Advertisement

Drainage construction: 110 ಹಳ್ಳಿಗೆ 110 ಕಿ.ಮೀ. ಒಳಚರಂಡಿ ನಿರ್ಮಾಣ

10:39 AM Aug 22, 2024 | Team Udayavani |

ಬೆಂಗಳೂರು: ನಗರದ ಹೊರ ವಲಯದ 110 ಗ್ರಾಮಗಳ ತ್ಯಾಜ್ಯ ನೀರನ್ನು ನೇರವಾಗಿ ಎಸ್‌ ಟಿಪಿ(ತ್ಯಾಜ್ಯ ನೀರು ಶುದ್ಧೀಕರಣ ಘಟಕ)ಗೆ ಹರಿಸಲು ಜಲಮಂಡಳಿಯು ನಾಗನಾಥಪುರದಿಂದ ವರ್ತೂರಿನವರೆಗೆ 150 ಕೋಟಿ ರೂ. ವೆಚ್ಚದಲ್ಲಿ 110 ಕಿ.ಮೀ. ಒಳಚರಂಡಿ ನಿರ್ಮಿಸಲಾಗುತ್ತಿದ್ದು, ಈ ಪೈಕಿ 74 ಕಿ. ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಒಳಚರಂಡಿ ಕಾರ್ಯರಂಭಗೊಳ್ಳಲಿದೆ.

Advertisement

ರಾಜ್ಯ ರಾಜಧಾನಿಯು ಹೊರವಲಯದವರೆಗೂ ವಿಸ್ತರಣೆ ಆಗುತ್ತಿರುವುದನ್ನು ಮನಗಂಡಿರುವ ಜಲಮಂಡಳಿಯು, ಬೆಂಗಳೂರು ಹೊರವಲಯದ 110 ಹಳ್ಳಿಗಳಲ್ಲಿರುವ ಲಕ್ಷಾಂತರ ಮನೆಗಳಿಂದ ತ್ಯಾಜ್ಯ ನೀರು ನೇರವಾಗಿ ವರ್ತೂರಿನಲ್ಲಿರುವ ಎಸ್‌ಟಿಪಿಗೆ ತಲುಪಲು 3 ವರ್ಷಗಳ ಹಿಂದೆ ಜೈಕಾದ ಸಿಪಿ-26 ಪ್ಯಾಕೇಜ್‌ನಡಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ಈ ಯೋಜನೆಯು ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, 74 ಕಿ.ಮೀ. ಒಳಚರಂಡಿ ಕೊರೆಯುವ ಕಾಮಗಾರಿ ಮುಗಿದಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮನೆಗಳಿಗೆ ಒಟ್ಟಾರೆ 1,500 ಕಿ.ಮೀ. ಯುಜಿಡಿ ಲೈನ್‌ ಅಳವಡಿಸಲಾಗಿದೆ. ಈ ಗ್ರಾಮಗಳಿಂದ ಪಂಪ್‌ ಮಾಡದೆಯೇ ತನ್ನಿಂತಾನೇ ತ್ಯಾಜ್ಯ ಒಳಚರಂಡಿಗೆ ಹರಿದು ಬರಲಿದೆ. ವರ್ಷಾಂತ್ಯದೊಳಗೆ 110 ಕಿ.ಮೀ. ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.

ಎಲ್ಲೆಲ್ಲಿ ಹಾದು ಹೋಗಲಿದೆ ಒಳಚರಂಡಿ?: ನಾಗನಾಥಪುರದಿಂದ ಈ ತ್ಯಾಜ್ಯಗಳ ಒಳಚರಂಡಿ ಪ್ರಾರಂಭವಾಗಿ ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯದ ಮೂಲಕ ವರ್ತೂರಿನ ಕೆರೆಯ ಸಮೀಪದ ಎಸ್‌ಟಿಪಿವರೆಗೂ ಹಾದು ಹೋಗಲಿದೆ. ಎಚ್‌ಡಿಡಿ ಮೆಥಡ್‌ 3 ಕಿ.ಮೀ ಒಳಚರಂಡಿ ಕೊರೆಸಿದರೆ, 71 ಕಿ. ಮೀ. ಉದ್ದದವರೆಗೆ ಸಾಮಾನ್ಯ ಕೊರೆಸಲಾಗಿದೆ.ಇದರ ವ್ಯಾಸ 1,200 ಎಂಎಂ ಇದೆ. ಇನ್ನು ಮಂಡಳಿ ಸಿಬ್ಬಂದಿ ಒಳಚರಂಡಿ ಕೊರೆಯಲು ಸಾಧ್ಯವಾಗದ 450 ಮೀ. ಉದ್ದದಷ್ಟು ಪ್ರದೇಶದ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ. ಮಂಡಳಿಯ ಅಧಿಕಾರಿಗಳು ಒಳಚರಂಡಿ ಕೊರೆಯಲು ಮೊದಲೇ ನೀಲನಕ್ಷೆ ಸಿದ್ಧಪಡಿಸಿದ್ದರೂ, ಕೆಲವು ಪ್ರದೇಶಗಳು ಒತ್ತುವರಿಯಾಗಿರುವುದು, ಕೆಲವೆಡೆ ಅನುಮತಿ ಸಿಗದಿರುವುದರಿಂದ ಈ ಯೋಜನೆ ವಿಳಂಬವಾಗಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

