Advertisement

ಚರಂಡಿ, ದಾರಿದೀಪ ಕಾಮಗಾರಿ ಶೀಘ್ರ ನಡೆಸಿ: ಮನವಿ

11:35 PM Jun 19, 2019 | mahesh |

ಉಪ್ಪಿನಂಗಡಿ: ಮಳೆಗಾಲ ಆರಂಭವಾದರೂ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇನ್ನೊಂದೆಡೆ ದಾರಿ ದೀಪಗಳು ಉರಿಯುತ್ತಿಲ್ಲ. 10 ದಿನಗಳೊಳಗೆ ಪಂಚಾಯತ್‌ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪ ಅಳವಡಿಕೆ ಕಾಮಗಾರಿ ಆರಂಭಿಸದಿದ್ದಲ್ಲಿ ಜೂ. 27ರಂದು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸುವುದಾಗಿ ನಮ್ಮೂರು- ನೆಕ್ಕಿಲಾಡಿ ಸಂಘಟನೆ ಎಚ್ಚರಿಕೆ ನೀಡಿದೆ.

Advertisement

ಈ ಬಗ್ಗೆ 34ನೇ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‌ ಅವರಿಗೆ ಮನವಿ ನೀಡಿದ ನಮ್ಮೂರು- ನೆಕ್ಕಿಲಾಡಿ ಹಾಗೂ ಗ್ರಾಮಸ್ಥರ ನಿಯೋಗ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವು ಕಡೆ ಚರಂಡಿಗಳು ಗಿಡಗಂಟಿಗಳಿಂದ ಆವರಿಸಿದ್ದು, ಹೂಳು ತುಂಬಿ ಮಳೆ ನೀರು ಹರಿದು ಹೋಗದಂತಾಗಿದೆ. ಇನ್ನು ಕೆಲವು ಕಡೆ ಗ್ರಾ.ಪಂ.ನ ರಸ್ತೆ ಬದಿ ಚರಂಡಿಯೇ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುವಂತಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿದೀಪ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಇಲ್ಲಿನ ಶೇ. 90ರಷ್ಟು ಕಡೆ ದಾರಿ ದೀಪಗಳು ಉರಿಯುತ್ತಿಲ್ಲ. ಹಲವು ಕಡೆ ದಾರಿ ದೀಪಗಳನ್ನೇ ಅಳವಡಿಸಿಲ್ಲ. ಮಳೆಗಾಲ ಆರಂಭವಾಗಿದ್ದು, 34ನೇ ನೆಕ್ಕಿಲಾಡಿ ಕುಮಾರಧಾರಾ ಹಾಗೂ ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ಇದು ನೆರೆಬಾಧಿತ ಪ್ರದೇಶವೂ ಹೌದು. ಆದರೆ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಆಗಬೇಕಾದ ಕೆಲಸ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇನ್ನೂ ಆಗಿಲ್ಲ ಎಂದು ವಿವರಿಸಿತು.

ತತ್‌ಕ್ಷಣವೇ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ, ಸ್ವತ್ಛತೆ ಹಾಗೂ ದಾರಿದೀಪ ಅಳವಡಿಕೆ ಕಾಮಗಾರಿಯನ್ನು ನಡೆಸಬೇಕು. ತಪ್ಪಿದ್ದಲ್ಲಿ ಜೂ. 27ರ ಗುರುವಾರ ಬೆಳಗ್ಗೆ 11ಕ್ಕೆ 34ನೇ ನೆಕ್ಕಿಲಾಡಿ ಗ್ರಾ.ಪಂ. ಮುಂದೆ ಗ್ರಾಮಸ್ಥರ ಒಡಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ನಿಯೋಗದಲ್ಲಿ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್‌ ಯುನಿಕ್‌, ಸಂಘಟನ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಜತೆ ಕಾರ್ಯದರ್ಶಿಗಳಾದ ವಿನೀತ್‌ ಶಗ್ರಿತ್ತಾಯ, ಅಝೀಝ್ ಪಿ.ಟಿ., ಸದಸ್ಯ ಖಲಂದರ್‌ ಶಾಫಿ, ಗ್ರಾಮಸ್ಥರಾದ ಪ್ರಕಾಶ್‌ ಆದರ್ಶನಗರ, ಯು.ಕೆ. ಉಸ್ಮಾನ್‌ ಕೊಡಿಪ್ಪಾಡಿ, ಶರೀಫ್ ಕರ್ವೇಲು, ಸಲೀಂ ಕೊಡಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

“ಫೋನ್‌ ಕಾಲ್‌ ಅಭಿಯಾನ’
ಚರಂಡಿ ಅವ್ಯವಸ್ಥೆ ಹಾಗೂ ದಾರಿದೀಪ ಇಲ್ಲದಿರುವುದರಿಂದ 34ನೇ ನೆಕ್ಕಿಲಾಡಿಯಲ್ಲಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆ ಉದ್ಭವವಾಗಿದೆ. ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳಿ ದಿನ ದೂಡುತ್ತಾರೆಯೇ ಹೊರತು ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮರ್ಪಕ ದಾಖಲೆಯನ್ನಿಟ್ಟು ಅಂಗಡಿ ಲೈಸನ್ಸ್‌ ಮುಂತಾದ ಕೆಲಸ ಗಳಿಗೆ ಸಾರ್ವಜನಿಕರು ಅರ್ಜಿ ನೀಡಿದರೆ ಅದನ್ನು ಪೆಂಡಿಂಗ್‌ ಇಟ್ಟು ಅಲೆದಾಡಿಸುತ್ತಿರುವ ಕುರಿತು ದೂರುಗಳಿವೆ. ಮುಂದಿನ ಹೋರಾಟದ ಭಾಗವಾಗಿ “ಫೋನ್‌ ಕಾಲ್‌ ಅಭಿಯಾನಟ ನಡೆಸಲಾಗುವುದು. ತಾ.ಪಂ. ಇಒ, ಜಿ.ಪಂ. ಸಿಇಒ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರ ದೂರವಾಣಿ ಸಂಖ್ಯೆಗಳಿಗೆ ಗ್ರಾಮಸ್ಥರೆಲ್ಲ ನಿರಂತರ ಕರೆ ಮಾಡುತ್ತೇವೆ. ಕಾಮಗಾರಿ ಆರಂಭಿಸುವ ತನಕ ಈ ಅಭಿಯಾನ ಮುಂದುವರಿಯಲಿದೆ ಎಂದು ನಮ್ಮೂರು- ನೆಕ್ಕಿಲಾಡಿ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹ್ಮಾನ್‌ ಯುನಿಕ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next