Advertisement

ಕುಂದಾಪುರ: ಫ್ಲೈ ಓವರ್‌ ಅಡಿಯಲ್ಲಿ ಕೊಳಚೆ ನೀರು

02:05 AM Oct 30, 2018 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ಶೆರೋನ್‌, ಶೆಲೊಮ್‌ ಹೋಟೆಲ್‌ ಎದುರು ಫ್ಲೈ ಓವರ್‌ ಅಡಿ ಈಗ ರೋಗ ರುಜಿನಗಳ ಉತ್ಪಾದನಾ ತಾಣವಾಗಿದೆ. ಕೊಳಚೆ ನೀರು ಸಂಗ್ರಹಾಗಾರವಾಗಿದೆ. ಫ್ಲೈ ಓವರ್‌ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವವರು ಒಂದಷ್ಟು ಸಾಮಗ್ರಿಗಳನ್ನು ರಾಶಿ ಹಾಕಿದ್ದಾರೆ. ಮಳೆಗಾಲದಲ್ಲಿ ಕೂಡ ಇಲ್ಲಿ ನೀರು ಸಂಗ್ರಹ ಆಗುತ್ತಿತ್ತು. ಈಗ ತ್ಯಾಜ್ಯ ನೀರು ಸಂಗ್ರಹವಾಗತೊಡಗಿದೆ. ಸಂಗ್ರಹವಾದ ತ್ಯಾಜ್ಯ ನೀರು ಹೊರಹೋಗದಂತೆ ಸರ್ವೀಸ್‌ ರಸ್ತೆ ಕಾಮಗಾರಿ ಮಾಡಲಾಗಿದೆ. 

Advertisement

ಚರಂಡಿ ನೀರು
ಚರಂಡಿಗೆ ಹರಿಯ ಬಿಡುವ ನೀರಿನ ಪೈಪ್‌ಲೈನ್‌ ಒಡೆದು ಇಲ್ಲಿ ತ್ಯಾಜ್ಯ ನೀರು ಸಂಗ್ರಹವಾಗುತ್ತದೆ. ಇದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿದ್ದು ಹುಳ ಹುಪ್ಪಟೆಗಳು ರಾಶಿ ರಾಶಿಯಾಗಿವೆ. ಇಡೀ ಪರಿಸರವೇ ದುರ್ನಾತ ಬೀರುತ್ತಿದೆ. ಬೇರೆ ಬೇರೆ ಕಡೆಯಿಂದ ಆಗಮಿಸಿದ ಕಾರ್ಮಿಕರು ಕೂಡ ಇಲ್ಲಿದ್ದು ಇಂತಹ ವಾತಾವರಣ ಇದ್ದರೆ ಸಾಂಕ್ರಾಮಿಕ ಖಾಯಿಲೆ ಹರಡುವ ಆತಂಕ ನಾಗರಿಕರನ್ನು ಕಾಡಿದೆ.

ಪುರಸಭೆಯ ಚರಂಡಿ ಕಾಮಗಾರಿ ನಡೆಯುತ್ತಿದೆ. ಒಂದೆಡೆ ಕೆಎಸ್‌ಆರ್‌ಟಿಸಿ ಬಳಿಯಿಂದ ಶಾಸ್ತ್ರಿ ಸರ್ಕಲ್‌ವರೆಗೆ, ಬಸ್ರೂರು ಮೂರುಕೈ ಕಡೆಗೆ, ಇನ್ನೊಂದೆಡೆ ಬೊಬ್ಬರ್ಯನಕಟ್ಟೆ ಬಳಿ ಕಾಮಗಾರಿ ನಡೆಯುತ್ತಿದೆ. ಫ್ಲೈ ಓವರ್‌ ಕೆಳಗೆ ಚರಂಡಿ ಪೈಪ್‌ಗೆ ಸಮಸ್ಯೆಯಾದ ಕಾರಣ ನೀರು ನಿಂತಿದ್ದು ಇದನ್ನು ಜೆಕೆ ಟವರ್‌ ಬಳಿ ಸಕ್ಕಿಂಗ್‌ ಯಂತ್ರ ಮೂಲಕ ಪಂಪ್‌ ಮಾಡಿ ತ್ಯಾಜ್ಯ ನೀರು ತೆಗೆಯಲಾಗುತ್ತಿದೆ. ಹಾಗಿದ್ದರೂ ಫ್ಲೈ ಓವರ್‌ ಅಡಿಯಲ್ಲಿ ಕೊಳಚೆ ನೀರಿನ ಸಂಗ್ರಹ ಕಡಿಮೆಯಾಗಿಲ್ಲ.

ಕ್ರಮ ಕೈಗೊಳ್ಳಲಾಗುವುದು
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಫ್ಲೈಓವರ್‌ ಅಡಿಯಲ್ಲಿ ನೀರು ನಿಂತ ಕುರಿತು ದೂರು ಬಂದಿರಲಿಲ್ಲ. ತತ್‌ ಕ್ಷಣ ವಿಲೇವಾರಿಗೆ ಕ್ರಮವಹಿಸಲಾಗುವುದು. ರೋಗ ಹರಡದಂತೆ ರಾಸಾಯನಿಕ ಹಾಕಲಾಗುವುದು.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ

ನಿಲ್ಲಲು ಅಸಾಧ್ಯ
ಈ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಕೂಡಾ ನಿಲ್ಲಲು ಅಸಾಧ್ಯವಾಗುವಷ್ಟು ಕ್ರಿಮಿಗಳು ಹಾರಾಡುತ್ತಿರುವುದು ಕಾಣುತ್ತಿದೆ. ವಾಸನೆ ಬರುತ್ತಿದೆ. ರೋಗ ಹರಡಲು ಬೇರೆ ಕೇಂದ್ರವೇ ಬೇಡ.
– ರಾಘವೇಂದ್ರ ಮದ್ದುಗುಡ್ಡೆ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next