Advertisement

ಬಾವಿಗೆ ಹರಿಯುವ ಒಳಚರಂಡಿ ನೀರು: ಸಂಕಷ್ಟದಲ್ಲಿ ಸ್ಥಳೀಯರು

11:04 AM Jun 02, 2019 | Sriram |

ಮಹಾನಗರ: ಒಳಚರಂಡಿ ನೀರು ನೇರವಾಗಿ ಬಾವಿಗಳಿಗೆ ಒಸರುತ್ತಿರುವ ಕಾರಣ ನಗರದ ಕೆಪಿಟಿ ಉದಯನಗರ ಪ್ರದೇಶದಲ್ಲಿ ಈಗ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದ್ದು, ನೀರಿನ ಸಮಸ್ಯೆ ಉಲ್ಭಣಿಸಿದೆ.

Advertisement

ಕೆಪಿಟಿ ಉದಯನಗರ ಬಳಿ ಸುತ್ತಲಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸುವ ಎರಡು ಬಾವಿಗಳಿಗೆ ಮೂರು ವರ್ಷಗಳಿಂದ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಈ ಬಾವಿಯಲ್ಲಿ ನೀರಿದ್ದರೂ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಪಾಲಿಕೆ ಪೂರೈಸುವ ನೀರೂ ಲಭ್ಯವಾಗದೇ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ.

ಈ ಎರಡೂ ಬಾವಿಯಲ್ಲಿ ಸಮೃದ್ಧವಾಗಿ ನೀರಿನ ಒರತೆಯಿದೆ. ಕಡು ಬೇಸಗೆಯಲ್ಲೂ ಇಲ್ಲಿ ನೀರು ಬತ್ತಿದ ಉದಾಹರಣೆಯಿಲ್ಲ. ಈಗಲೂ ಅವುಗಳಲ್ಲಿ ಮೂರು ಅಡಿಗಿಂತಲೂ ಹೆಚ್ಚು ನೀರಿದೆ. ಸ್ಥಳೀಯರು ಕುಡಿಯಲು, ಬಟ್ಟೆ ಒಗೆಯಲು ಈ ಬಾವಿಗಳ ನೀರು ಉಪಯೋಗಿಸುತ್ತಿದ್ದರು. ಆದರೆ ಪಕ್ಕದಲ್ಲೇ ಇರುವ ಕಲ್ಲಿನಿಂದ ನಿರ್ಮಿಸಿದ ಒಳಚರಂಡಿಯ ತ್ಯಾಜ್ಯ ನೀರು ಸೋರಿಕೆಯಾಗಿ ಬಾವಿಗಳನ್ನು ಸೇರಲಾರಂಭಿಸಿದಾಗ ಅವುಗಳ ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಮೇಲ್ಭಾಗದಲ್ಲಿ ಇರುವ ಕೆರೆಯ ನೀರು ಬಾವಿಯ ಪಕ್ಕದಲ್ಲಿ ಹರಿಯುತ್ತಿತ್ತು. ಈಗ ಚರಂಡಿ ತ್ಯಾಜ್ಯ ಹರಿಯುತ್ತಿದೆ. ಇದರಿಂದ ಸೊಳ್ಳೆ ಕಾಟವೂ ಹೆಚ್ಚಾಗಿದೆ.

ಸ್ಪಂದಿಸದ ಆಡಳಿತ
ಜೀವಜಲ ಮಲಿನಗೊಂಡ ಕಾರಣ ಸ್ಥಳೀಯರು ಎರಡೂ ಬಾವಿಗಳ ನೀರನ್ನು ಖಾಲಿ ಮಾಡಿ, ಶುದ್ಧಜಲ ದೊರೆಯುತ್ತದೆಯೋ ಎಂದು ಪ್ರಯತ್ನ ನಡೆಸಿದ್ದಾರೆ. ಆದರೆ ತ್ಯಾಜ್ಯ ನೀರು ನಿರಂತರ ಸೋರಿಕೆಯಿಂದ ಈ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ತ್ಯಾಜ್ಯ ನೀರು ಸೋರಿಕೆ ವಿಷಯವನ್ನು ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನ ಆಗಿಲ್ಲ. ಒಂದು ಬಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೋರಿಕೆಯಾಗುವ ಗಟಾರ ಪರಿಶೀಲಿಸಿ ತೆರಳಿದವರು ಮತ್ತೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಕೆಯಿಂದ ನೀರು ಪೂರೈಕೆಗೆ ರೇಷನಿಂಗ್‌ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ಇಲ್ಲಿನ ಜನರಿಗೆ ನೀರಿನ ಕೊರತೆ ಉಂಟಾಗಿದೆ. ಬಾವಿಗಳ ನೀರು ಬಳಕೆಗೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಮನಪಾ ಅಧಿಕಾರಿಗಳು ಒಳಚರಂಡಿ ಸುವ್ಯವಸ್ಥಿತಗೊಳಿಸಿ, ತ್ಯಾಜ್ಯ ನೀರು ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು, ಬಾವಿ ನೀರು ಖಾಲಿ ಮಾಡಿ, ಸ್ವಚ್ಛಗೊಳಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ.

ತ್ಯಾಜ್ಯ ನೀರು ಒಸರದಂತೆ ಮಾಡಿ

ನಮ್ಮ ಮನೆ ಪಕ್ಕದ ಬಾವಿಯಲ್ಲಿ ನಾನು ಸಣ್ಣವನಿದ್ದಾಗಿನಿಂದಲೇ ಸಮೃದ್ಧವಾದ ನೀರಿನ ಒರತೆ ಇದೆ. ಅಲ್ಲಿ ಗಟಾರ ನಿರ್ಮಾಣವಾದ ಬಳಿಕ ಸಮಸ್ಯೆ ಕಾಣಿಸಿಕೊಂಡಿದೆ. ಒಳಚರಂಡಿ ನೀರು ಬಾವಿಗಳಿಗೆ ಸೇರ್ಪಡೆಗೊಂಡು ಬಾವಿ ನೀರು ಬಳಸದಂತಾಗಿದೆ. ಮನಪಾ ಅಧಿಕಾರಿಗಳು ಒಳಚರಂಡಿಗೆ ಕಾಂಕ್ರೀಟ್ ಹಾಕುವ ಮೂಲಕ ನೀರು ಒಸರದಂತೆ ಮಾಡಬೇಕು.
– ಮನೋಹರ ದೇವಾಡಿಗ,ಸ್ಥಳೀಯರು

ಮತ್ತೆ ಸಮಸ್ಯೆ ಆರಂಭ

ಎರಡು ವರ್ಷಗಳ ಹಿಂದೆ ಈ ಬಾವಿಗಳಿಗೆ ಕೊಳಚೆ ನೀರು ಸೇರುತ್ತಿತ್ತು. ದೂರು ಬಂದ ಹಿನ್ನಲೆಯಲ್ಲಿ ಕಾಮಗಾರಿ ನಡೆಸಲಾಗಿತ್ತು. ಮತ್ತೆ ಸಮಸ್ಯೆ ಎದುರಾಗಿರಲಿಲ್ಲ. ಇದೀಗ ಮತ್ತೆ ಸಮಸ್ಯೆ ಆರಂಭವಾಗಿದೆ.
– ಮಹಾಬಲ ಮಾರ್ಲ,

ಮಾಜಿ ಕಾರ್ಪೊರೇಟರ್‌

Advertisement

ಗಮನಕ್ಕೆ ತಂದರೆ ಕ್ರಮ

ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಯಾರಾದರೂ ನನ್ನ ಗಮನಕ್ಕೆ ತಂದರೆ ಅಧಿಕಾರಿಗಳಲ್ಲಿ ಸ್ಥಳ ಪರಿಶೀಲನೆ ಮಾಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
– ನಾರಾಯಣಪ್ಪ,

ಪಾಲಿಕೆ ಪ್ರಭಾರ ಆಯುಕ್ತರು
Advertisement

Udayavani is now on Telegram. Click here to join our channel and stay updated with the latest news.

Next