ಬೂಡಿನ ಮನೆತನ ವಿಶೇಷವಾದ ಗೌರವಕ್ಕೆ ಪಾತ್ರವಾದ ಮನೆತನ ಎಂಬ ಸಂಪ್ರದಾಯ ಹಿಂದೆ ಇತ್ತು. ಅಂತಹ ಎಷ್ಟೋ ಬೂಡುಗಳು ಈ ಜಿಲ್ಲೆಯಲ್ಲಿ ಆಗಿಹೋಗಿವೆ. ಬೂಡಿನ ಒಳಗಿನ ಜನರ ಮನಸ್ಥಿತಿ, ತಿಕ್ಕಾಟ, ಸಮಸ್ಯೆ ಯಾವುದೂ ಸಾಮಾನ್ಯ ಜನರ ಅರಿವಿಗೆ ಬರುವುದಿಲ್ಲ. ಅಂತಹ ಒಂದು ಬೂಡಿನ ಒಳಗಿನ ತಿಕ್ಕಾಟವೇ “ಬೊಜ್ಜ’ ನಾಟಕದ ಕಥಾವಸ್ತು.
ಕರಾವಳಿ ಕಲಾವಿದರು (ರಿ.) ಮಲ್ಪೆ ಆಶ್ರಯದಲ್ಲಿ ನಡೆದ ಮೂರು ದಿವಸದ ನಾಟಕೋತ್ಸವಲ್ಲಿ ಪ್ರಥಮ ದಿನ ಕರಾವಳಿ ಕಲಾವಿದರೇ ಅಭಿನಯಿಸಿದ, ನಂದಳಿಕೆ ನಾರಾಯಣ ಶೆಟ್ಟಿ ರಚಿಸಿದ, ದಿವಾಕರ ಕಟೀಲು ನಿರ್ದೇಶಿಸಿದ ನಾಟಕ “ಬೊಜ್ಜ’ ಪ್ರದರ್ಶಿಸಲ್ಪಟ್ಟಿತು.
ತುಳುನಾಡು ಎಂದರೆ ದೇವರ ನಾಡು, ದೈವಗಳ ನಾಡು. ಈ ಎರಡು ಜಿಲ್ಲೆಗಳ ನಂಬಿಕೆ, ಆಚಾರ, ವಿಚಾರ, ಭಾಷೆ ಬಹಳ ವಿಶಿಷ್ಟ. ತುಳುನಾಡಿನ ಪರಂಪರೆಯಲ್ಲಿ ಬೂಡುಗಳಿಗೆ ಬಹಳ ಮಹತ್ವವಿದೆ. ಬೂಡಿನ ಮನೆತನ ವಿಶೇಷವಾದ ಗೌರವಕ್ಕೆ ಪಾತ್ರವಾದ ಮನೆತನ ಎಂಬ ಸಂಪ್ರದಾಯ ಹಿಂದೆ ಇತ್ತು. ಅಂತಹ ಎಷ್ಟೋ ಬೂಡುಗಳು ಈ ಜಿಲ್ಲೆಯಲ್ಲಿ ಆಗಿಹೋಗಿವೆ. ಬೂಡಿನ ಒಳಗಿನ ಜನರ ಮನಸ್ಥಿತಿ, ತಿಕ್ಕಾಟ, ಸಮಸ್ಯೆ ಯಾವುದೂ ಸಾಮಾನ್ಯ ಜನರ ಅರಿವಿಗೆ ಬರುವುದಿಲ್ಲ. ಅಂತಹ ಒಂದು ಬೂಡಿನ ಒಳಗಿನ ತಿಕ್ಕಾಟವೇ “ಬೊಜ್ಜ’ ನಾಟಕದ ಕಥಾವಸ್ತು.
ಗುತ್ತಿನ ಯಜಮಾನನ ಪತ್ನಿ ತೀರಿಕೊಂಡಾಗ ನಡೆಯಬೇಕಾದ ಕಾರ್ಯ ಅವರ ಬೊಜ್ಜ. ಅವರ ಇಬ್ಬರು ಗಂಡು ಮಕ್ಕಳಾದ ರಾಮ ಮತ್ತು ಗೋಪಾಲ ಮಗಳು ವಿಧವೆ ರಾಧಕ್ಕ. ಬೇಕಾದಷ್ಟು ಆಸ್ತಿ , ಅಂತಸ್ತು ಇದ್ದರೂ ಮಗ ರಾಮನ ಅನೈತಿಕ ವ್ಯವಹಾರ.ಎಲ್ಲಾ ಕಡೆ ಸಾಲ. ಎರಡೆರಡು ಮನೆಯ ಖರ್ಚು ನೋಡಿಕೊಳ್ಳುವ ಜವಾಬ್ದಾರಿ. ಬೆಳೆದು ನಿಂತ ಮಗ ರವಿ ಅಪ್ಪನ ಅನೈತಿಕ ಸಂಬಂಧವನ್ನು ಬಹಿರಂಗವಾಗಿ ಅಲ್ಲದಿದ್ದರೂ ಸಂದರ್ಭ ಸಿಕ್ಕಿದಾಗಲೆಲ್ಲ ವಿರೋಧಿಸುತ್ತಾನೆ. ಬೊಂಬಯಿಯಲ್ಲಿರುವುದು ಇನ್ನೊಬ್ಬ ಮಗ ಗೋಪಾಲ ಮತ್ತು ಅವನ ಹೆಂಡತಿ ರಶ್ಮಿ. ಇಷ್ಟು