450 ಮೀಟರ್‌ ಒಳಚರಂಡಿ ಕೊರೆಸಲು ಗುತ್ತಿಗೆ: ಸರ್ಜಾಪುರ ರಸ್ತೆ ಬಳಿಯ ಕೈಗೊಂಡನಹಳ್ಳಿಯ ಕೆರೆಯೊಂದರ ಸಮೀಪದಲ್ಲಿ ಕಲ್ಲು, ಗಟ್ಟಿ ಮಣ್ಣು ಇದ್ದ ಪ್ರದೇಶದಲ್ಲಿ 450 ಮೀಟರ್‌ ಒಳಚರಂಡಿ ಕೊರೆಯಲು ಜಲಮಂಡಳಿ ಸಿಬ್ಬಂದಿಗೆ ಕ್ಲಿಷ್ಟಕರವಾಗಿತ್ತು. ಹೀಗಾಗಿ, ಈ 450 ಮೀ. ಒಳಚರಂಡಿ ಕೊರೆಸಲು ಎಲ್‌ ಆ್ಯಂಡ್‌ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಇದೀಗ ಈ ಕಂಪನಿಯು ಚೀನಾದಿಂದ ಮೈಕ್ರೋ ಟ್ಯಾನಲಿಂಗ್‌ ಯಂತ್ರ ತರಿಸಿಕೊಂಡು ಒಳಚರಂಡಿ ಕೊರೆಸುತ್ತಿದೆ.

Advertisement

ಮೈಕ್ರೋ ಟ್ಯಾನಲಿಂಗ್‌ ಯಂತ್ರವು ಕೈಗೊಂಡನಹಳ್ಳಿಯಲ್ಲಿರುವ ಗಟ್ಟಿ ಮಣ್ಣು, ಕಲ್ಲುಗಳನ್ನು ಸಮೇತ ಕೆಳ ಭಾಗದಲ್ಲಿ ಸಮಾನಾಂತರವಾಗಿ ಡ್ರಿಲ್‌ ಮಾಡುತ್ತಿದೆ. ಮುಂದಿನ 30 ದಿನಗಳಲ್ಲಿ ಈ ಕಾರ್ಯ ಮುಗಿಯಲಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಮನುಷ್ಯ ರಿಂದ ಒಳಚರಂಡಿ ಕೊರೆಯಲು ಸಾಧ್ಯವಾಗದ ಕಡೆ, ಕಟ್ಟಡಗಳ ಕೆಳಭಾಗ, ಮರಗಳ ಕೆಳಗೆ, ಕಲ್ಲು ಬಂಡೆ, ಕಲ್ಲುಗಳು, ಗಟ್ಟಿಯಾದ ಮಣ್ಣಿನ ಪದರ, ಬಂಡೆ ಮಧ್ಯವೂ ಮೈಕ್ರೋ ಟ್ಯಾನಲಿಂಗ್‌ ಯಂತ್ರದ ಸಹಾಯದಿಂದ ಒಳಚರಂಡಿ ನಿರ್ಮಿಸಬಹುದಾಗಿದೆ.

ಬೆಂಗಳೂರಿನ ಹೊರ ವಲಯದಲ್ಲಿರುವ ಕೆಲ ಗ್ರಾಮಗಳ ತ್ಯಾಜ್ಯ ನೀರನ್ನು ನೇರವಾಗಿ ಎಸ್‌ಟಿಪಿಗೆ ಹರಿಸಲು ಈ ಯೋಜನೆ ರೂಪಿಸಲಾಗಿದೆ. ಈ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯಗೊಳಿಸಲು ಯೋಜನೆ ರೂಪಿಸಿದ್ದೇವೆ. ಇನ್ನು ಟ್ಯಾನಲಿಂಗ್‌ ಯಂತ್ರದ ಸಹಾಯದಿಂದ ಬೇಕಾದ ಕಡೆಗಳಲ್ಲೂ ಒಳಚರಂಡಿ ಕೊರೆಸಲು ಬಹಳಷ್ಟು ಅನುಕೂಲಗಳಾಗಿವೆ. ಡಾ.ಮನೋಹರ್‌ ಪ್ರಸಾತ್‌, ಜಲಮಂಡಳಿ ಅಧ್ಯಕ್ಷ

ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next