ಸುಬ್ರಹ್ಮಣ್ಯ: ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ಕಲ್ಲುಗುಡ್ಡೆ ಪೇಟೆಯಲ್ಲಿ ಮಳೆ ನೀರು ಹರಿದು ಹೋಗಲು ವ್ಯವಸ್ಥಿತ ಚರಂಡಿ ಕಾಮಗಾರಿ ಕೆಲಸ ಆರಂಭಗೊಂಡಿದ್ದು, ಗ್ರಾ.ಪಂ.ನ 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.
ಕಲ್ಲುಗುಡ್ಡೆ ಪೇಟೆಯ ಇಚ್ಲಂಪಾಡಿ ರಸ್ತೆಯಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕೆಲಸ ನಡೆಸಲಾಗಿದೆ. ಇದು ಮಳೆ ನೀರು ಸರಾಗವಾಗಿ ಹರಿದುಹೋಗಲು ಸಹಕಾರಿಯಾಗಲಿದೆ. ರಸ್ತೆ ಬದಿಯ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ದುರಸ್ತಿ ಆಗಬೇಕಿದೆ ಎಲ್ಲ ಚರಂಡಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಕಸ-ಕಡ್ಡಿ ತುಂಬಿಕೊಂಡಿದ್ದು, ಅದರ ತೆರವು ಕಾರ್ಯ ನಡೆಯಬೇಕಾಗಿದೆ. ಇಲ್ಲದೆ ಇದ್ದರೆ ಮಳೆಗಾಲದಲ್ಲಿ ಮಳೆ ನೀರು ಚರಂಡಿ ಬಿಟ್ಟು ರಸ್ತೆಯಲ್ಲಿ ಹರಿಯುವ ಆತಂಕವಿದೆ. ಚರಂಡಿ ಹಳ್ಳಕ್ಕೆ ಸೇರುವಲ್ಲಿಯೂ ನೀರು ಹರಿದು ಹೋಗಲು ವ್ಯವಸ್ಥಿತ ಕೆಲಸ ಆಗಬೇಕಿದೆ.
ಉಳಿದಂತೆ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಚರಂಡಿಗಳ ದುರಸ್ತಿ ಕಾರ್ಯವೂ ಆಗಬೇಕಿದೆ. ಇಲ್ಲದೆ ಇದ್ದರೆ ಕೆಸರು ಮಿಶ್ರಿತ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಲಿದೆ.
ಮಾವಿನಕಟ್ಟೆ-ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ರಸ್ತೆಯ ನೀರಾರಿ ಸಮೀಪ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಕೆಸರಾಗುತ್ತದೆ. ಇಲ್ಲಿನ ಸಮಸ್ಯೆಯನ್ನೂ ಸರಿಪಡಿಸುವಂತೆ ಆಗ್ರಹ ವ್ಯಕ್ತವಾಗಿದೆ.
ಗ್ರಾ.ಪಂ. ವತಿಯಿಂದ ಸೂಕ್ತ ಕ್ರಮ
ಕಲ್ಲುಗುಡ್ಡೆಯ ಇಚ್ಲಂಪಾಡಿ ರಸ್ತೆಯಲ್ಲಿ ಚರಂಡಿ ದುರಸ್ತಿ ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿದೆ. ಮಳೆಗಾಲಕ್ಕೆ ಮೊದಲು ಆಗಬೇಕಿರುವ ಅಗತ್ಯ ಕೆಲಸಗಳನ್ನು ಮಾಡಲು ಗ್ರಾ.ಪಂ. ವತಿಯಿಂದ ಪೂರಕ ಕ್ರಮ ಕೈಗೊಳ್ಳಲಾಗುವುದು.
-ಗಂಗಮ್ಮ, ಅಧ್ಯಕ್ಷರು, ಗ್ರಾ.ಪಂ. ನೂಜಿಬಾಳ್ತಿಲ.