Advertisement

ಒಳಚರಂಡಿ ಯೋಜನೆ ಕಾಮಗಾರಿ ನನೆಗುದಿಗೆ

01:28 PM Dec 19, 2021 | Team Udayavani |

ಸುರಪುರ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಹಾಗೂ ನಗರ ಜನತೆಯ ಬಹುನಿರೀಕ್ಷಿತ ಒಳಚರಂಡಿ (ಯುಜಿಡಿ) ಯೋಜನೆ ನನೆಗುದಿಗೆ ಬಿದ್ದಿದ್ದು, ಸಾರ್ವಜನಿಕರಿಗೆ ಬಯಲು ಶೌಚವೇ ಗತಿಯಾಗಿದೆ.

Advertisement

ಮಲಶುದ್ಧೀಕರಣ ಘಟಕ ಸ್ಥಾಪನೆಯಾಗದ ಕಾರಣ 21 ಕೋಟಿ ರೂ. ವೆಚ್ಚದ ಕಾಮಗಾರಿಗೆ ಎಳ್ಳುನೀರು ಬಿಟ್ಟಂತಾಗಿದೆ. 2009ರಲ್ಲಿಯೇ ನಗರದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಆರಂಭಿಸಲಾಗಿದ್ದು, 31ವಾರ್ಡ್‌ಗಳಲ್ಲಿ 86 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್‌, 8187 ಮನೆಗಳ ಆಳಗುಂಡಿ, 4144 ಮ್ಯಾನ್‌ಹೋಲ್‌, ಚೇಂಬರ್‌ ನಿರ್ಮಾಣ ಕಾಮಗಾರಿ 2012ರಲ್ಲಿ ಕೈಗೊಳ್ಳಲಾಗಿದೆ. ಮಲ ಶುದ್ಧೀಕರಣ ಘಟಕ (ಎಸ್‌ ಪಿಪಿ) ಹಾಗೂ ಸೇಫ್ಟಿ ಟ್ಯಾಂಕ್‌ ನಿರ್ಮಿಸಿಲ್ಲ. ಹೀಗಾಗಿ ನಗರದ ಜನತೆಗೆ ಬಯಲು ಶೌಚವೇ ಗತಿಯಾಗಿದೆ.

ಮುಂದಿನ 2035ರ ಜನಸಂಖ್ಯೆ ಪ್ರಮಾಣದ ದೂರದೃಷ್ಟಿಯಿಂದ 2008ರಲ್ಲಿ ಶಾಸಕ ನರಸಿಂಹ ನಾಯಕ ರಾಜೂಗೌಡ 26 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ 21 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಮಲಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುದಾನ ಕೊರತೆ ಎದುರಾಗಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಸಾಕಷ್ಟಿದೆ. ನಗರಸಭೆಯಿಂದ 23 ಮಹಿಳಾ ಸಮುದಾಯ ಶೌಚಾಲಗಳಿವೆ. ಇವೆಲ್ಲವೂ ಉದ್ಘಾಟನೆಗೆ ಮಾತ್ರ ಸೀಮಿತವಾಗಿದ್ದು, ಪರಿಶೀಲನೆ ಮತ್ತು ಕಡತದ ದಾಖಲೆಗಳಾಗಿವೆ ಹೊರತು ಜನೋಪಯೋಗಕ್ಕೆ ಲಭ್ಯವಿಲ್ಲ.

ನೀರು, ವಿದ್ಯುತ್‌ ನಿರ್ವಹಣೆ ಕೊರತೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಯಿಂದ ಬಹುತೇಕ ಶೌಚಾಲಯಗಳು ಉಪಯೋಗವಿಲ್ಲದೆ ಹಾಳು ಬಿದ್ದಿವೆ. 3-4 ಕಡೆ ಮಾತ್ರ ಬಳಕೆಯಲ್ಲಿವೆ. ಮಲಶುದ್ಧೀಕರಣ ಘಟಕ ನಿರ್ಮಾಣಕ್ಕೆ 2019ರಲ್ಲಿ ಸತ್ಯಂಪೇಟೆ ಸೀಮಾಂತರದಲ್ಲಿ 23ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಭೂ ಪರಿಹಾರ ನೀಡಲಾಗಿದೆ.