ಉತ್ಪತ್ತಿ ಇದ್ದರೂ ಸಾಲದಲ್ಲಿರುವ ಅಣ್ಣನಲ್ಲಿ ಸಂಶಯ, ಅಮ್ಮನ ಬೊಜ್ಜಕ್ಕೆ ಎಷ್ಟು ಜನ ಸೇರಬಹುದು ಎನ್ನುವುದರ ಬಗ್ಗೆ ಚರ್ಚೆ. ಬೂಡಿನ ಗುರ್ಕಾರನದ್ದು ಹೆಂಡತಿ ಸಾವಿನ ನಂತರ ಅವಳ ಚಿನ್ನವನ್ನು ಬೊಜ್ಜಕ್ಕೆ ಖರ್ಚು ಮಾಡಿ ಎಂದು ಕೇಳಿಕೊಳ್ಳುವ ದೈನೇಸಿ ಸ್ಥಿತಿ. ಈ ಮಧ್ಯೆ ಅಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಹೆಂಗಸಿನ ಮನೆಗೆ ಬೆಂಕಿ ಇಡಲು ಹೋಗಿ ಗಲಾಟೆಯಾಗಿ ಆ ಗಲಾಟೆಯಲ್ಲಿ ಮನ ನೊಂದು ಗುತ್ತಿನಾರ್ ತೀರಿಕೊಳ್ಳುವನು. ಎರಡನೇ ಮಗ ಗೋಪಾಲ ವಾಪಾಸು ಬೊಂಬಾಯಿಗೆ ಹೊರಡುವನು.
ಆಗಿನ ಕಾಲದಲ್ಲಿ ಬೊಂಬಾಯಿ ಎಂದರೆ ತುಳುನಾಡಿನವರಿಗೆ ಕೊಪ್ಪರಿಗೆಯೇ ಸರಿ. ಗುರುವ ಗುತ್ತಿಗೆ ಬಂದು ಶೋಭಾಳಲ್ಲಿ ಮಗನಿಗಾಗಿ ಪತ್ರ ಬರೆಯುವ ದೃಶ್ಯ ತುಂಬಾ ಮಾರ್ಮಿಕವಾಗಿ ಮತ್ತು ಕಾಡುವಂತೆ ಮಾಡಿದೆ. ಗುರುವನಾಗಿ ಹರೀಶ್ ಬಿ. ಕರ್ಕೇರರ ನಟನೆ ನೆನಪಿನಲ್ಲಿ ಉಳಿಯುವಂತದ್ದು. ಗುತ್ತಿನವರ ಮಗ ಗೋಪಾಲ (ಜಗದೀಶ ಆಚಾರ್ಯ ಪೆರಂಪಳ್ಳಿ) ಮತ್ತು ಹೆಂಡತಿ ರಶ್ಮಿ (ಚಂದ್ರಾವತಿ ಪಿತ್ರೋಡಿ) ತಮ್ಮ ಮಾತಿನಲ್ಲಿ ಅಲ್ಲಲ್ಲಿ ಹಿಂದಿ ಮತ್ತು ಮರಾಠಿ ಬೆರೆಸಿದ್ದರೆ ಚೆನ್ನಾಗಿರುತ್ತಿತ್ತು.
ಗುತ್ತಿನಾರ್ ಆಗಿ ವಿಜಯ ಆರ್. ನಾಯಕ್, ಹಿರಿಯ ಮಗ ರಾಮನಾಗಿ ನೂತನ್ ಕುಮಾರ್ ಕೊಡಂಕೂರು, ರವಿಯಾಗಿ ಸುರೇಂದ್ರ ಆಚಾರ್ಯ, ರಾಧಕ್ಕಳಾಗಿ ಕುಸುಮಾ ಕಾಮತ್, ಶೋಭಾ ಆಗಿ ಜಿನ್ನಿಫರ್ ಸ್ನೇಹಾ, ಬೂಚನಾಗಿ (ನಾಗರಾಜ ಆಚಾರ್ಯ ಕರ್ವಾಲು) ಹರೀಶ್, ಅಕ್ಷಯ, ಸುರೇಶ್ ಜತ್ತನ್ನ ಎಲ್ಲರ ನಟನೆ ಪಾತ್ರಕ್ಕೆ ಉತ್ತಮವಾಗಿತ್ತು. ಪ್ರವೀಣ ಬುಕ್ಕಿಗುಡ್ಡೆ ಸಂಗೀತ ಹಿತಮಿತವಾಗಿತ್ತು. ಹಾಡುಗಾರಿಕೆ ದಿವಾಕರ ಕಟೀಲು, ಪ್ರಸಾದನ ಜಗದೀಶ ಚೆನ್ನಂಗಡಿ, ಬೆಳಕು ಪ್ರವೀಣ ಜಿ. ಕೊಡವೂರು, ಹಾಡು ಮತ್ತು ಬೆಳಕು ನಾಟಕ ಹೈಲೈಟ್ ಆಗುವ ಅಂಶ. ನಾಟಕ ಗೆಲ್ಲುವಲ್ಲಿ ಈ ಎಲ್ಲರ ಪಾತ್ರವೂ ಮುಖ್ಯವಾಗಿದೆ.
ಜಯರಾಂ ನೀಲಾವರ