರುವುದು ಸುಲಭ ಕೆಲಸವಲ್ಲ. ಇದಕ್ಕೆ ಕಲಾ ಪೋಷಕರ ಪ್ರೋತ್ಸಾಹವೂ ಬೇಕಾಗಿದೆ ಎಂದರು. ಉದ್ಯಮಿ ಅನಿಲ್‌ ಸಾಲ್ಯಾನ್‌ , ಅಶೋಕ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನವೋದಯ ಕಲಾರಂಗ ಮುಂಬಯಿಯ ಗೌರವ ಕಾರ್ಯದರ್ಶಿ ಪ್ರತಿಮಾ ಬಂಗೇರ ಇವರು ಕಲಾರಂಗದ ಚಟುವಟಿಕೆಯ ಮಾಹಿತಿಯಿತ್ತರು. ಮಹಾನಗರದ ಜನಪ್ರಿಯ ಕಲಾವಿದರಾದ ಜ್ಯುಲಿಯಟ್‌ ಪಿರೆರಾ, ಚಂದ್ರಾ ವತಿ ದೇವಾಡಿಗ, ಸುಧಾ ಶೆಟ್ಟಿ, ಚಂದ್ರಕಾಂತ ಸಾಲ್ಯಾನ್‌ ಸಸಿಹಿತ್ಲು ಮತ್ತು ಶಿವು ಶ್ರೀಯಾನ್‌ ಅವರನ್ನು ಸಮ್ಮಾನಿಸಲಾಯಿತು. ಯುವ ಚಿತ್ರ ನಿರ್ದೇಶಕ, ನಟ ರಂಜಿತ್‌ ಕೋಟ್ಯಾನ್‌ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನವೋದಯ ಕಲಾರಂಗ ಮುಂಬಯಿಯ ಅಧ್ಯಕ್ಷರಾದ ಶಿವ ರಾಮ ಸಚ್ಚೇರಿಪೇಟೆ ಎಲ್ಲರಿಗೂ ಅಭಾರ ಮನ್ನಿಸಿದರು. ಉಪಾಧ್ಯಕ್ಷ ರಾದ ಮನೋಹರ್‌ ಶೆಟ್ಟಿ ನಂದಳಿಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸುರೇಶ್‌ ಇರ್ವತ್ತೂರು, ಗೌರವ ಕೋಶಾಧಿಕಾರಿ ಚಂದ್ರಕಾಂತ್‌ ಸಾಲ್ಯಾನ್‌ ಸಸಿಹಿತ್ಲು, ಜತೆ ಕೋಶಾಧಿಕಾರಿ ರಹೀಂ ಸಚ್ಚೇರಿಪೇಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಶೆಟ್ಟಿ ಮತ್ತಿತರ ಸದಸ್ಯರು ಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮನೋರಂಜನೆಯ ಅಂಗ ವಾಗಿ ನೃತ್ಯ ಕಾರ್ಯಕ್ರಮ ಹಾಗೂ ಶಿವಕುಮಾರ್‌ ರೈ ಮುಡಿಪು ರಚಿಸಿ, ಚಂದ್ರಕಾಂತ್‌ ಸಾಲ್ಯಾನ್‌ ಸಸಿಹಿತ್ಲು ನಿರ್ದೇಶಿಸಿದ ತುಳು ಹಾಸ್ಯಮಯ ನಾಟಕ ಲಿಂಕ್‌ ಲಿಂಗಪ್ಪೆ ನವೋದಯ ಕಲಾರಂಗದ ಕಲಾವಿದರಿಂದ ಪ್ರದರ್ಶನಗೊಂಡಿತು.

 

-ಚಿತ್ರ-ವರದಿ: ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next