Advertisement
ಸಮಸ್ಯೆಗಳ ಆಗರಒಂದೆಡೆ ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಫ್ಲೈಓವರ್ ಕಾಮಗಾರಿ. ಇನ್ನೊಂದೆಡೆ ಇಕ್ಕಟ್ಟಾದ ಹೆದ್ದಾರಿ ರಸ್ತೆ, ತೊಕ್ಕೊಟ್ಟು ಜಂಕ್ಷನ್‌ನಿಂದ ಕಾಸರಗೋಡು ಕಡೆ ಸುಮಾರು 200ಮೀ. ಸಂಚರಿಸುವುದೇ ಕಷ್ಟಕರವಾಗಿದೆ. ತೊಕ್ಕೊಟ್ಟಿನಿಂದ ಎರಡು ಆಸ್ಪತ್ರೆ ಸಹಿತ ಮೆಡಿಕಲ್, ಬ್ಯಾಂಕ್ ಮತ್ತು ಭಟ್ನಗರ ಕಡೆ ಸಂಚರಿಸುವ ಪಾದಚಾರಿಗಳು ಈ ರಸ್ತೆ ಬದಿಯಲ್ಲಿ ಸಂಚರಿಸಬೇಕಾದರೆ ಪ್ರಾಣ ಕೈಯಲ್ಲಿಟ್ಟುಕೊಡು ಸಾಗುತ್ತಾರೆ. ಚರಂಡಿಯ ಮೇಲೆ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ವಾಹನಗಳು ಸಂಚರಿಸಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಹೆದ್ದಾರಿ ಕಾಮಗಾರಿ ಮಾಡುವ ಸಂಸ್ಥೆಯಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಗಮನಹರಿಸುತ್ತಿಲ್ಲ.
ರಸ್ತೆ ಸುರಕ್ಷೆ ಇಲ್ಲ
ಕಿರಿದಾದ ಹೆದ್ದಾರಿ ಮತ್ತು ಚರಂಡಿಯ ಸ್ಲ್ಯಾಬ್ ಒಂದೇ ಮಟ್ಟದಲ್ಲಿದ್ದು, ಘನ ವಾಹನಗಳನ್ನು ದ್ವಿಚಕ್ರ ವಾಹನ ಸವಾರರು ಹಿಂದಿಕ್ಕಲು ಹೋಗಿ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡ ಅನೇಕ ಘಟನೆಗಳು ಇಲ್ಲಿ ನಡೆದಿವೆ. ರಾತ್ರಿ ವೇಳೆ ಪಾದಚಾರಿಗಳು ಈ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡರೂ ಈ ಚರಂಡಿಯ ಕಾಂಕ್ರೀಟ್ ದುರಸ್ತಿಗೆ ಯಾರೂ ಮುಂದಾಗಿಲ್ಲ. ಸರಿಯಾದ ಫುಟ್ ಪಾತ್ ಇಲ್ಲ
ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವಲ್ಲಿ ಚರಂಡಿಯನ್ನು ಮುಚ್ಚದೇ ಇರುವು ದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಸ್ಥಿತಿಯಿದೆ. ಮಂಗಳೂರು ವಿವಿ ಕಡೆಯ ರಸ್ತೆಯಿಂದ ಮಂಗಳೂರು ಮತ್ತು ಕೇರಳ ಕಡೆ ಸಂಚರಿಸುವ ವಾಹನಗಳು ಮತ್ತು ಮಂಗಳೂರಿನಿಂದ ಕೇರಳ, ಉಳ್ಳಾಲ ಕಡೆ ಸಂಪರ್ಕಿಸುವ ವಾಹನಗಳು ಈ ರಸ್ತೆಯಲ್ಲಿ ವೇಗವಾಗಿ ಬರುವುದರಿಂದ ಪಾದಚಾರಿಗಳು ಇದೇ ರಸ್ತೆಯಲ್ಲಿ ತೊಕ್ಕೊಟ್ಟು ಜಂಕ್ಷನ್ ದಾಟುವುದು ಅಪಾಯಕಾರಿಯಾಗಿದೆ. ಚರಂಡಿಯನ್ನು ಮುಚ್ಚಿ ಫುಟ್‌ಪಾತ್ ನಿರ್ಮಾಣ ಅಥವಾ ಫುಟ್‌ಪಾತ್‌ನಲ್ಲಿ ನಿರ್ಮಾಣಗೊಂಡಿರುವ ಅಂಗಡಿಗಳನ್ನು ಬದಿಗೆ ಸರಿಸಿದರೆ ಪ್ರಯಾಣಿಕರು ಸಂಚರಿಸಲು ಸಹಕಾರಿಯಾಗಲಿದೆ.
