ಉಪ್ಪಿನಂಗಡಿ: ಪಟ್ಟಣದ ಕೆಲವು ಹೊಟೇಲ್ ಹಾಗೂ ತಂಪು ಪಾನೀಯ ಅಂಗಡಿಗಳ ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಬೇಸಗೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತಿವೆ. ಮಳೆಗಾ ಲದಲ್ಲಿ ಕೃತಕ ನೆರೆಯಿಂದ ಕೆಲವು ಅಂಗಡಿಗಳ ಮಾಲಕರು ನಷ್ಟ ಅನುಭವಿಸುತ್ತಾರೆ. ಈ ಅನಾಹುತಗಳವನ್ನು ತಪ್ಪಿಸಲು ಗ್ರಾ.ಪಂ. ಸಹಿತ ಹಲವು ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಸ್ಥಳೀಯ ರಸ್ತೆಗಳಿಗೆ ತಾಗಿಕೊಂಡಿರುವ ಚರಂಡಿಯ ತ್ಯಾಜ್ಯ ಹರಿಯಲು ವ್ಯವಸ್ಥೆ ಮಾಡಿ ಕೊಡುವಂತೆ ವೈದ್ಯರು, ಉದ್ಯಮಿಗಳು ಹಾಗೂ ಸ್ಥಳೀಯರು ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಹಾಗೂ ಜಿ.ಪಂ.ಗೂ ಮನವಿ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದಾರೆ. ಆದರೂ ಪ್ರಯೋ ಜನವಾಗಿಲ್ಲ. ಕಳೆದ ಮಳೆಗಾಲದಲ್ಲಿ ರಾಯಲ್ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಗಳಿಗೆ ತ್ಯಾಜ್ಯ ನೀರು ನುಗ್ಗಿ ಸಾಕಷ್ಟು ನಷ್ಟವಾಗಿತ್ತು. ಒಬ್ಬರು ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಅನ್ನು, ಕೆಲವು ವ್ಯಾಪಾರಿಗಳು ತಮ್ಮ ಮಳಿಗೆ ಗಳನ್ನು ಹಾಗೂ ಸ್ಥಳೀಯ ಕೆಲವರು ತಮ್ಮ ಮನೆಗಳನ್ನೇ ಸ್ಥಳಾಂತರಿಸಿಕೊಂಡ ನಿದರ್ಶನಗಳಿವೆ.
ಸುಮಾರು 500 ಮೀ. ಉದ್ದ ಹಾಗೂ ಎರಡು ಮೀ. ಅಗಲದ ಈ ಚರಂಡಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಯನ್ನು ಪ್ರವೇಶಿಸುವ ದ್ವಾರದಲ್ಲಿ ಬೆಳ್ತಂಗಡಿ ರಸ್ತೆಯ ಕಡೆ ಹಾದು ಹೋಗುತ್ತಿದ್ದು. ರಸ್ತೆಯ ನಡುವೆ ಯಾವುದೇ ಚರಂಡಿ ವ್ಯವಸ್ಥೆ ಮಾಡ ದಿರುವುದೇ ಸಮಸ್ಯೆಗೆ ಕಾರಣ. ಉಪ್ಪಿನಂಗಡಿ – ಬೆಳ್ತಂಗಡಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಚರಂಡಿ ಹಾದು ಹೋಗುತ್ತಿರುವುದು ಸ್ಥಳೀಯ ಗ್ರಾ.ಪಂ.ಗೂ ತಲೆನೋವಿನ ಸಂಗತಿಯಾಗಿದೆ.
ಶಾಸಕರ ಒತ್ತಾಯಕ್ಕೆ ಮಣಿದು ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಾಮ ಗಾರಿಗೆ ಅಂದಾಜು ಪಟ್ಟಿ ರಚಿಸಿ, ಬಳಿಕ ತೆಪ್ಪಗೆ ಕುಳಿತಿದ್ದಾರೆ. ಈ ಸಮಸ್ಯೆ ಪ್ರತೀ ವರ್ಷ ಮಳೆಗಾಲದ ಮುಂಜಾಗ್ರತೆಯ ಸಭೆಯಲ್ಲಿ ಚರ್ಚೆಗೆ ಸೀಮಿತವಾಗಿದೆ. ತಾಲೂಕು ದಂಡಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರೂ ಮುಂದಿನ ಕ್ರಮ ಜರುಗಿಸಿಲ್ಲ.
