ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಪಟ್ಟಣದ ಹಳೆಗೇಟು ಬಳಿ ಸಣ್ಣ ಮಳೆ ಬಂದರೂ ರೋಡು ತೋಡಾಗಿ ಬದಲಾಗುತ್ತದೆ…!
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮಧ್ಯೆ ನೀರು ನಿಂತು ಕೆಸರು ಗದ್ದೆಯಂತಾಗಿದ್ದು ವಾಹನ ಸವಾರರಿಗೆ ಸಂಚಾರ ತ್ರಾಸದಾಯಕವೆನಿಸಿದೆ.ದಿನನಿತ್ಯ ನೂರಾರು ವಾಹನ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯನ್ನು ದಾಟಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಬದಲಾದರೂ, ರಸ್ತೆ ಇಕ್ಕೆಲಗಳಲ್ಲಿನ ಚರಂಡಿ ಸಮಸ್ಯೆ ಬಗೆಹರಿದಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ.
ಹಲವು ಅಪಘಾತಗಳು ಸಂಭವಿಸಿದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ. ನ.ಪಂ.ತನ್ನ ವ್ಯಾಪ್ತಿಯಲ್ಲಿ ಈ ರಸ್ತೆ ಇಲ್ಲ ಎಂದು ಕೈ ಚೆಲ್ಲಿದೆ. ಹೆದ್ದಾರಿ ಇಲಾಖೆಯವರು ಗಮನಹರಿಸಿಲ್ಲ. ಹೀಗಾಗಿ ಇಲ್ಲಿನ ಸಂಚಾರ ಅಂದರೆ ಅದು ಪ್ರಾಣಕ್ಕೆ ಕುತ್ತು ಎಂಬಂತಿದೆ.
ರಸ್ತೆಯ ಇಕ್ಕೆಲಗಳಲ್ಲಿ ಹೊಟೇಲ್ ಸೇರಿದಂತೆ ಹಲವು ವಾಣಿಜ್ಯ ವ್ಯವಹಾರದ ಅಂಗಡಿಗಳಿವೆ. ಪ್ರತಿನಿತ್ಯ ಗ್ರಾಹಕರು ಬರುತ್ತಿದ್ದು, ಮಳೆ ಬಂದಲ್ಲಿ ರಸ್ತೆ ದಾಟಲು ಆಗುತ್ತಿಲ್ಲ. ಹೀಗಾಗಿ ಗ್ರಾಹಕರ ಜತೆಗೆ ವ್ಯಾಪಾರಸ್ಥರಿಗೂ ತೊಂದರೆ ತಪ್ಪುತ್ತಿಲ್ಲ ಅನ್ನುತ್ತಾರೆ ಸ್ಥಳೀಯ ಅಂಗಡಿ ಮಾಲಕರು.