ರಾಮನಗರ: ನಗರದ ವಿನಾಯಕನಗರದಲ್ಲಿ ಒಳಚರಂಡಿ ಮಂಡಳಿ ಮತ್ತು ನಗರಸಭೆ ಒಳ ಚರಂಡಿ ವ್ಯವಸ್ಥೆಗೆಂದು ರಸ್ತೆ, ಗಲ್ಲಿಗಳನ್ನು ಅಗೆದು ಹಾಳುಗೆಡವಲಾಗಿದೆ. ಚರಂಡಿ ವ್ಯವಸ್ಥೆಯೂ ಹಾಳಾಗಿದೆ. 6 ತಿಂಗಳಾದರೂ ಸರಿಪಡಿಸಿಲ್ಲ ಎಂದು ಈ ಭಾಗದ ನಾಗರಿಕರು ಹರಿಹಾಯ್ದಿದ್ದಾರೆ.
ಒಳಚರಂಡಿ ಕಾಮಗಾರಿಗೆ ಸಿಬ್ಬಂದಿ ರಸ್ತೆ, ಗಲ್ಲಿಗಳನ್ನು ಅಗೆದಿದ್ದರು. ಇದೇ ವೇಳೆ ಇಲ್ಲಿನ ಚರಂಡಿ ವ್ಯವಸ್ಥೆಗೆ ಧಕ್ಕೆಯಾಗಿತ್ತು. ಕೆಲವು ಕಡೆ ಚರಂಡಿ ಮೇಲೆ ಹಾಸಿರುವ ಸ್ಲಾಬ್‌ಗಳು ಒಡೆದು ಚರಂಡಿಯೊಳಗೆ ಕುಸಿದಿದೆ. ಚರಂಡಿಯೊಳಗೆ ಕಸ, ಕಡ್ಡಿಯೂ ಸೇರಿಕೊಂಡಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವೊಮ್ಮೆ ಚರಂಡಿ ನೀರು ಉಕ್ಕಿ ರಸ್ತೆಯಲ್ಲೆಲ್ಲ ಹರಿದು ಗಬ್ಬು ವಾಸನೆಗೆ ಕಾರಣವಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ನಗರಸಭೆಯ ಕೆಲವು ಸಿಬ್ಬಂದಿ ಬಂದು ಚರಂಡಿಯಲ್ಲಿದ್ದ ಮಣ್ಣು, ಕಲ್ಲು, ಕಸ, ಕಡ್ಡಿಯನ್ನು ಹೊರತೆಗೆದು ಚರಂಡಿಯ ಪಕ್ಕದಲ್ಲೇ ಸುರಿದು ಹೋದರು. ಇತ್ತೀಚೆಗೆ ಆಗಿದ್ದರಿಂದ ಮಳೆ ಕಾರಣ ಒಂದಿಷ್ಟು ಮಣ್ಣು, ಕಲ್ಲು ಮತ್ತೆ ಚರಂಡಿ ಸೇರಿದೆ, ಉಳಿದಿದ್ದು ರಸ್ತೆಯೆಲ್ಲ ಹರಡಿದೆ. ಇದೀಗ ಈ ರಸ್ತೆ, ಗಲ್ಲಿಗಳಲ್ಲಿ ಓಡಾಡುವುದಕ್ಕೂ ಕಷ್ಟವಾಗುತ್ತಿದೆ ಎಂದು ನಾಗರೀಕರು ತಿಳಿಸಿದ್ದಾರೆ.
ವಿನಾಯಕನಗರದ 3ನೇ ಕ್ರಾಸ್‌ನಲ್ಲಿರುವ ಮೂಡಲ ಮನೆ ಪಕ್ಕದ ಗಲ್ಲಿಯ ಬಳಿ ಬಂದರೆ ಸಾಕು ಮೂಗು ಮುಚ್ಚಿಕೊಂಡು ಓಡಾಡಬೇಕು. ಕಾರಣ ಇಲ್ಲಿನ ಚರಂಡಿ ಗಬ್ಬು ನಾರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ವಿನಾಯಕ ನಗರದ ದುಃಸ್ಥಿತಿಯ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನಗರಸಭೆಯ ಮಾಜಿ ಸದಸ್ಯರ ಮನೆ ಕೂಡ ಇಲ್ಲೇ ಇದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ನಗರಸಭೆಗೆ ಅರ್ಜಿ, ಫೋಟೋ ಸಾಕ್ಷಿ ಕೊಟ್ಟಿದ್ದರೂ ಪ್ರಯೋಜನ ಆಗಿಲ್ಲ ಎಂದು ನಿವಾಸಿ ತುಳಸಿ ಎಂಬುವವರು ದೂರಿದ್ದಾರೆ. ನಗರಸಭೆ ಅಧಿಕಾರಿಗಳದ್ದು ಮತ್ತದೇ ನಿರ್ಲಕ್ಷ ನಿತ್ಯವೂ ನರಕ ಅನುಭವಿಸುತ್ತಿರೋದು ಮಾತ್ರ ಜನಸಾಮಾನ್ಯರು.ಇದೆಲ್ಲ ಯಾವಾಗ ಸರಿಹೋಗುತ್ತೋ ಆ ರಾಮನೇ ಬಲ್ಲ ಎಂದು ವಿನಾಯಕ ನಗರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.