ಈ ಅವ್ಯವಸ್ಥೆ ಸರಿಪಡಿಸಲು ರಸ್ತೆ ಮಧ್ಯೆ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ ಹಾಗೂ ಅದರ ಮೇಲೆ ಸೇತುವೆ ನಿರ್ಮಿಸುವುದೇ ಪರಿಹಾರ. ಆದರೆ, ಈ ಚರಂಡಿ ಪಕ್ಕದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಪರವಾನಿಗೆ ನೀಡುತ್ತಿರುವ ಉಪ್ಪಿನಂಗಡಿ ಗ್ರಾ.ಪಂ., ಚರಂಡಿ ವ್ಯವಸ್ಥೆ ಸರಿಪಡಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಸಾರ್ವಜನಿ ಕರು ಆರೋಪಿಸುತ್ತಿದ್ದಾರೆ. ಖಾಸಗಿ ಸಹ ಭಾಗಿತ್ವದಲ್ಲಿ ಸಂಬಂಧಿಸಿದ ಇಲಾಖೆ ಗಳು ಯೋಜನೆ ಕೈಗೆತ್ತಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.ಕಳೆದ ಮಳೆಗಾಲದಲ್ಲಿ ನೆರೆ ಬಂದಾಗ ಉಸ್ತುವಾರಿ ಸಚಿವರೂ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಚರಂಡಿಯ ವ್ಯವಸ್ಥೆಗಾಗಿ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಾ| ದಂಡಾಧಿಕಾರಿ ಹಾಗೂ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹೇಳಿದ್ದರು, ಅದು ನೆಪ ಮಾತ್ರ ಎಂದು ಬಣ್ಣಿಸಿದ್ದಾರೆ.
ಡಿಸಿ ಬಳಿ ಬಾಕಿ
ಸಮಸ್ಯೆ ಬಗ್ಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಜತೆ ಚರ್ಚಿಸಿ, ಮಾಜಿ ಶಾಸಕ ವಸಂತ ಬಂಗೇರ ಅವರಲ್ಲಿ ಒತ್ತಡ ಹೇರಲಾಗಿತ್ತು. ಇದರ ಪರಿಣಾಮವಾಗಿ ಸ್ಥಳ ಪರಿಶೀಲನೆ ಮಾಡಿ ಅಂದಾಜು ಪಟ್ಟಿ ಸಿದ್ಧಗೊಂಡು, ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ನಿಯೋಗ ಡಿಸಿ ಅವರನ್ನು ಭೇಟಿಯಾಗಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಕಳೆದ ಬಾರಿ ನೆರೆ ಬಂದಾಗ ಸ್ಥಳಕ್ಕೆ ಆಗಮಿಸಿದ ಡಿಸಿ ಅವರಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಪುತ್ತೂರು ಸಹಾಯಕ ಆಯುಕ್ತರು ಕೋರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
-ಅಬ್ದುಲ್ ರೇಹಮನ್, ಅಧ್ಯಕ್ಷರು,
ಉಪ್ಪಿನಂಗಡಿ ಗ್ರಾ.ಪಂ.
ಭರವಸೆ ಮಾತ್ರ
ಭಾರೀ ಗಾತ್ರದ ಚರಂಡಿ ಇದಾಗಿದ್ದು ತ್ಯಾಜ್ಯ ನೀರು ಇಲ್ಲೇ ಶೇಖರಣೆಗೊಂಡು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಎಲ್ಲ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ನೀಡಿದ ಮನವಿ ಪ್ರಯೋಜನವಾಗಿಲ್ಲ. ಭರವಸೆ ಮಾತ್ರ ವ್ಯಕ್ತವಾಗುತ್ತಿದೆ.
–
ಡಾ| ಎಂ. ಆರ್. ಶೆಣೈ ,
ಸ್ಥಳೀಯರು
ಎಂ.ಎಸ್. ಭಟ್ ಉಪ್ಪಿನಂಗಡಿ