ಪಹಣಿಯಲ್ಲಿ ನಗರಸಭೆ ಹೆಸರು ನಮೂದಾಗಿದ್ದು, ಸೇಫ್ಟಿ ಟ್ಯಾಂಕ್‌ಗಳ ನಿರ್ಮಾಣಕ್ಕಾಗಿ ಆಶ್ರಯ ಕಾಲೋನಿ, ನರಸಿಂಗ ಪೇಟ, ತಹಸೀಲ್ದಾರ್‌ ಕಚೇರಿ ಹತ್ತಿರ ಸ್ಥಳ ಗುರುತಿಸಲಾಗಿದೆ. ಎರಡನೇ ಹಂತದ ಕಾಮಗಾರಿಗೆ ಆಗಸ್ಟ್‌ 2019ರಲ್ಲಿ 51ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೌರಾಯುಕ್ತ ಜೀವನ ಕಟ್ಟಿಮನಿ ತಿಳಿಸಿದ್ದಾರೆ.

Advertisement

ಶಾಸಕ ರಾಜೂಗೌಡ ಮಂಡಳಿಯ ಅಧ್ಯಕ್ಷರಾಗಿರುವುದರಿಂದ ಅನುಕೂಲವಾಗಲಿದೆ. ಅವರ ಸಹಕಾರದಿಂದ ಭೂಸ್ವಾಧೀನ, ಪರಿಹಾರ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿದಿವೆ. ಮಲ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಕಾಮಗಾರಿ ಮುಗಿದ ನಂತರ ‌ ನಗರಸಭೆಗೆ ಹಸ್ತಾಂತರಿಸುತ್ತೇವೆಂದು ಯುಜಿಡಿ ಎಇಇ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಸುರಪುರ ಮತ್ತು ಗುರುಮಿಠಕಲ್‌ ತಾಲೂಕಿನಲ್ಲಿ ಯುಜಿಡಿ ಕಾಮಗಾರಿಯನ್ನು ಒಂದೇ ಬಾರಿಗೆ ಆರಂಭಿ‌ಸಲಾಗಿತ್ತು. ಅಲ್ಲಿ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭವಾಗಿದೆ. ಆದರೆ ಸುರಪುರದಲ್ಲಿ ಮಾತ್ರ ಅರ್ಧಕ್ಕೆ ನಿಂತಿದೆ. ಸ್ವಾಧೀನಗೊಂಡ ಭೂಮಿ ಹದ್ದುಬಸ್ತು ಮಾಡದ ಕಾರಣ ಖಾಸಗಿಯವರು ಒತ್ತುವರಿ ಮಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಹದ್ದುಬಸ್ತು ಮಾಡಿಕಾಮಗಾರಿ ಸಂಪೂರ್ಣಗೊಳಿಸುವರೇ ಕಾಯ್ದು ನೋಡಬೇಕಿದೆ.

ಯುಜಿಡಿ ನನ್ನಕನಸಿನ ಯೋಜನೆ ಸಾಕಷ್ಟು ಪ್ರಯತ್ನ ಮಾಡಿ ತಂದಿದ್ದೇನೆ. 2013ರ ಚುನಾವಣೆಯಲ್ಲಿ ಸೋತೆ. ಆಗ ಅಧಿಕಾರದಲ್ಲಿದ್ದವರು ಪ್ರಯತ್ನಿಸಲಿಲ್ಲ ನನೆಗುದಿಗೆ ಬಿದ್ದಿದೆ. ಇದನ್ನು ವ್ಯರ್ಥವಾಗಲು ಬಿಡಲ್ಲ. ಪ್ರಯತ್ನದಲ್ಲಿದ್ದೇನೆ. 2.0 ಅಮೃತಸಂಜೀವಿನಿ ಯೋಜನೆ ಅಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಶೀಘ್ರವೇ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. 2-3 ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು. -ರಾಜೂಗೌಡ, ಶಾಸಕ ಸುರಪುರ

-ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next