Advertisement

ರಸ್ತೆ ಮೇಲೆ ಮಳೆ ನೀರು ಜತೆ ಪಿಟ್‌ ನೀರು! ನಾಗರಿಕ ಸಮಸ್ಯೆ ಅಳಲು

12:28 PM Aug 22, 2022 | Team Udayavani |

ಓಂತಿಬೆಟ್ಟು: ಪಿಟ್‌ ನೀರು ರಸ್ತೆ ಮೇಲೆ

Advertisement

ಮಣಿಪಾಲ: ಓಂತಿಬೆಟ್ಟು ಪೆರ್ಣಂಕಿಲ ರಸ್ತೆಯ ಸರ್ಕಲ್‌ ನಿಂದ 500 ಮೀಟರ್‌ವರೆಗೆ ಎರಡು ಬದಿಯಲ್ಲಿ ಚರಂಡಿ ಇಲ್ಲದೆ ಬಹುಮಹಡಿ ಕಟ್ಟಡಗಳ ಪಿಟ್‌ನ ನೀರು ರಸ್ತೆಯಲ್ಲಿ ಹರಿಯುತ್ತಿದೆ. ದುರ್ವಾಸನೆಯಿಂದ ಕೂಡಿದ ನೀರು ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ. ಹಲವಾರು ವರ್ಷಗಳಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಅಲ್ಲದೆ ಪರಿಸರದಲ್ಲಿ ರೋಗಭೀತಿಗೂ ಇದು ಕಾರಣವಾಗಿದೆ. ಮಳೆ ನೀರು ಜತೆಗೆ ಪಿಟ್‌ನ ನೀರು ಮಿಶ್ರಣವಾಗಿ. ಇದರ ಪರಿಣಾಮ ಸಮೀಪದ ಸರಕಾರಿ ಬಾವಿ ಸಹಿತ ಒಂದು ಮನೆಯ ಬಾವಿ ಕಲುಷಿತಗೊಂಡಿದೆ. ಅನೇಕ ಮನೆಗಳ ಬಾವಿಗಳು ಇದರಿಂದ ಕಲುಷಿತಗೊಳ್ಳುವ ಸಾಧ್ಯತೆ ಇದ್ದು,ಗ್ರಾ. ಪಂ. ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಸ್ಥಳೀಯರಾದ ಎಚ್‌. ಎನ್‌. ಶೇರಿಗಾರ್‌ ಮನವಿ ಮಾಡಿದ್ದಾರೆ.

ನೇತಾಜಿನಗರ- ಸಿಟಿ ಬಸ್‌ ನಿಲ್ದಾಣ ಸಂಪರ್ಕ ರಸ್ತೆ

ಉಡುಪಿ: ಶಿರಿಬೀಡು, ನೇತಾಜಿನಗರ- ಸಿಟಿ ಬಸ್ಸು ನಿಲ್ದಾಣ ಸಂಪರ್ಕಿಸುವ ರಸ್ತೆ ಶಿಥಿಲವಾಗಿದ್ದು, ಸುತ್ತಮುತ್ತಲಿನ ಸಾವಿರಕ್ಕೂ ಅಧಿಕ ಮನೆಗಳ ನಾಗರಿಕರ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ, ಗುಂಡಿಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಸಂಚಾರ ಸವಾಲಿನದ್ದಾಗಿದೆ. ಮಳೆ ಸುರಿಯುತ್ತಿರುವ ಪರಿಣಾಮ ಸಾರ್ವಜನಿಕರು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಒಂದೆಡೇ ಕೆಸರು ನೀರು, ಗುಂಡಿಗಳಿಂದ ಜನರು ಓಡಾಡಲು ಸಮಸ್ಯೆಯಾಗಿದ್ದು, ರಾತ್ರಿವೇಳೆ ದ್ವಿಚಕ್ರ ವಾಹನ ಸವಾರರು ಜೀವ ಭಯದಿಂದಲೇ ಸಂಚರಿಸಬೇಕಿದೆ. ಈ ಮಾರ್ಗದಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು ನಿತ್ಯ ಸಂಚರಿಸುತ್ತಾರೆ. ಮಳೆಗಾಲದಲ್ಲಿ ಹೊಂಡ, ಗುಂಡಿಗಳಿಂದ ಕೂಡಿದ ಕೆಸರು ನೀರಿನಿಂದ ಕಿರಿಕಿರಿ ಅನುಭವಿಸುವಂತಾಗಿದೆ ನಗರಸಭೆ ಈ ಬಗ್ಗೆ ಪರಿಶೀಲಿಸಿ ರಸ್ತೆ ಸರಿಪಡಿಸಲು ಸ್ಥಳೀಯರಾದ ದಿನೇಶ್‌ ವಿನಂತಿಸಿದ್ದಾರೆ.

