Advertisement

ಒಳಚರಂಡಿ ಯೋಜನೆ ನನೆಗುದಿಗೆ!

01:14 AM Jul 05, 2019 | Team Udayavani |

ಪುತ್ತೂರು: ಬೆಳೆಯುತ್ತಿರುವ ಪುತ್ತೂರಿಗೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ನಗರಸಭೆಯ ಚಿಂತನೆಗೆ ಪ್ರಾಥಮಿಕ ಹಂತದ ಭೂ ಸ್ವಾಧೀನ ಹೊರೆಯೇ ಮುಳ್ಳಾಗಿದೆ.

Advertisement

ಪುತ್ತೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆಯ ಜಾರಿಗೆ ಹಲವು ವರ್ಷಗಳಿಂದ ಪ್ರಯತ್ನ ನಡೆಸಲಾಗಿದೆ. ಮೂರು ವರ್ಷಗಳ ಹಿಂದೆ ಲೈನ್‌ ಸಮೀಕ್ಷೆ ನಡೆಸಿದ ಬಳಿಕ ಸರಕಾರದಿಂದ ತಾತ್ವಿಕ ಒಪ್ಪಿಗೆಯೂ ಸಿಕ್ಕಿತ್ತು. ಎಡಿಬಿ ಯೋಜನೆ ಅಡಿಯಲ್ಲಿ ಮೆಗಾ ಕಾಮಗಾರಿ ನಡೆಸಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಯೋಜನೆಯನ್ನು (ಕೆಯುಐಡಿಎಫ್‌ಸಿ) ಜಾರಿಗೆ ತರುವುದೆಂದು ನಿರ್ಣಯಿಸಿ 125 ಕೋಟಿ ರೂ. ಬೃಹತ್‌ ಯೋಜನೆ ಸಿದ್ಧಪಡಿಸಲಾಗಿತ್ತು. ನಗರದಲ್ಲಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ಸರಕಾರ ಮತ್ತು ಕೆಯುಐಡಿಎಫ್‌ಸಿಗೆ ಸಲ್ಲಿಸಲಾಗಿತ್ತು. ಈ ಯೋಜನೆ ಕೈಜಾರುವ ಹಂತದಲ್ಲಿದೆ.

ಭೂ ಸ್ವಾಧೀನ ಸಮಸ್ಯೆ
ಒಟ್ಟು 30 ವಾರ್ಡ್‌ಗಳಲ್ಲಿ ಹಂಚಿ ಹೋಗಿರುವ ನಗರಸಭೆ 32 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದು, 60 ಸಾವಿರ ಜನಸಂಖ್ಯೆಯಿದೆ. ಒಂದು ಹೆದ್ದಾರಿ, 4 ಮುಖ್ಯ ರಸ್ತೆಗಳು, 15ಕ್ಕೂ ಅಧಿಕ ಉಪ ಮುಖ್ಯ ರಸ್ತೆಗಳು ಹಾಗೂ ನೂರಾರು ಒಳರಸ್ತೆಗಳು ಇವೆ. ಇಡೀ ನಗರವನ್ನು ವ್ಯಾಪಿಸುವ ಸಮಗ್ರ ಒಳಚರಂಡಿ ಕಾಮಗಾರಿಗೆ ನೀಲನಕಾಶೆ ಸಿದ್ಧವಾಗಿತ್ತು. ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಕೆಲಸ ಬಾಕಿಯಿದ್ದರೂ ಮೇಲ್ನೋಟದ ಅಂದಾಜು ಪಟ್ಟಿ ತಯಾರಿಸಲಾಗಿತ್ತು.

ಸಮೀಕ್ಷೆ ಸಂದರ್ಭದಲ್ಲಿ ಕಂಡು ಕೊಂಡಂತೆ ಯೋಜನೆಗಾಗಿ ನಗರ ಸಭಾ ವ್ಯಾಪ್ತಿಯಲ್ಲಿ ಒಟ್ಟು 518 ಜಮೀನು ಗಳಿಂದ ಒಟ್ಟು 39 ಎಕ್ರೆ ಭೂ ಸ್ವಾಧೀನ ಮಾಡಿಕೊಳ್ಳುವ ಅನಿವಾರ್ಯತೆ ಕಂಡು ಬಂದಿತ್ತು. ಹಲವು ಕಡೆಗಳಲ್ಲಿ ತೋಟ ಪ್ರದೇಶ ಸ್ವಾಧೀನ ಮಾಡುವ ಅನಿವಾ ರ್ಯತೆ ಸೃಷ್ಟಿಯಾಗಿತ್ತು. ಜಮೀನು ಬಿಟು ಕೊಡಲು ಪಟ್ಟಾದಾರರು ನಿರಾಕರಿಸುವ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.

