ಮಂಡ್ಯ: ಮದ್ದೂರು ಪಟ್ಟಣದ ಹೆದ್ದಾರಿ ಅಗಲೀಕರಣದಿಂದ ಪಕ್ಕದ ಹಳ್ಳದ ಮನೆಯಲ್ಲಿ ವಾಸ ಮಾಡುತ್ತಿದ್ದ ಮನೆಯವರೆಗೆ ಸಂಕಷ್ಟ ಎದುರಾಗಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ಸದಸ್ಯರು ಪಕ್ಕದ ಮನೆಯ ಸೂರಿನಡಿ ಇಡೀ ರಾತ್ರಿ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಡೆಸುತ್ತಿರುವ ಲಕ್ಷ್ಮಮ್ಮ ಎಂಬವರ ಮನೆ ಕಳೆದ ರಾತ್ರಿ ಸುರಿದ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ.
ರಾತ್ರಿ ಸುರಿದ ಭಾರಿ ಮಳೆಯಿಂದ ಮದ್ದೂರು ಮಂಡ್ಯ ರಸ್ತೆ ನೀರು ಮಾರುಕಟ್ಟೆ ಪಕ್ಕದಲ್ಲಿರುವ ಪ್ರದೇಶದ ನಿವಾಸಿಗಳ ಗೋಳು ಹೇಳತೀರದಾಗಿದೆ.
ಇದನ್ನೂ ಓದಿ:ಒಂದು ಜಿಲ್ಲೆ ಒಂದು ಉತ್ಪನ್ನ; ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಾಗರೋತ್ಪನ್ನ
ರಸ್ತೆ ಅಗಲೀಕರಣದಿಂದ ಇರುವ ಚರಂಡಿಯನ್ನು ಮುಚ್ಚಿದ್ದರಿಂದ ಚರಂಡಿ ನೀರು ಮನೆಯೊಳಗೆ ನುಗ್ಗಿ ದವಸ-ಧಾನ್ಯ ಬಟ್ಟೆ ಪಾತ್ರೆ ಎಲ್ಲವೂ ಸಂಪೂರ್ಣ ಹಾಳಾಗಿವೆ. ಇದರಿಂದ ಇಡೀ ರಾತ್ರಿ ಪಕ್ಕದ ಮನೆಯ ತೇರಿನಲ್ಲಿ ಚಳಿಯಲ್ಲಿ ಕುಳಿತಿದ್ದಾರೆ.
ಈ ಬಗ್ಗೆ ಮಾತನಾಡಿದ ಲಕ್ಷ್ಮಮ್ಮ, ರಾತ್ರಿ ಮಲಗಿದ್ದು ಸುಮಾರು ಹನ್ನೆರಡುವರೆ ಸಂದರ್ಭದಲ್ಲಿ ಮನೆ ಒಳಗಡೆ ನೀರು ಪ್ರಾರಂಭವಾಯಿತು. ಒಮ್ಮೆಲೆ ನೀರು ನುಗ್ಗಿದ ಕಾರಣ ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆಬರೆ ಎಲ್ಲವೂ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ನಾವು ಹೇಗೋ ನನ್ನ ಮಗಳು ನನ್ನ ಮೊಮ್ಮಕ್ಕಳು ನಾವು ಒಂದು ಕೈಯಲ್ಲಿ ಜೀವ ಹಿಡಿದು ನಿಧಾನವಾಗಿ ಹೊರಬಂದು ಪಕ್ಕದ ಮನೆಯ ಎತ್ತರದ ಸೂರಿನಲ್ಲಿ ಇಡೀ ರಾತ್ರಿ ಕಳೆಯಬೇಕಾಯಿತು. ರಸ್ತೆ ಅಗಲೀಕರಣ ಮಾಡಲು ಚರಂಡಿಯನ್ನು ಕಿತ್ತುಹಾಕಿ ಚರಂಡಿ ಸರಿಪಡಿಸದ ಕಾರಣ ಮಳೆ ಹಾಗೂ ಚರಂಡಿ ನೀರು ಮನೆಗೆ ನುಗ್ಗಿ ಹಾನಿಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಕೂಡಲೇ ರಸ್ತೆ ಅಗಲೀಕರಣ ಕಾಮಗಾರಿ ಮುಗಿಸಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.