Related Articles
ಉಳ್ಳಾಲ ನಗರಸಭಾ ವ್ಯಾಪ್ತಿಗೆ ಬರುವ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸಮಸ್ಯೆ ಇದ್ದರೂ ಸ್ಥಳಿಯಾಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ದುರಸ್ತಿ ಮಾಡಲು ಸಂಬಂಧಿತ ಇಲಾಖೆಗೆ ಸೂಚಿಸಿಲ್ಲ. ಇನ್ನೊಂದೆಡೆ ಜಿಲ್ಲಾಡಳಿತವೂ ಹೆದ್ದಾರಿ ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ.
Advertisement
ಅವೈಜ್ಞಾನಿಕ ಚರಂಡಿಎಷ್ಟೋ ಬಾರಿ ಚರಂಡಿಗೆ ಬಿದ್ದು ಗಾಯಗೊಂಡ ಪಾದಚಾರಿಗಳನ್ನು ಉಪಚರಿಸಿದ್ದೇವೆ. ಹಲವು ಬಾರಿ ದ್ವಿಚಕ್ರ, ತ್ರಿಚಕ್ರ ವಾಹನ ಚಾಲಕರು ಈ ಗುಂಡಿಗೆ ಬಿದ್ದು ವಾಹನಗಳನ್ನು ತೆಗೆಯಲು ಸಾಧ್ಯವಾಗದೆ ಕಷ್ಟಪಟ್ಟಿದ್ದಾರೆ. ಚರಂಡಿ ಅವೈಜ್ಞಾನಿಕವಾಗಿದ್ದು, ರಸ್ತೆ ವಿಸ್ತರಿಸಿ ಚರಂಡಿ ಪುನರ್ ನಿರ್ಮಾಣ ಮಾಡಿದರೆ ಉತ್ತಮ.
– ಮಹಮ್ಮದ್ ಅಬ್ಬುಸಾಲಿ, ಸ್ಥಳೀಯ ವ್ಯಾಪಾರಸ್ಥರು ಪರ್ಯಾಯ ವ್ಯವಸ್ಥೆಯಿಲ್ಲ
ತೊಕ್ಕೊಟ್ಟು ಜಂಕ್ಷನ್ ನಿಂದ ಭಟ್ನಗರ ಕಡೆ ಸಂಚರಿಸಲು ಪರ್ಯಾಯ ವ್ಯವಸ್ಥೆ ಇಲ್ಲ. ಜಂಕ್ಷನ್‌ನಲ್ಲಿ ಸಂಚರಿಸಬೇಕಾದರೆ ಪಾದಚಾರಿಗಳು ರಸ್ತೆಯನ್ನೇ ಆಶ್ರಯಿಸುವ ಸ್ಥಿತಿಯಿದೆ. ವೀರಮಾರುತಿ ವ್ಯಾಯಾಮ ಶಾಲೆ ಯವರೆಗೆ ಸರ್ವೀಸ್ ರಸ್ತೆಯೊಂದಿಗೆ ಚರಂಡಿ, ಫುಟ್‌ಪಾತ್ ನಿರ್ಮಾಣ ಮಾಡಿದರೆ ಉತ್ತಮ.
– ಸಂದೀಪ್, ಟಿ.ಸಿ. ರೋಡ್ ಸುಗಮ ಸಂಚಾರಕ್ಕೆ ಕ್ರಮ
ತೊಕ್ಕೊಟ್ಟು ಜಂಕ್ಷನ್ ನಲ್ಲಿ ಚರಂಡಿ ಕಾಂಕ್ರೀಟ್ ಕುಸಿತದ ಬಗ್ಗೆ ಮಾಹಿತಿಯಿಲ್ಲ. ಈ ಕುರಿತು ಕಾಮಗಾರಿ ನಡೆಸುತ್ತಿರುವ ನವಯುಗ್ ಸಂಸ್ಥೆಗೆ ಮಾಹಿತಿ ನೀಡಿ ಅದನ್ನು ಸರಿಪಡಿಸಿ ಪಾದಚಾರಿಗಳು ಮತ್ತು ವಾಹನ ಚಾಲಕರ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
– ವಿಜಯ ಕುಮಾರ್, ಯೋಜನಾ ಅಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ — ವಸಂತ ಕೊಣಾಜೆ