Advertisement

ಅವಸಾನದ ಅಂಚಿಗೆ ನಾಟಕ ಸಂಸ್ಕೃತಿ

11:10 AM Mar 07, 2019 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಇಂದು ನಾಟಕ ಸಂಸ್ಕೃತಿ ಅವಸಾನದ ಅಂಚಿಗೆ ಬಂದು ತಲುಪಿ ನಾಟಕಗಳಿಗೆ ಜೀವಾಳವಾಗಿದ್ದ ಕಲಾವಿದರು ಕೂಡ ಇಂದು ಒಪ್ಪೊತ್ತಿನ ಊಟಕ್ಕಾಗಿ ಪರದಾಡಬೇಕಿದೆ ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಬೊಮ್ಮಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿವರ್ತನಾ ಟ್ರಸ್ಟ್‌ ವತಿಯಿಂದ ಆಯೋ ಜಿಸಿದ್ದ ಅಪ್ಪ-ಮಗ ಸಾಮಾಜಿಕ ಹಾಸ್ಯಭರಿತ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಕ್ಕೆ ಧಕ್ಕೆ: ಗ್ರಾಮೀಣ ಭಾಗದಿಂದ ಬಂದ ನೂರಾರು ನಾಟಕ ಕಲಾವಿದರು ಇಂದು ಮೂಲೆ ಗುಂಪಾದಂತಾಗಿದೆ. ನಾಟಕ ಸೊಗಡು ಇಂದಿಗೂ ಎಲ್ಲರಲ್ಲೂ ಮನೆ ಮಾತಾಗಿದ್ದರೂ ಟಿವಿ ಸಂಸ್ಕೃತಿಯಿಂದ ನಾಟಕ ಸಂಸ್ಕೃತಿಗೆ ಧಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಯುವಪೀಳಿಗೆ ಮೇಲೆ: ಇಂದಿನ ಆಧುನಿಕ ಸಮಾಜದಲ್ಲಿ ನವ ಮಾಧ್ಯಮಗಳ ಪ್ರಭಾವ ದಿಂದ ಮುಂದಿನ ಪೀಳಿಗೆಗೆ ನಾಟಕ ಸಂಸ್ಕೃತಿ ಎಂಬುದು ಮರೀಚಿಕೆಯಾಗಲಿದೆ. ಜಾನಪದ ಮತ್ತು ರಂಗ ಕಲೆಗಳು ಸಮಾಜದ ಸಾಂಸ್ಕೃತಿಕ ಸಂಪತ್ತಾಗಿದ್ದು, ಇದನ್ನು ಕಾಪಾಡಿಕೊಳ್ಳುವ ಗುರುತ್ತರ ಜವಾಬ್ದಾರಿ ಇಂದಿನ ವಿದ್ಯಾರ್ಥಿಯುವ ಪೀಳಿಗೆ ಮೇಲಿದೆ ಎಂದರು.

ಇತ್ತೀಚೆಗೆ ದೃಶ್ಯ ಮಾಧ್ಯಮಗಳಲ್ಲಿ ಬರುವ ಕಿರುತೆರೆ ಧಾರವಾಹಿಗಳಿಗೆ ಮಾರು ಹೋಗಿರುವ ಮಹಿಳೆಯರು ದೇಶೀಯ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪಡಿಣಾಮ ಬೀರಲಿದೆ ಎಂದರು. ದಸಂಸ ಜಿಲ್ಲಾ ಸಂಚಾಲಕ ಕೇಶವ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಗ್ರಾಮೀಣ ಮಟ್ಟದಲ್ಲಿ ನಾಟಕ ಸಂಸ್ಕೃತಿ ಬೆಳೆಸಲು ವಿಶೇಷ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಿಂದ ಕನ್ನಡ ಉಳಿಸುವುದರ ಜೊತೆಗೆ ಗ್ರಾಮೀಣ ನಾಟಕ ಕಲಾವಿದರಲ್ಲಿನ ಸೂಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಂತಾಗಲಿದೆ ಎಂದರು.

