Advertisement

ಚರಂಡಿ, ರಸ್ತೆ ನಿರ್ಮಾಣಕ್ಕೆ ಅಡ್ಡಿ

01:29 PM Apr 23, 2019 | Team Udayavani |

ಬಂಗಾರಪೇಟೆ: ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ ಹಾಗೂ ರಸ್ತೆ ಕಾಮಗಾರಿ ಆರಂಭಿಸಿ 6 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಜನರು ಓಡಾಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಕೆಸರನಹಳ್ಳಿ ಯಲ್ಲಪ್ಪ ಜಿಪಂ ಸಿಇಒಗೆ ದೂರು ನೀಡಿದ್ದಾರೆ.

Advertisement

ತಾಲೂಕಿನ ಕೆಸರನಹಳ್ಳಿ ಗ್ರಾಪಂ ಕೇಂದ್ರದಲ್ಲಿ ಅಧ್ಯಕ್ಷ ಮಂಜುನಾಥ್‌ ನೇತೃತ್ವದಲ್ಲಿ ನಡೆಯುತ್ತಿರುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. 6 ತಿಂಗಳ ಹಿಂದೆ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಲಾಗಿತ್ತು. ಚರಂಡಿ ಕೆಲಸ ಅರ್ಧದಷ್ಟು ಮುಗಿದಿದೆ. ಉಳಿದ ಕೆಲಸ ನನೆಗುದಿಗೆ ಬಿದ್ದಿದೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮದ ಯಲ್ಲಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮನವಿ ಮಾಡಿದ್ರೂ ಪ್ರಯೋಜನವಿಲ್ಲ:

ಈ ಸಂಬಂಧ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೆಸರನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ತಾಪಂ ಇಒಗೆ, ಜಿಪಂ ಸಿಇಒಗೆ ಮನವಿ ಮಾಡಲಾಗಿದ್ದರೂ ಕಾಮಗಾರಿ ಪೂರ್ಣವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು, ನನೆಗುದಿಗೆ ಬಿದ್ದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು 2 ತಿಂಗಳ ಹಿಂದೆ ಮೇಲಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ವಿವಾದದಲ್ಲಿ ಜಾಗ: ಕಾಮಗಾರಿ ನಡೆಯುತ್ತಿರುವ ಜಾಗವು ಇದೇ ಗ್ರಾಮದ ಪಟ್ಟಾಭಿರಾಮಣ್ಣಗೆ ಸೇರಿದ್ದು, 10 ವರ್ಷಗಳ ಹಿಂದೆ ಈ ಜಾಗ 10 ಜನರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಜನ ಮನೆಗಳನ್ನೂ ನಿರ್ಮಾಣ ಮಾಡಿಕೊಂಡಿದ್ದಾರೆ. ಇದೀಗ ಪಟ್ಟಾಭಿರಾಮಣ್ಣ ಅವರ ಪುತ್ರಿ ಭಾರತಿ, ಮಗ ಚಲಪತಿ ತಕರಾರು ತೆಗೆದಿದ್ದು, ಅವರ ತಂದೆ ಮಾರಾಟ ಮಾಡಿದ್ದ ಜಾಗವನ್ನು ಮತ್ತೆ ವಾಪಸ್‌ ಕೊಡಬೇಕೆಂದು ಒತ್ತಾಯಿಸಿ ಕೋರ್ಟ್‌ನಲ್ಲ ಕೇಸು ಹಾಕಿರುವ ಕಾರಣ, ಜಾಗದಲ್ಲಿ ಕಾಮಗಾರಿ ಮಾಡದಂತೆ ಅರ್ಧಕ್ಕೆ ತಡೆಹಿಡಿದಿದ್ದಾರೆ.

Advertisement

ಗ್ರಾಪಂ ಅಧ್ಯಕ್ಷ ಕೆಸರನಹಳ್ಳಿ ಮಂಜುನಾಥ್‌ ಗ್ರಾಮಕ್ಕೆ ರಸ್ತೆ, ಚರಂಡಿ ನಿರ್ಮಾಣ ಮಾಡುವ ಉದ್ದೇಶದಿಂದ ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭ ಮಾಡಿದ್ದು, ಕಾಮಗಾರಿ ಪ್ರಾರಂಭಿಸಿದ ವಾರದಲ್ಲಿ ತಡೆಹಿಡಿಯಲಾಗಿದೆ.ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಸ್ಥಳೀಯ ಪೊಲೀಸ್‌ ಇಲಾಖೆಯಲ್ಲಿ ದೂರು ಸಹ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವ ಮೂಲಕ ಜನರಿಗೆ ಅನುಕೂಲ ಒದಗಿಸಬೇಕಿದೆ.

ಕ್ರಮಕ್ಕೆ ಮನವಿ: ಕೆಸರನಹಳ್ಳಿ ಗ್ರಾಮದ ಕಾಂಗ್ರೆಸ್‌ ಮುಖಂಡ ಜಿಪಂ ಅಧಿಕಾರಿಗಳಿಗೆ ದೂರು ನೀಡಿರುವುದರಿಂದ ಜಿಪಂ ಯೋಜನಾ ನಿರ್ದೇಶಕರು ಬಂಗಾರಪೇಟೆ ತಾಲೂಕಿನ ತಾಪಂ ಇಒಗೆ ಲಿಖೀತ ಪತ್ರ ಬರೆದಿದ್ದು, ಕೆಸರನಹಳ್ಳಿ ಗ್ರಾಪಂನಲ್ಲಿ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಲು ಕಾರಣ ಕೇಳಿ, ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next