ನವದೆಹಲಿ: ದೆಹಲಿ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಇವಿಎಂ(ವಿದ್ಯುನ್ಮಾನ ಮತಯಂತ್ರ)ದ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದ್ದ ವೇಳೆ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಅವರನ್ನು ಸ್ಪೀಕರ್ ಅವರು ಒಂದು ದಿನದ ಮಟ್ಟಿಗೆ ಅಮಾನತು ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಇವಿಎಂ(ವಿದ್ಯುನ್ಮಾನ ಮತಯಂತ್ರ)ವನ್ನು ಹೇಗೆ ತಿರುಚಬಹುದು ಎಂಬ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು.
ಆಡಳಿತಾರೂಢ ಪಕ್ಷದ ಮೂಲಗಳ ಪ್ರಕಾರ, ಇಂದಿನಿಂದ ವಿಶೇಷ ಅಧಿವೇಶನಕ್ಕೆ ಚಾಲನೆ ನೀಡಲಾಗಿತ್ತು. ಕಲಾಪ ಆರಂಭವಾದ ವೇಳೆಯಲ್ಲಿ ಆಪ್ ನ ಆಲ್ಕಾ ಲಾಂಬಾ ಅವರು ಮಾತನಾಡಿ, ಇವಿಎಂಗಳ ಬಗ್ಗೆ ತಿಳಿದುಕೊಳ್ಳುವ ಅಧಿಕಾರ ಸಾರ್ವಜನಿಕರಿಗೆ ಇದೆ. ಹಾಗಾಗಿ ಇವಿಎಂ ಹೇಗೆ ತಿರುಚಲಾಗುತ್ತದೆ ಎಂಬುದನ್ನು ಸದನದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುತ್ತದೆ ಎಂದು ಪ್ರಸ್ತಾಪಿಸಿದ್ದರು. ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಅವರು ತೀವ್ರ ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಮಾರ್ಷಲ್ಸ್ ಗಳನ್ನು ಕರೆಯಿಸಿ ಸದನದಿಂದ ಹೊರ ಕಳುಹಿಸಿರುವುದಾಗಿ ವರದಿ ವಿವರಿಸಿದೆ.
ಆಪ್ ಶಾಸಕರು ಇವಿಎಂ ಬಗ್ಗೆ ಪ್ರಸ್ತಾವಿಸುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಗುಪ್ತಾ, ಆಪ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದರು. ಸತ್ಯೇಂದ್ರ ಜೈನ್ ಶಾಮೀಲಾಗಿರುವ ವಿವಾದಿತ ಭೂ ವ್ಯವಹಾರದ ಬಗ್ಗೆ ಗುಪ್ತಾ ಪ್ರಶ್ನಿಸಿದ್ದರು. ಆದರೆ ಸ್ಪೀಕರ್ ಅವರು ಬಿಜೆಪಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಆದರೆ ಗುಪ್ತಾ ಅವರು ತಮ್ಮ ಮಾತನ್ನು ಮುಂದುವರಿಸಿದ್ದರು.
ಬಳಿಕ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಗುಪ್ತಾಗೆ ಸದನದಿಂದ ಹೊರ ಹೋಗುವಂತೆ ಸೂಚಿಸಿದ್ದರು. ಅದಕ್ಕೂ ಜಗ್ಗದಿದ್ದಾಗ, ಮಾರ್ಷಲ್ಸ್ ಗಳನ್ನು ಕರೆಯಿಸಿ ಅವರ ಗುಪ್ತಾರನ್ನು ಹೊರಗೆ ಕರೆದೊಯ್ದಿದ್ದರು. ಸದನದ ಗೌರವಕ್ಕೆ ಚ್ಯುತಿ ತಂದ ಬಿಜೆಪಿ ಶಾಸಕ ಗುಪ್ತಾ ಅವರನ್ನು ಕಲಾಪದಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಿರುವುದಾಗಿ ಸ್ಪೀಕರ್ ಹೇಳಿದರು.
ಆಪ್ ಗೆ ಇವಿಎಂ ಎಲ್ಲಿಂದ ಸಿಕ್ತು?
ಇಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷ ಇವಿಎಂ ತಿರುಚುವುದು ಹೇಗೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿತ್ತು. ಆದರೆ ಇದೀಗ ಇವಿಎಂ ಬಗ್ಗೆ ಆಪ್ ಮಾಡಿರೋ ಆರೋಪ ತಳ್ಳಿ ಹಾಕಿರುವ ಕೇಂದ್ರ ಚುನಾವಣಾ ಆಯೋಗ, ಆಮ್ ಆದ್ಮಿ ಪಕ್ಷಕ್ಕೆ ಇವಿಎಂ ಎಲ್ಲಿಂದ ಸಿಕ್ಕಿದೆ ಎಂಬ ಪ್ರಶ್ನೆಯನ್ನು ಹಾಕಿದೆ. ಚುನಾವಣೆಯಲ್ಲಿ ಬಳಸೋ ಯಂತ್ರ ಹಾಗೂ ಮಾದರಿ ಯಂತ್ರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ ಎಂದು ಆಯೋಗ ತಿಳಿಸಿದೆ.