Advertisement

ನಶಿಸಲು ಬಿಡಬಾರದು: ನಾಟಕ ಸಂಸ್ಕೃತಿಯು ಜನರಲ್ಲಿ ಸಾಮಾಜಿಕ ಸಮಸ್ಯೆ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವುದರಿಂದ ನಾಟಕದ ಬಗ್ಗೆ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ನಾಟಕದ ಅಭಿರುಚಿ ಹೆಚ್ಚು ಬೆಳೆಸಿಕೊಳ್ಳಬೇಕೆಂದು ಹೇಳಿ ವರನಟ ಡಾ.ರಾಜ್‌ ಕುಮಾರ್‌, ಬಾಲಕೃಷ್ಣ, ವಿಷ್ಣುವರ್ಧನ್‌ ಸೇರಿದಂತೆ ನಾಟಕ ಕಂಪನಿಗಳಲ್ಲಿ ಹೆಸರುವಾಸಿ ಪಡೆದ ಅನೇಕ ಕಲಾವಿದರು ಹೆಸರಾಂತ ಚಲನಚಿತ್ರಗಳ ಮುಖೇನ ಮನೆ ಮಾತಾದರು. ಇಂತಹ ನಾಟಕ ಕಲೆ ನಶಿಸಿ ಹೋಗದಂತೆ ನೋಡಿಕೊಳ್ಳಬೇಕೆಂದರು.
 
ಬಚ್ಚಪ್ಪ ಕಲಾ ತಂಡದಿಂದ ಅಪ್ಪ-ಮಗ ಸಾಮಾಜಿಕ ಹಾಸ್ಯಭರಿತ ನಾಟಕ ಪ್ರದರ್ಶಿಸಲಾಯಿತು. ಎನ್‌ಎಸ್‌ಯುಐನ ರಾಜ್ಯ ಸಂಚಾಲಕ  ಕೆ.ಎನ್‌.ಮುನೀಂದ್ರ, ಬೊಮ್ಮನ ಹಳ್ಳಿ ನಾರಾಯಣಸ್ವಾಮಿ, ಪುಟ್ಟು, ಆಶಾ ಫೌಂಡೇಷನ್‌ನ ಆಶಾ, ರಾಜೇಶ್‌, ಮುನಿ ನಂಜಪ್ಪ, ನವೀನ್‌, ಲೋಕೇಶ್‌ ಇದ್ದರು. 

ನಾಟಕದ ಬಗೆ ಅಭಿರುಚಿ ಮೂಡಿಸುವ ಕಾರ್ಯಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೊಮ್ಮನಹಳ್ಳಿ ಪರಿವರ್ತನಾ ಟ್ರಸ್ಟ್‌ ಅಧ್ಯಕ್ಷ ಬೊಮ್ಮನಹಳ್ಳಿ ವೇಣು ಮಾತನಾಡಿ, ನಾಟಕ ಮತ್ತು ಕಲಾವಿದರ ಪ್ರೋತ್ಸಾಹಕ್ಕೆ ಪ್ರೇಕ್ಷಕರೇ ಕಾರಣ. ಇವರ ಶ್ರೀ ರಕ್ಷೆಯಿಂದ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಪರಿವರ್ತನಾ ಟ್ರಸ್ಟ್‌ ವತಿಯಿಂದ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾಟಕ ಸಂಸ್ಕೃತಿ ಬಗ್ಗೆ ಅಭಿರುಚಿ ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದರು.

ಹಿಂದಿನ ಅನೇಕರು ಅಕ್ಷರ ಜ್ಞಾನ ವಿಲ್ಲದಿದ್ದರೂ ನ್ಯಾಯ, ಸತ್ಯ ಪರಂಪರೆ ತಿಳಿಸಿ ವಿಚಾರಿಸುವ ಗೀಗೀ ಪದ, ಲಾವಣ್ಯ, ವಚನ ಸಾಹಿತ್ಯ, ಸೋಬಾನೆ, ಹೀಗೆ ಅನೇಕ ಕಲಾಪ್ರಕಾರಗಳ ಮೂಲಕ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಸೃಷ್ಠಿಸಲು ಕಾರಣಕರ್ತರಾಗಿದ್ದರು. ಅಂತಹ ಕಲಾವಿದರ ಒಳಿತಿಗಾಗಿ ಸರ್ಕಾರ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next