Advertisement

ಶಿರಿಬೀಡು ಪ್ರ ಗತಿನಗರ-ಕಾಡಬೆಟ್ಟು ರಸ್ತೆ

ಉಡುಪಿ: ಶಿರಿಬೀಡು ವಾರ್ಡ್‌, ಪ್ರಗತಿ ನಗರದ ಕೊಯಿಲೋ ರಸ್ತೆ ದುಃಸ್ಥಿತಿಯಿಂದಾಗಿ ಇಲ್ಲಿನ ಸಾರ್ವ ಜನಿಕರಿಗೆ ಸಂಚಾರ ಸಂಕಷ್ಟದಿಂದ ಕೂಡಿದೆ. ಮಳೆ ನೀರು ಸಹಿತಿ ಮನೆಗಳ ಕಾರು ತೊಳೆದ ನೀರು, ಮನೆಗಳ ತ್ಯಾಜ್ಯ ರಸ್ತೆಯ ಮೇಲೆ ಹರಿಯುತ್ತದೆ. ಈ ರಸ್ತೆ ಶಿರಿಬೀಡು-ಕಾಡಬೆಟ್ಟು ಸಂಪರ್ಕಿಸುವ ರಸ್ತೆಯಾಗಿದೆ. ನಿತ್ಯ ಸಾಕಷ್ಟು ಮಂದಿ ಈ ರಸ್ತೆಯಲ್ಲಿ ಓಡಾಡುತ್ತಾರೆ. ಇನ್ನು ಪ್ರಗತಿನಗರ ಮತ್ತು ಬಸ್‌ ಸ್ಟಾಂಡ್‌ ಸಂಪರ್ಕ ರಸ್ತೆಯೂ ಅವ್ಯವಸ್ಥೆಯ ಆಗರವಾಗಿದೆ. ಮೊದಲೇ ರಸ್ತೆಗಳು ಇಕ್ಕಟ್ಟಾಗಿದ್ದು, ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ವಿಷ ಜಂತುಗಳು ಸೇರಿಕೊಂಡು ಸಾರ್ವಜನಿಕರಿಗೆ ಅಪಾಯಕಾರಿಯಾಗುವ ಸಾಧ್ಯತೆಯೂ ಇದೆ. ಪಾದಚಾರಿಗಳು ಆತಂಕದಿಂದಲೇ ಓಡಾಡಬೇಕಿದೆ. ವ್ಯವಸ್ಥಿತ ರಸ್ತೆ ಜತೆಗೆ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸಿಕೊಡುವಂತೆ ಸ್ಥಳೀಯರಾದ ಅಮಿತ್‌ ಕುಮಾರ್‌ ಮತ್ತು ನಾಗರಿಕರು ನಗರಸಭೆಗೆ ಮನವಿ ಮಾಡಿದ್ದಾರೆ.

ನೋಟಿಸ್‌ ನೀಡಲಾಗಿದೆ

ಈ ಹಿಂದೆ ನಾಗರಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಓಂತಿಬೆಟ್ಟು ಪೆರ್ಣಂಕಿಲ ರಸ್ತೆಯ ಮೇಲೆ ಪಿಟ್‌ ನೀರು ಹರಿಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದ ಕಟ್ಟಡದವರಿಗೆ ನೋಟಿಸ್‌ ಕೊಟ್ಟು ಎಚ್ಚರಿಸಲಾಗಿತ್ತು. ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಓಂತಿಬೆಟ್ಟು ಗ್ರಾ. ಪಂ.ನ ಪಿಡಿಒ ಉಮೇಶ್‌ ನಾಯ್ಕ ತಿಳಿಸಿದ್ದಾರೆ.

ಟೆಂಡರ್‌ ಪೂರ್ಣ: ಪ್ರಗತಿ ನಗರ ವ್ಯಾಪ್ತಿಯಲ್ಲಿ 15 ಲಕ್ಷ ರೂ., ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ಕಾಮಗಾರಿ ನಡೆಸಲು ಟೆಂಡರ್‌ ಪೂರ್ಣಗೊಂಡಿದೆ. ಮಳೆ ಮುಗಿದ ಕೂಡಲೇ ಕೆಲಸ ಆರಂಭಗೊಳ್ಳಲಿದೆ. – ಟಿ. ಜಿ. ಹೆಗ್ಡೆ, ನಗರಸಭೆ ಸದಸ್ಯರು

ವ್ಯವಸ್ಥಿತ ರಸ್ತೆ ನಿರ್ಮಾಣ: ನೇತಾಜಿನಗರ- ಸಿಟಿ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆಯು ಯುಜಿಡಿ ಕೆಲಸದಿಂದಾಗಿ ಕೆಲವೆಡೆ ರಸ್ತೆ ಹದಗೆಟ್ಟಿದೆ. ತಾತ್ಕಾಲಿಕವಾಗಿ ವೆಟ್‌ಮಿಕ್ಸ್‌ ಹಾಕಿ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದೇವೆ. ನಗರೋತ್ಥಾನ ಯೋಜನೆಯಡಿಯಲ್ಲಿ 30 ಲಕ್ಷ ರೂ. ಅನುದಾನದಲ್ಲಿ ವ್ಯವಸ್ಥಿತ ರಸ್ತೆ ನಿರ್ಮಾಣಗೊಳ್ಳಲಿದೆ. – ಸವಿತಾ ಹರೀಶ್‌ ರಾಮ್‌, ನಗರಸಭೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next