ಯಳಂದೂರು: ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ವೈ.ಕೆ.ಮೋಳೆ ಗ್ರಾಮದಲ್ಲಿ ಚರಂಡಿಗೆ ಮಣ್ಣು ಸುರಿದು ಖಾಸಗಿ ವ್ಯಕ್ತಿಯೊಬ್ಬರು ವಿನಾಕಾರಣ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಅಂದಾಜು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ ಉಪ್ಪಾರ ಜನಾಂಗವೇ ಹೆಚ್ಚಾಗಿದೆ. ಇವರ ಬಡಾವಣೆಯಲ್ಲಿ ಹಾದು ಹೋಗಿರುವ ಚರಂಡಿಗೆ ಖಾಸಗಿ ವ್ಯಕ್ತಿಯೊಬ್ಬರು ಮಣ್ಣು ಹಾಕಿರುವ ಪರಿಣಾಮ ಮನೆಗಳ ಮುಂದೆ ಕಲುಷಿತ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಭೀತಿ ಇದೆ. ಇದರಿಂದ ಮನೆಯಲ್ಲಿರುವ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ವಾಸಿಸಲು ಬಹಳಷ್ಟು ತೊಂದರೆಯಾಗುತ್ತಿದೆ.
ಗ್ರಾಮದ ಉಪ್ಪಾರ ಬಡಾವಣೆಯಿಂದ ಈ ಚರಂಡಿ ಹಾದು ಹೋಗಿದ್ದು ಈ ನೀರು ಬೀದಿಯ ಅಂತ್ಯದಲ್ಲಿರುವ ದೊಡ್ಡ ಚರಂಡಿಯನ್ನು ಸೇರುತ್ತಿತ್ತು. ಆದರೆ ಈ ಸ್ಥಳದಿಂದ ಅನತಿ ದೂರದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಿವೇಶನದಲ್ಲಿ ಕಲುಷಿತ ನೀರು ನುಗ್ಗುತ್ತಿದೆ. ಇದರಿಂದ ನನಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ಇದಕ್ಕೆ ತಡೆಯೊಡ್ಡಿದ್ದಾರೆ. ಹಾಗಾಗಿ ನೀರು ಸರಾಗವಾಗಿ ಹಾದು ಹೋಗುತ್ತಿಲ್ಲ. ಇದರಿಂದ ಹತ್ತಾರು ಕುಟುಂಬ ಗಳ ನೂರಾರು ಜನರು ಬವಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನಿವಾಸಿಗಳು ಗುರುವಾರ ಪ್ರತಿಭಟನೆಯನ್ನು ನಡೆಸಿದರು.
ರೋಗಜನ್ಯ ಪ್ರದೇಶವಾದ ಬೀದಿಗಳು: ವೈ.ಕೆ. ಮೋಳೆ ಗ್ರಾಮದ ಹಲವು ಬೀದಿಗಳಲ್ಲಿ ಚರಂಡಿ ಸಮಸ್ಯೆಗಳಿವೆ. ಇಲ್ಲಿರುವ ಕೆಲ ಬೀದಿಗಳಲ್ಲಿ ಚರಂಡಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಡಕ್ ಒಡೆದು ಹೋಗಿ ಹಲವು ತಿಂಗಳಾದರೂ ಇದನ್ನು ದುರಸ್ತಿ ಮಾಡಿಲ್ಲ. ಈಗ ಮಳೆಗಾಲವಾಗಿದ್ದು ಮಳೆ ಬಿದ್ದಲ್ಲಿ ಈ ನೀರೆಲ್ಲಾ ಇಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಇದರೊಂದಿಗೆ ಈಗ ಬೇಸಿಗೆಯಾಗಿ ರುವುದರಿಂದ ಚರಂಡಿ ಗಬ್ಬು ನಾರುತ್ತಿದೆ. ಹಲವು ದಿನಗಳಿಂದ ಚರಂಡಿಯಲ್ಲಿ ಹೂಳೆತ್ತಿಲ್ಲ. ಕಸಕಡ್ಡಿಗಳು ಸಿಲುಕಿಕೊಂಡು ನೀರು ಸರಾಗವಾಗಿ ಸಾಗದೆ, ನೀರು ಮಡುಗಟ್ಟಿ ನಿಂತಿರುವುದರಿಂದ ಸೊಳ್ಳೆ ಕ್ರಿಮಿಕೀಟಗಳು ಹೆಚ್ಚಾಗಿವೆ. ಈ ಪ್ರದೇಶವೆಲ್ಲ ರೋಗಜನ್ಯ ಪ್ರದೇಶವಾಗಿ ಮಾರ್ಪಟ್ಟಿವೆ ಎಂಬುದು ಸ್ಥಳೀಯರಾದ ಚಿನ್ನಸ್ವಾಮಿ ಸೇರಿದಂತೆ ಹಲವರ ದೂರಾಗಿದೆ.
ಇನ್ನೂ ಎಚ್ಚೆತ್ತುಕೊಳ್ಳದ ಪಂಚಾಯಿತಿ ಅಧಿಕಾರಿಗಳು: ಇಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪಂಚಾಯಿತಿಗೆ ದೂರನ್ನು ಸಲ್ಲಿಸಲಾಗಿದೆ. ಚರಂಡಿಯ ಡೆಕ್‌ನ್ನು ದುರಸ್ತಿ ಪಡಿಸುವುದು, ಮಣ್ಣಿನಿಂದ ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿರುವ ಚರಂಡಿಯನ್ನು ತೆಗೆಸುವುದು. ಚರಂಡಿಯ ಹೂಳೆತ್ತುವುದಕ್ಕೆ ಅಂಬಳೆ ಪಂಚಾಯಿತಿಗೆ ಹಲವು ಬಾರಿ ದೂರನ್ನು ನೀಡಿದ್ದರೂ ಇದುವರೆವಿಗೂ ಕ್ರಮ ವಹಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಇಲ್ಲಿನ ವಾಸಿಗಳಾದ ಸ್ವಾಮಿ, ರಂಗಸ್ವಾಮಿ, ನಾಗರಾಜು ಸೇರಿದಂತೆ ಅನೇಕರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನನಗೆ ಮಾಹಿತಿ ಇದೆ. ಸ್ಥಳಕ್ಕೆ ಭೇಟಿ ನೀಡಿ ಚರಂಡಿ ಮುಚ್ಚಿರುವುದನ್ನು ಕೂಡಲೇ ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಶೀಘ್ರ ಚರಂಡಿಯನ್ನು ಸ್ವತ್ಛಗೊಳಿಸಲು ಸಂಬಂಧಪಟ್ಟ ಪೌರಕಾರ್ಮಿಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
●ಮಮತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಬಳೆ