ಸುರತ್ಕಲ್: ಇಲ್ಲಿನ ಅಗರಮೇಲು, ಹೊಸಬೆಟ್ಟು, ಗುಡ್ಡಕೊಪ್ಲ ಮತ್ತಿತರ ಪ್ರದೇಶಗಳಲ್ಲಿ ನಿರ್ಮಿಸಿರುವ ಕಳಪೆ, ಅವೈಜ್ಞಾನಿಕ ಒಳಚರಂಡಿಯ ಮಲಿನ ನೀರು ಶುದ್ಧ ಬಾವಿಗಳಿಗೆ ಹರಿಯುತ್ತಿದೆ. ಪರಿಣಾಮ ಇಲ್ಲಿಯ ನೀರು ಬಳ ಸಲು ಆಯೋಗ್ಯವಾಗಿದ್ದು, ನೀರಿನ ಮೂಲವೇ ಹಾಳಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಅಗರಮೇಲುವಿನಲ್ಲಿ ಡ್ರೈನೇಜ್ ಸಂಪರ್ಕ ಪೂರ್ಣವಾಗಿಲ್ಲ. ಹೀಗಾಗಿ ಇಲ್ಲಿನ ಶೌಚ ನೀರು ಸಹಿತ ಎಲ್ಲ ಮಲಿನ ನೀರನ್ನು ತೋಡಿನಲ್ಲೇ ಹರಿಯಬಿಡುತ್ತಿರುವುದರಿಂದ ತಗ್ಗುಪ್ರದೇಶ ಬಂಟರ ಭವನದ ಮೇಲಿನ ಪ್ರದೇಶದ ಸುತ್ತಮುತ್ತ ದುರ್ವಾಸನೆ ಮತ್ತು ಬಾವಿ ನೀರು ಮಲಿನಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ಬಾವಿ ಆಶ್ರಯಿಸಿದ್ದ ಸ್ಥಳೀ ಯರು ಇಂದು ಪಾಲಿಕೆಯ ಸಂಪರ್ಕ ಪಡೆದು ಕ್ಲೋರಿನ್‌ಯುಕ್ತ ನೀರನ್ನು ಅನಿವಾರ್ಯವಾಗಿ ಸೇವಿಸುವಂತಾಗಿದೆ. ಹೊಸಬೆಟ್ಟು, ಗುಡ್ಡೆಕೊಪ್ಲ ಪ್ರದೇಶದ ಹಲವಾರು ಬಾವಿಗಳು ಒಳಚರಂಡಿ ಅವ್ಯವಸ್ಥೆಯಿಂದ ಬಾವಿ ನೀರು ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳ ಗಮನಸೆಳೆಯಲಾಗಿದೆ.
ಅನಾರೋಗ್ಯಕ್ಕೆ ಕಾರಣ
ಸುರತ್ಕಲ್ ಸುತ್ತಮುತ್ತ ವಾರ್ಡ್‌ನ ವಿವಿಧೆಡೆ ಬಾವಿ ನೀರು ಅಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಬಳಕೆ ಮಾಡದ ಅಶುದ್ಧ ನೀರು ಒಂದೆಡೆಯಾದರೆ ಈ ಜಲಮೂಲಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಅನಾರೋಗ್ಯ ಪ್ರಕರಣಗಳು ಕಂಡು ಬರುತ್ತಿವೆ.
ಎರಡನೇ ಹಂತದಲ್ಲಿ ಎಡಿಬಿ ಯೋಜನೆ ?
ಮನಪಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಎಡಿಬಿ ಹಣಕಾಸಿನಿಂದ ಒಳಚರಂಡಿ ಯೋಜನೆ ಈಗಾಗಲೇ ಸಿದ್ಧತೆ ನಡೆದಿದ್ದರೂ ಅನುಷ್ಠಾನಕ್ಕೆ ಬರಲು ಇನ್ನೂ ಒಂದೆರಡು ವರ್ಷ ಕಾಯಬೇಕಿದೆ. ಈಗ ಬಾವಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಶುದ್ಧೀಕರಿಸಿದರೂ ಮತ್ತೆ ಮಲಿನ ನೀರು ತುಂಬುವುದರಿಂದಾಗಿ ಅವುಗಳನ್ನು ಆಶ್ರಯಿಸಿದ ಕುಟುಂಬಗಳು ಕೇವಲ ತೋಟಕ್ಕೆ ಮಾತ್ರ ನೀರು ಬಳಕೆ ಮಾಡುತ್ತಿದ್ದಾರೆ.
ಮುಂಜಾಗ್ರತೆ ಕ್ರಮ ಏನು
ಪ್ರತಿ ಗ್ರಾಮ, ವಾರ್ಡ್ ಮಟ್ಟದಲ್ಲಿ ಪರಿಸರ ಸ್ವತ್ಛತೆ ಬಗ್ಗೆ ಹೆಚ್ಚು ಗಮನ ಹರಿಸಿ, ಕುಡಿಯುವ ನೀರಿನ ಪ್ರತಿಯೊಂದು ಮೂಲಗಳಿಗೆ ವಾರಕ್ಕೊಮ್ಮೆ ಕ್ಲೋರಿನೇಷನ್ ಮಾಡಿಸಬೇಕಿದೆ. ನೀರಿನ ಪೈಪ್‌ಗ್ಳು ಒಡೆದಿರುವ ಬಗ್ಗೆ ಪರಿಶೀಲಿಸಿ ತತ್‌ಕ್ಷಣ ದುರಸ್ತಿ ಮಾಡಿಸಬೇಕು. ನೀರು ಸಂಗ್ರಹಣೆ ಟ್ಯಾಂಕ್‌ಗಳನ್ನು ವಾರಕೊಮ್ಮೆ ಸ್ವತ್ಛಗೊಳಿಸಬೇಕು. ಕೊಳವೆಬಾವಿ, ತೆರೆದ ಬಾವಿಗಳ ಸುತ್ತಲು ನೀರು ನಿಲ್ಲದಂತೆ, ಮಲಿನವಾಗದಂತೆ ನೋಡಿಕೊಳ್ಳಬೇಕು. ಕ್ಲೋರಿನೇಷನ್ ಮಾಡಿ 2 ದಿನಗಳ ಅನಂತರ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಲು ಬಳಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಮಲಿನ ನೀರು ತೋಡಿಗೆ
ನಮ್ಮ ಬಾವಿಯಲ್ಲಿ ನೀರು ಸದಾ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಸತಿ ನಿವೇಶನಗಳು ಹೆಚ್ಚಾಗುತ್ತಿದ್ದಂತೆ ಒಳಚರಂಡಿಗೆ ಆದ್ಯತೆ ನೀಡದೆ ಮನೆ ಮಾತ್ರ ಕಟ್ಟಲು ಅನುಮತಿ ನೀಡಲಾಗುತ್ತದೆ. ಇದರಿಂದ ಶೌಚ, ಬಟ್ಟೆ ಒಗೆದ, ಪಾತ್ರೆ ತೊಳೆದ, ಮಾಂಸಗಳನ್ನು ಶುದ್ಧೀಕರಿಸಿದ ಮಲಿನ ನೀರನ್ನು ತೋಡಿಗೆ ಬಿಡಲಾಗುತ್ತಿದೆ. ಅದು ಸರಿಯಾಗಿ ಹರಿಯದೆ ಒರತೆ ಮೂಲಕ ಬಾವಿಗೆ ಇಳಿಯುತ್ತಿದೆ. ಇದರಿಂದ ನಮ್ಮ ಬಾವಿ ಇಂದು ಉಪಯೋಗಕ್ಕೆ ಬಾರದಂತಾಗಿದೆ.
- ಅಶೋಕ್ ಅಗರಮೇಲು, ಸ್ಥಳೀಯರು
ಲಕ್ಷ್ಮೀನಾರಾಯಣ ರಾವ್