ದೇವನಹಳ್ಳಿ ಮಾದರಿಯಲ್ಲಿ ನಗರದ ವಿವಿಧ ಕಡೆ ಪ್ರತ್ಯೇಕ ಕೊಳಚೆ ಸಂಗ್ರಹಾಗಾರ ನಿರ್ಮಿಸಲಾಗುತ್ತದೆ. ಆಯಾ ಪ್ರದೇಶದ ಸಂಗ್ರಹಾಗಾರದಿಂದ ಕೊಳಚಯನ್ನು ಪೈಪ್‌ಗ್ಳ ಮೂಲಕ ಎತ್ತಿ ಸಾಗಿಸುವುದು ಈ ಯೋಜನೆಯ ಉದ್ದೇಶ.

Advertisement

ಒಳಚರಂಡಿ ಯೋಜನೆಯೇ ಬೇಕು
ದೇವನಹಳ್ಳಿ ಮಾದರಿಯ ಯೋಜನೆ ಜಿಲ್ಲೆಯ ಭೌಗೋಳಿಕತೆಗೆ ಸರಿಯೆನಿಸುವುದಿಲ್ಲ. ಹೆಚ್ಚಿನ ಮಳೆ ಬೀಳುವ ಪ್ರದೇಶವಾದ ಕಾರಣ ಇಲ್ಲಿ ವ್ಯರ್ಥವಾದೀತು. ಹೀಗಾಗಿ ಒಳಚರಂಡಿ ಯೋಜನೆಯೇ ಬೇಕು ಎಂದು ಬೆಂಗಳೂರಿನಲ್ಲಿ ನಡೆದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸಭೆಯಲ್ಲಿ ಒತ್ತಿ ಹೇಳಿದ್ದೇನೆ.
– ಸಂಜೀವ ಮಠಂದೂರು ಶಾಸಕರು, ಪುತ್ತೂರು

ಆಡಳಿತ ಮಂಡಳಿ ರಚನೆಯಾಗಬೇಕು
ನಗರಸಭೆಯಲ್ಲಿ ಈಗ ಆಡಳಿತ ಮಂಡಳಿಯೇ ಇಲ್ಲದ ಕಾರಣ ಹೊಸ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಆಡಳಿತ ಮಂಡಳಿ ರಚನೆಯಾದ ಮೇಲೆ ಸಭೆಯಲ್ಲಿ ಮಂಡಿಸಲು ಕ್ರಮ ಕೈಗೊಳ್ಳಲಾಗುವುದು.
– ರೂಪಾ ಶೆಟ್ಟಿ

ಯೋಜನೆ ರದ್ದು…!
ಸಮೀಕ್ಷೆ ಪ್ರಕಾರ ಒಳಚರಂಡಿ ಯೋಜನೆಯನ್ನು ಎಡಿಬಿ ನೆರವಿನಿಂದ ಅನುಷ್ಠಾನಗೊಳಿಸಲು ಕೆಯುಐಡಿಎಫ್‌ಸಿಗೆ ವಹಿಸಲಾಗಿದೆ. ಯೋಜನೆಗೆ ಡಿಪಿಆರ್‌ ಮಾಡಬೇಕಾದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಮತ್ತು ಜಮೀನು ನಗರಸಭೆ ಹೆಸರಿಗೆ ವರ್ಗಾವಣೆಯಾಗಬೇಕು. ಇದೆಲ್ಲ ಪ್ರಕ್ರಿಯೆ ಮುಗಿಯಲು ಮೂರು ವರ್ಷ ಬೇಕಾದೀತು. ಆದರೆ 2020ರ ಒಳಗೆ ಡಿಪಿಆರ್‌ ತಯಾರಾಗದಿದ್ದರೆ ಒಳಚರಂಡಿ ಯೋಜನೆಯ ಅನುದಾನ ರದ್ದಾಗುವ ಸಾಧ್ಯತೆ ಇದೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ.

ಬದಲಾದ ಮಾದರಿ
ಮಂಜೂರಾದ ಅನುದಾನ ರದ್ದಾಗುವುದನ್ನು ತಪ್ಪಿಸಲು ದೇವನಹಳ್ಳಿ ಮಾದರಿಯ ಫೀಕರ್‌ ಸೆಪ್ಟೇಜ್‌ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನ್ನು ಪುತ್ತೂರಿಗೆ ಅಳವಡಿಸಬಾರದೇಕೆ ಎಂದು ಕೆಯುಐಡಿಎಫ್‌ಸಿ ಪ್ರಶ್ನಿಸಿದೆ. ಈ ಸಂಬಂಧ ಸಂಸ್ಥೆಯ ಆಡಳಿತ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಸಂಸ್ಥೆಯ ಎಂಜಿನಿಯರ್‌ ಶಮಂತ್‌ ಅವರು ಹೇಳುತ್ತಾರೆ. ದೇವನಹಳ್ಳಿ ಮಾದರಿಯನ್ನು ಪುತ್ತೂರು ನಗರಸಭೆಯ ತಂಡ ಬಂದು ಪರಿಶೀಲಿಸಬೇಕು. ಅನಂತರ ನಗರಸಭೆ ಕೌನ್ಸಿಲ್ನಲ್ಲಿ ಅಂಗೀಕರಿಸಿ ವರದಿ ಸಲ್ಲಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next